ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಒಪಿ ಗಣೇಶ ಬಳಕೆ ಶಿಕ್ಷಾರ್ಹ| ಜಲಮೂಲ ರಕ್ಷಣೆಗೆ ಕ್ರಮ: ಪರಿಸರ ಇಲಾಖೆ ಆದೇಶ

ತಯಾರಿಕೆ, ಮಾರಾಟ, ವಿಸರ್ಜನೆಗೆ ದಂಡದ ಜತೆ ಜೈಲು ಶಿಕ್ಷೆ
Published 15 ಸೆಪ್ಟೆಂಬರ್ 2023, 23:30 IST
Last Updated 15 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಪ್ಲಾಸ್ಟರ್ ಆಫ್‌ ಪ್ಯಾರಿಸ್‌ನಿಂದ (ಪಿಒಪಿ) ತಯಾರಿಸಿದ ಗಣೇಶ ವಿಗ್ರಹಗಳು, ಭಾರಲೋಹ ಮಿಶ್ರಿತ ರಾಸಾಯನಿಕಯುಕ್ತ ಬಣ್ಣದಿಂದ ಅಲಂಕಾರ ಮಾಡಿದ ಗಣೇಶ ಸೇರಿ ಯಾವುದೇ ವಿಗ್ರಹಗಳ ಉತ್ಪಾದನೆ, ಮಾರಾಟ ಹಾಗೂ ನೀರಿನಲ್ಲಿ ವಿಸರ್ಜನೆ ಮಾಡುವುದನ್ನು ನಿಷೇಧಿಸಿ ಅರಣ್ಯ ಮತ್ತು ಪರಿಸರ ಇಲಾಖೆ ಆದೇಶ ಹೊರಡಿಸಿದೆ.

ಒಂದು ವೇಳೆ ಈ ಆದೇಶ ಉಲ್ಲಂಘಿಸಿ ಪಿಒಪಿ ವಿಗ್ರಹಗಳ ಉತ್ಪಾದನೆ, ಮಾರಾಟ ಮತ್ತು ನೀರಿನಲ್ಲಿ ವಿಸರ್ಜಿಸುವುದು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಈ ಅಪರಾಧಗಳಿಗೆ ಕನಿಷ್ಠ ಒಂದೂವರೆ ವರ್ಷ ಹಾಗೂ ಗರಿಷ್ಠ ಆರು ವರ್ಷಗಳ ಕಾರಾಗೃಹವಾಸ ಶಿಕ್ಷೆ ವಿಧಿಸಲಾಗುತ್ತದೆ.

ಜಲ (ಮಾಲಿನ್ಯ ನಿಯಂತ್ರಣ ಮತ್ತು ನಿವಾರಣೆ) ಕಾಯ್ದೆ 1974ರ ಅನ್ವಯ ಕಲಂ 33(ಎ) ಅಡಿಯಲ್ಲಿ ಈ ರೀತಿಯ ವಿಗ್ರಹಗಳ ತಯಾರಿಕೆ ಘಟಕಗಳನ್ನು ಮುಚ್ಚುವ ಹಾಗೂ ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶವಿದೆ. ಇಂತಹ ಘಟಕಗಳ ಮಾಲೀಕರಿಗೆ ₹1 ಲಕ್ಷಗಳವರೆಗೆ ದಂಡ ಮತ್ತು 5 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು. ಅಲ್ಲದೇ, ಇಂತಹ ವಿಗ್ರಹಗಳನ್ನು ಸಾರ್ವಜನಿಕರು ನೀರಿನ ಮೂಲಗಳಿಗೆ ವಿಸರ್ಜಿಸುವುದು ಕೂಡ ಶಿಕ್ಷಾರ್ಹ ಅಪರಾಧ ಎಂದು ಆದೇಶ ಹೇಳಿದೆ.

‘ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯ ಆದೇಶದ ಪ್ರಕಾರ, ನಮ್ಮ ನೀರಿನ ಮೂಲಗಳನ್ನು ರಕ್ಷಿಸಿಕೊಳ್ಳಬೇಕು. ಪಿಒಪಿ ವಿಗ್ರಹಗಳ ವಿಸರ್ಜನೆಯಿಂದ ಜಲಮೂಲಗಳು ಕಲುಷಿತವಾಗುತ್ತಿವೆ. ಕೇಂದ್ರ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳ ಜಲ ಕಾಯ್ದೆಯಲ್ಲಿನ ಕಲಂಗಳನ್ನು ಬಳಸಿ ಸೂಕ್ತ ಕ್ರಮ ಜರುಗಿಸಬೇಕು’ ಎಂದೂ ಸರ್ಕಾರಗಳಿಗೆ ತಿಳಿಸಿದೆ.

ಇಂತಹ ವಿಗ್ರಹಗಳನ್ನು ನೀರಿನಲ್ಲಿ ವಿಸರ್ಜಿಸಿದಾಗ ಅವು ನೀರಿನಲ್ಲಿ ನಿಧಾನವಾಗಿ ಕರಗುತ್ತವೆ. ಇದರಿಂದ ನೀರಿನಲ್ಲಿರುವ ಆಮ್ಲಜನಕ ಪ್ರಮಾಣ ಇಳಿಕೆಯಾಗುತ್ತದೆ. ಲವಣಾಂಶವು ನೀರಿನಲ್ಲಿ ಶಾಶ್ವತ ಗಡಸುತನ ತರುತ್ತದೆ. ರಾಸಾಯನಿಕಯುಕ್ತ ಬಣ್ಣಗಳಲ್ಲಿರುವ ಭಾರದ ಮತ್ತು ಅಪಾಯಕಾರಿ ಲೋಹಗಳು ನೀರಿನಲ್ಲಿ ಬೆರೆತು  ನೀರಿನ ಮೂಲಗಳು ಕಲುಷಿತಗೊಳ್ಳುತ್ತವೆ. ಜಲಚರಗಳು ಸಾವನ್ನಪ್ಪುತ್ತವೆ ಎಂದೂ ಹೇಳಿದೆ.

ಈ ಆದೇಶವನ್ನು ಅನುಷ್ಠಾನಗೊಳಿಸಲು ಕರ್ನಾಟಕ ರಾಜ್ಯ ಮಾಲಿನ್ಯ ಮಂಡಳಿಯ ಅಧಿಕಾರಿಗಳಿಗೆ ರಾಜ್ಯದ ಎಲ್ಲ ಜಿಲ್ಲಾಡಳಿತಗಳು, ಸ್ಥಳೀಯ ಸಂಸ್ಥೆಗಳು, ಪೊಲೀಸ್‌ ಇಲಾಖೆಗಳು ಸಹಕಾರ ಮತ್ತು ಸಹಭಾಗಿತ್ವ ನೀಡಬೇಕು ಎಂದು ಪರಿಸರ ಇಲಾಖೆ ಮನವಿ ಮಾಡಿದೆ.

ಮೊದಲ ಬಾರಿ ಆದೇಶ: 4 ಎಫ್‌ಐಆರ್

ದಾಖಲು ಹಿಂದಿನ ವರ್ಷಗಳಲ್ಲಿ ಮಾರ್ಗಸೂಚಿ ಹೊರಡಿಸಿ ಎಚ್ಚರಿಕೆ ನೀಡಲಾಗುತ್ತಿತ್ತು. ಈ ಬಾರಿ ಪಿಒಪಿ ಗಣೇಶ ವಿಗ್ರಹಗಳನ್ನು ನಿಷೇಧಿಸುವ ಆದೇಶವನ್ನೇ ಸರ್ಕಾರ ಹೊರಡಿಸಿದೆ. ಬೆಂಗಳೂರು ನಗರದಲ್ಲಿ ನಾಲ್ಕು ಕಡೆಗಳಲ್ಲಿ ಪಿಒಪಿ ವಿಗ್ರಹಗಳ ತಯಾರಿಕೆ ಮಾಡಿದವರ ಮೇಲೆ ಎಫ್‌ಐಆರ್ ದಾಖಲಿಸಲಾಗಿದ್ದು ಒಬ್ಬರ ಮೇಲೆ ಕ್ರಿಮಿನಲ್‌ ಕೇಸ್‌ ದಾಖಲಿಸಲಾಗಿದೆ ಎಂದು ಮೂಲಗಳು ಹೇಳಿವೆ.

* ಪಿಒಪಿ ಗಣೇಶ ವಿಗ್ರಹಗಳ ಮಾರಾಟ, ವಿಸರ್ಜನೆ ಮಾಡಿದರೆ 1ರಿಂದ 6 ವರ್ಷ ವರ್ಷದವರೆಗೆ ಜೈಲು ಶಿಕ್ಷೆ

*ಇಂತಹ ವಿಗ್ರಹಗಳನ್ನು ತಯಾರಿಸುವವರಿಗೆ ₹1 ಲಕ್ಷದವರೆಗೆ ದಂಡ ಮತ್ತು 5 ವರ್ಷ ಜೈಲು ಶಿಕ್ಷೆ

*ತಯಾರಿಕೆ ಘಟಕಗಳನ್ನು ಮುಚ್ಚುವ ಹಾಗೂ ಮುಟ್ಟುಗೋಲು ಹಾಕಲು ಅವಕಾಶ

* ಜಲಮೂಲ ರಕ್ಷಿಸಲು ಎನ್‌ಜಿಟಿ ಆದೇಶ ಪಾಲನೆ

*ನದಿ, ತೊರೆ, ಕೆರೆ, ಕಟ್ಟೆ, ಬಾವಿಗಳಲ್ಲಿ ವಿಗ್ರಹ ವಿಸರ್ಜಿಸುವುದು ಶಿಕ್ಷಾರ್ಹ ಅಪರಾಧ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT