ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಏಕಬಳಕೆ ಪ್ಲಾಸ್ಟಿಕ್‌ ಬಳಸಿದರೆ ದಂಡ

ನಿಷೇಧ ಆದೇಶ ಇಂದಿನಿಂದ ಜಾರಿ: ಕಟ್ಟುನಿಟ್ಟಿನ ಕ್ರಮ
Last Updated 1 ಜುಲೈ 2022, 7:48 IST
ಅಕ್ಷರ ಗಾತ್ರ

ಬೆಂಗಳೂರು: ಏಕ ಬಳಕೆಯ ಪ್ಲಾಸ್ಟಿಕ್‌ ಬಳಸಿದರೆ ಜುಲೈ 1ರಿಂದಲೇ ದಂಡ ವಿಧಿಸಲಾಗುವುದು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.

‘ದೇಶದಾದ್ಯಂತ ಜುಲೈ 1ರಿಂದ ಏಕ ಬಳಕೆಯ ಪ್ಲಾಸ್ಟಿಕ್‌ ನಿಷೇಧ ಆದೇಶ ಜಾರಿಯಾಗಲಿದೆ. ಕರ್ನಾಟಕದಲ್ಲಿ 2016ರಲ್ಲೇ ಈ ಬಗ್ಗೆ ನಿಯಮಗಳನ್ನು ರೂಪಿಸಿ ಏಕಬಳಕೆಯ ಪ್ಲಾಸ್ಟಿಕ್‌ ಬಳಕೆಯನ್ನು ನಿಷೇಧಿಸಲಾಗಿತ್ತು. ಆದರೆ, ಇತರ ರಾಜ್ಯಗಳಲ್ಲಿ ಬಳಕೆಗೆ ಅವಕಾಶ ಕಲ್ಪಿಸಿದ್ದರಿಂದ ಕರ್ನಾಟಕದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ. ಆದರೆ, ಈ ಬಾರಿ ಕಟ್ಟುನಿಟ್ಟಾಗಿ ಜಾರಿಯಾಗಲಿದೆ’ ಎಂದು ಮಂಡಳಿಯ ಅಧ್ಯಕ್ಷ ಡಾ. ಶಾಂತ್‌ ಎ. ತಿಮ್ಮಯ್ಯ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಚಿಲ್ಲರೆ ವ್ಯಾಪಾರಿಗಳು ಈ ಪ್ಲಾಸ್ಟಿಕ್‌ಗಳನ್ನು ಬಳಸಿದರೆ ಮೊದಲ ಬಾರಿ ₹200, ಎರಡನೇ ಬಾರಿ ₹500 ಮತ್ತು ಮೂರನೇ ಬಾರಿ ₹ 1,000 ದಂಡ ವಿಧಿಸಲಾಗುವುದು. ಇದೇ ರೀತಿ ತಯಾರಕರಿಗೆ ಮೊದಲ ಬಾರಿ ₹ 5ಸಾವಿರ, ಎರಡನೇ ಬಾರಿಗೆ ₹10 ಸಾವಿರ ಮತ್ತು ಮೂರನೇ ಬಾರಿಗೆ ₹ 20 ಸಾವಿರ ದಂಡ ವಿಧಿಸಲಾಗುವುದು. ಜತೆಗೆ, ಉತ್ಪಾದನೆ ಮುಂದುವರಿಸಿದರೆ ಪ್ಲಾಸ್ಟಿಕ್‌ಗಳನ್ನು ವಶಪಡಿಸಿಕೊಳ್ಳುವ ಜತೆ ಘಟಕಗಳನ್ನು ಮುಚ್ಚಲು ಕ್ರಮಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

‘2021ರ ಆಗಸ್ಟ್ 12ರಂದು ನಿಷೇಧದ ಅಧಿಸೂಚನೆ ಹೊರಡಿಸಲಾಗಿತ್ತು. ಪರಿಸರ ಸ್ನೇಹಿ ಆಯ್ಕೆಗಳಿಗೆ ಬದಲಾಗಲು ಉದ್ಯಮಗಳಿಗೆ ಸಾಕಷ್ಟು ಸಮಯ ನೀಡಲಾಗಿತ್ತು. ನಿಷೇಧದ ಆದೇಶವನ್ನು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಅನುಷ್ಠಾನಗೊಳಿಸುತ್ತಾರೆ. ಈ ಬಗ್ಗೆಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮಾರ್ಷಲ್‌ಗಳಿಗೆ ಹಾಗೂ ಇತರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ.ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿಗಳ ಮೂಲಕ ಅರಿವು ಮೂಡಿಸುವ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ವಿವರಿಸಿದರು.

‘ಕಳೆದ ಆರು ವರ್ಷಗಳಲ್ಲಿ ಮಾಲಿನ್ಯ ನಿಯಂತ್ರಣದ ನಿಯಮಗಳನ್ನು ಉಲ್ಲಂಘಿಸಿದ 104 ಘಟಕಗಳನ್ನು ಮುಚ್ಚಲು ನಿರ್ದೇಶನ ನೀಡಲಾಗಿದೆ. ಒಂಬತ್ತು ಘಟಕಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡಲಾಗಿದೆ’ ಎಂದರು.

ಯಾವುದಕ್ಕೆ ನಿಷೇಧ?
ಪ್ಲಾಸ್ಟಿಕ್ ಕಡ್ಡಿಯ ಇಯರ್‌ಬಡ್ಸ್, ಪ್ಲಾಸ್ಟಿಕ್ ಕಡ್ಡಿಯ ಬಲೂನ್, ಪ್ಲಾಸ್ಟಿಕ್ ಧ್ವಜ, ಕ್ಯಾಂಡಿ ಕಡ್ಡಿ, ಐಸ್‌ಕ್ರೀಂ ಕಡ್ಡಿ, ಅಲಂಕಾರಕ್ಕೆ ಬಳಸುವ ಥರ್ಮೊಕೊಲ್,ಪ್ಲಾಸ್ಟಿಕ್ ತಟ್ಟೆ, ಲೋಟ,ಪ್ಲಾಸ್ಟಿಕ್‌ ಚಮಚ, ಸ್ಟ್ರಾ, ಟ್ರೇಗಳು,ಪ್ಯಾಕಿಂಗ್‌ಗೆ ಹಾಗೂ ಸಿಹಿತಿಂಡಿಗಳಿಗೆ ಸುತ್ತುವ ಹಾಳೆಗಳು,ಪ್ಲಾಸ್ಟಿಕ್‌ನ ಆಹ್ವಾನಪತ್ರಗಳು,ಸಿಗರೇಟ್ ಪ್ಯಾಕ್‌ ಮೇಲೆ ಸುತ್ತುವ ಸುತ್ತುವ ಹಾಳೆಗಳು, ಕ್ಯಾರಿ ಬ್ಯಾಗ್‌ಗಳು, ಪ್ಲಾಸ್ಟಿಕ್‌ ಬಂಟಿಂಗ್‌ಗಳು, ಪ್ಲಾಸ್ಟಿಕ್‌ ಫ್ಲೆಕ್ಸ್‌, ಡೈನಿಂಗ್‌ ಟೇಬಲ್‌ ಮೇಲೆ ಬಳಸುವ ಪ್ಲಾಸ್ಟಿಕ್‌ ಶೀಟಗಳು.

ಯದುವೀರ ಮಂಡಳಿಯ ರಾಯಭಾರಿ
‘ಮೈಸೂರು ಸಂಸ್ಥಾನದ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ರಾಯಭಾರಿಯನ್ನಾಗಿ ನೇಮಿಸಲಾಗಿದೆ’ ಎಂದು ಡಾ. ಶಾಂತ್‌ ಎ. ತಿಮ್ಮಯ್ಯ ತಿಳಿಸಿದರು.

‘ಜೂನ್‌ 5ರಂದು ಈ ನೇಮಕ ಮಾಡಲಾಗಿದೆ. ಯದುವೀರ ಅವರು ಪರಿಸರ ಸಂರಕ್ಷಣೆ ಮತ್ತು ಪ್ಲಾಸ್ಟಿಕ್‌ ನಿಷೇಧದ ಕುರಿತು ಅರಿವು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT