ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಂವಿಧಾನಿಕ ಹುದ್ದೆ ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಂಡ ಪ್ರಧಾನಿ: ಹರಿಪ್ರಸಾದ್

Published 3 ಜುಲೈ 2024, 8:20 IST
Last Updated 3 ಜುಲೈ 2024, 8:20 IST
ಅಕ್ಷರ ಗಾತ್ರ

ಬೆಂಗಳೂರು: 'ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ' ಎಂದು ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಪ್ರಧಾನಿಯಂಥ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗೆ ಇದು ಶೋಭೆ ತರುವುದಿಲ್ಲ. ತುರ್ತು ಪರಿಸ್ಥಿತಿಯ ಕುರಿತು ಅವರು ನೀಡಿರುವ ಹೇಳಿಕೆಗಳು ರಾಜಕೀಯ ಪ್ರೇರಿತವಾಗಿವೆ ಮತ್ತು ಸತ್ಯಕ್ಕೆ ದೂರವಾಗಿವೆ' ಎಂದರು.

'ಇಂದಿರಾ ಗಾಂಧಿಯವರು ತುರ್ತುಪರಿಸ್ಥಿತಿಯ ಹೇರಿಕೆಗೆ ಕಾರಣವಾದ ಸಂದರ್ಭ ಸಾರ್ವಜನಿಕ ವಲಯದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಲೇ ಇಲ್ಲ. ಹೀಗಾಗಿಯೇ ಈ ಬಗ್ಗೆ ತಪ್ಪು ಕಲ್ಪನೆಗಳು, ಬೇಕಾಬಿಟ್ಟಿಯಾದ ವಿಶ್ಲೇಷಣೆಗಳು ನಡೆಯುತ್ತಲೇ ಇವೆ. ಮುಖ್ಯವಾಗಿ, ತುರ್ತು ಪರಿಸ್ಥಿತಿ ಎಂಬುವುದು ಸಂವಿಧಾನೇತರ ವಿಷಯವಾಗಿರಲಿಲ್ಲ. ತುರ್ತು ಪರಿಸ್ಥಿತಿಯನ್ನು ಹೇರುವುದು ಸಂವಿಧಾನವೇ ಕೊಟ್ಟ ನಿಬಂಧನೆ ಅಥವಾ ಅವಕಾಶವಾಗಿದೆ' ಎಂದರು.

ಸಂಸತ್ ನಲ್ಲಿ ಮಾಡಿದ ಭಾಷಣದಲ್ಲಿ ರಾಹುಲ್ ಗಾಂಧಿ ಅವರನ್ನು ಮೋದಿ ಅವಹೇಳನ ಮಾಡಿದ್ದಾರೆ. ರಾಹುಲ್ ಅವರನ್ನು ಬಾಲಬುದ್ಧಿ, ಬಚ್ಚಾ ಎಂದಿದ್ದಾರೆ. ಈ ಮೂಲಕ ಮಕ್ಕಳನ್ನ ಅವಹೇಳನ ಮಾಡಿದ್ದಾರೆ ಎಂದರು.

ಪ್ರಧಾನಿಯಿಂದ ಕೀಳುಮಟ್ಟದ ಭಾಷಣ: 'ಭಾಷಣದುದ್ದಕ್ಕೂ ದೇಶಕ್ಕೆ ಏನು ಮಾಡುತ್ತೇವೆ ಎಂಬುದನ್ನು ಮೋದಿ ಹೇಳಿಲ್ಲ. ಚೀನಾ ಅತಿಕ್ರಮಣದ ಬಗ್ಗೆ ಮಾತನ್ನಾಡಿಲ್ಲ. ಮಣಿಪುರ ಘಟನೆ ಕುರಿತು ಏನೂ ಮಾತನ್ನಾಡಲಿಲ್ಲ. ಯಾವುದೇ ಪ್ರಧಾನಿ ಇಷ್ಟೊಂದು ಕೀಳುಮಟ್ಟದಲ್ಲಿ ಭಾಷಣ ಮಾಡಿದ್ದನ್ನು ನೋಡಿಲ್ಲ. ಅವರು ಸಂವಿಧಾನಕ್ಕೆ ವಿರುದ್ಧವಾಗಿ ಭಾಷಣ ಮಾಡಿದ್ದಾರೆ ಎಂದು ದೂರಿದರು.

'ಸ್ವಾಮಿ ವಿವೇಕಾನಂದರ ಬಗ್ಗೆ ಭಾಷಣದಲ್ಲಿ ಮೋದಿ ಪ್ರಸ್ತಾಪಿಸಿದ್ದಾರೆ. ವಿವೇಕಾನಂದರ ಹೆಸರು ಹೇಳಲು ಅವರಿಗೆ ನೈತಿಕತೆ ಇಲ್ಲ. ಅವರ ಮಾತುಗಳನ್ನು ನೋಡಿದರೆ ಬುದ್ಧಿಭ್ರಮಣೆ ಆದಂತೆ ಕಾಣುತ್ತದೆ' ಎಂದರು.

ರಾಹುಲ್ ಕ್ಷಮೆ ಯಾಚಿಸಬೇಕೆಂಬಬಿಜೆಪಿ ಅಧ್ಯಕ್ಷ ಬಿ.ವೈ‌ ವಿಜಯೇಂದ್ರ ಅವರ ಹೇಳಿಕೆ ತಿರುಗೇಟು ನೀಡಿದ ಬಿ.ಕೆ ಹರಿಪ್ರಸಾದ್, 'ಮೊದಲು ಅವರನ್ನು ಕ್ಷಮೆ ಕೇಳೋಕೆ ಹೇಳಿ' ಎಂದರು.

'ಪೋಕ್ಸೋ ಕೇಸ್ ನಲ್ಲಿ ಯಾರೋ ಇದ್ದಾರಲ್ಲಾ ಅವರಿಂದ ತೊಂದರೆಗೊಳಗಾದ ಸಂತ್ರಸ್ತೆಯ ತಾಯಿಗೆ ಕ್ಷಮೆ ಕೇಳಬೇಕು. ಆ ತಾಯಿ ನ್ಯಾಯಕ್ಕಾಗಿ ಹೋರಾಡಿದಳು. ಮೊದಲು ಆ ಸಂತ್ರಸ್ತೆಯ ಕ್ಷಮೆ ಕೇಳೋಕೆ ಹೇಳಿ.‌ ದೇಶದ ಮಹಿಳೆಯರ, ಮಕ್ಕಳ ಕ್ಷಮೆ ಕೋರಲಿ. ಆ ತಾಯಿ ಸಾವು ಆಗಿದೆ, ಏನಾಗಿದೆ ನಿಮಗೆ ಗೊತ್ತಲ್ಲವೇ?' ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT