ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾನಗರಿಯಲ್ಲಿ ಮೊಳಗಲಿದೆ ಏಕತೆಯ ಗಾನ: ಇಂದಿನಿಂದ ಯುವಜನೋತ್ಸವ

Last Updated 11 ಜನವರಿ 2023, 19:31 IST
ಅಕ್ಷರ ಗಾತ್ರ

ಧಾರವಾಡ: ವೀರಸನ್ಯಾಸಿ ಸ್ವಾಮಿ ವಿವೇಕಾನಂದರ 160ನೇ ಜನ್ಮದಿನ ಆಚರಣೆಯ ಭಾಗವಾಗಿ ಆಯೋಜನೆ ಯಾಗಿರುವ 26ನೇ ರಾಷ್ಟ್ರೀಯ ಯುವಜನೋತ್ಸವಕ್ಕಾಗಿ ಇಡೀ ದೇಶವೇ ವಿದ್ಯಾ ನಗರಿಯತ್ತ ಮುಖ ಮಾಡಿದೆ.

ಜಮ್ಮು–ಕಾಶ್ಮೀರದಿಂದ ತಮಿಳು ನಾಡಿನವರೆಗೆ, ಗುಜರಾತ್‌ನಿಂದ ಕೋಲ್ಕತ್ತವರೆಗೆ ದೇಶದ ಎಲ್ಲಾ ರಾಜ್ಯ ಗಳ ಯುವ ಪ್ರತಿನಿಧಿಗಳೂ ಹಲವು ನಿರೀಕ್ಷೆ, ಹೊಸ ಭರವಸೆಯೊಂದಿಗೆ ಬಂದಿಳಿದಿದ್ದಾರೆ. ಜ.12ರಿಂದ 16ರವರೆಗೆ ನಡೆಯಲಿರುವ ಯುವ
ಜನೋತ್ಸವಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ಗುರುವಾರ ಸಂಜೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ.

2012ರಲ್ಲಿ ಮಂಗಳೂರು ಹಾಗೂ ಇದೀಗ 2023ರಲ್ಲಿ ಧಾರವಾಡ ಆಯ್ಕೆ ಮೂಲಕ ರಾಜ್ಯ ಎರಡನೇ ಬಾರಿಗೆ ಯುವಜನೋತ್ಸವ ಆಯೋಜಿಸುವ ಅವಕಾಶ ಪಡೆದಿದೆ. ಪ್ರಧಾನಿ ಉದ್ಘಾಟಿಸುತ್ತಿರುವ ಮೊದಲ ಯುವಜನೋತ್ಸವ ಎಂಬ ಗರಿಮೆಯೂ ಈ ಉತ್ಸವಕ್ಕಿದೆ.

ನಗರದ ಐದು ಸಭಾಂಗಣಗಳು, ಏಳು ಕ್ರೀಡಾಂಗಣಗಳು ಸಜ್ಜಾಗಿವೆ. ಕರ್ನಾಟಕ ಕಾಲೇಜು ಮೈದಾನದಲ್ಲಿ ಸ್ಥಾಪಿಸಲಾಗಿರುವ ವೇದಿಕೆಯಲ್ಲಿ ನಿರು ಪಮಾ ರಾಜೇಂದ್ರ, ವಿಜಯಪ್ರಕಾಶ್, ಥೈಕುಡುಮ್ ಬ್ರಿಡ್ಜ್‌ ಬ್ಯಾಂಡ್, ಮೆಮೆ ಖಾನ್ ಖ್ಯಾತನಾಮರ ಸಂಗೀತ ಸಂಜೆ ಕಾರ್ಯಕ್ರಮಕ್ಕೆ ಆಯೋಜನೆಗೊಂಡಿವೆ.

ಜ.15ರಂದು ಬೆಳಿಗ್ಗೆ ಯೋಗಥಾನ್ ಮೂಲಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಯೋಗಾಭ್ಯಾಸ ನಡೆಸಿ ಗಿನ್ನಿಸ್ ದಾಖಲೆ ಮಾಡಲೂ ಸಿದ್ಧತೆ ನಡೆ ದಿದೆ. ಕೇಂದ್ರ ಕ್ರೀಡೆ ಹಾಗೂ ಯುವಜನ ಮಂತ್ರಾಲಯ ಹಾಗೂ ರಾಜ್ಯ ಸರ್ಕಾರದ ಕ್ರೀಡಾ ಇಲಾಖೆ ಸೇರಿ ಒಟ್ಟು ₹20 ಕೋಟಿ ಅನುದಾನ ಈ ಯುವಜನೋತ್ಸವಕ್ಕೆ ನೀಡಿವೆ. ಸ್ಥಳೀಯವಾಗಿಯೂ ದೇಣಿಗೆ ಸಂಗ್ರಹಿಸಲಾಗಿದೆ. ಧಾರವಾಡ ದಲ್ಲಿವಿವೇಕಾನಂದರ ಚಿತ್ರವೇ ಇಲ್ಲದ ಯುವಜನೋತ್ಸವದಲ್ಲಿ ರಾಜಕೀಯ ಮುಖಂಡರ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಸಮಾರಂಭದ ಉದ್ಘಾಟನೆಗೆ ಪ್ರತಿ ಕಾಲೇಜಿನಿಂದ ತಲಾ 100 ವಿದ್ಯಾರ್ಥಿ ಗಳನ್ನು ಕಳುಹಿಸುವುದು ಕಡ್ಡಾಯ ಗೊಳಿಸಿರುವುದು, ಬುಧವಾರ ಸಂಜೆಯವರೆಗೂ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ನೀಡದಿರುವುದೂ ಚರ್ಚೆಗೆ ಗ್ರಾಸವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧಾರವಾಡ ಜಿಲ್ಲಾಡಳಿತ ನೀಡಲು ಸಿದ್ಧಪಡಿಸಿರುವ ಸ್ಮರಣಿಕೆ
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧಾರವಾಡ ಜಿಲ್ಲಾಡಳಿತ ನೀಡಲು ಸಿದ್ಧಪಡಿಸಿರುವ ಸ್ಮರಣಿಕೆ

ಪ್ರಧಾನಿಯ ಗೌರವಕ್ಕೆ ರಾಜ್ಯದ ವಿಶೇಷಗಳು
ಹುಬ್ಬಳ್ಳಿ: ದೆಹಲಿಯಿಂದ ವಿಶೇಷ ವಿಮಾನದಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಗುರುವಾರ ಮಧ್ಯಾಹ್ನ 3.40ಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿ, ಏಳು ಕಿ.ಮೀ. ದೂರದಲ್ಲಿರುವ ರೈಲ್ವೆ ಮೈದಾನಕ್ಕೆ ತೆರಳಲಿದ್ದಾರೆ. ಸಂಜೆ 4ಕ್ಕೆ ವೇದಿಕೆ ಕಾರ್ಯಕ್ರಮ ಆರಂಭವಾಗಿ ಸಂಜೆ 5.15ಕ್ಕೆ ಮುಕ್ತಾಯವಾಗಲಿದ್ದು, ಪ್ರಧಾನಿಯವರು ‌ಅರ್ಧ ಗಂಟೆ ಭಾಷಣ ಮಾಡಲಿದ್ದಾರೆ.

ರಾಜ್ಯಪಾಲ ಥಾವರಚಂದ್‌ ಗೆಹಲೋತ್‌, ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಅನುರಾಗ್ ಠಾಕೂರ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಡಾ. ನಾರಾಯಣಗೌಡ, ಶಂಕರ ಪಾಟೀಲ ಮುನೇನಕೊಪ್ಪ, ಮೇಯರ್‌ ಈರೇಶ ಅಂಚಟಗೇರಿ ಹಾಗೂ ಸ್ಥಳೀಯ ಶಾಸಕರು, ವಿಧಾನಪರಿಷತ್‌ ಸದಸ್ಯರು ಸೇರಿ ವೇದಿಕೆ ಮೇಲೆ 24 ಗಣ್ಯರಿಗೆ ‌ಆಸನಗಳ ವ್ಯವಸ್ಥೆ ಮಾಡಲಾಗಿದೆ.

ಹಾವೇರಿಯ ‌‘ಏಲಕ್ಕಿ ಹಾರ’ ಮತ್ತು ‘ಏಲಕ್ಕಿ ಪೇಟ’ ಹಾಕಿ, ಕಸೂತಿ ಕಲೆಯ ಕೈಮಗ್ಗದ ಶಾಲು ಹೊದಿಸಿ, ಬೀದರ್‌ನ ಬಿದರಿ ಕಲೆಯ ಸ್ವಾಮಿ ವಿವೇಕಾನಂದರ ಮೂರ್ತಿ ಹಾಗೂ ತೇಗದ ಚೌಕಟ್ಟಿನಲ್ಲಿ ವಿನ್ಯಾಸಗೊಳಿಸಲಾದ ಧಾರವಾಡ ಜಿಲ್ಲೆಯ ಗರಗ ಹಾಗೂ ಬೆಂಗೇರಿಯಲ್ಲಿ ತಯಾರಾದ ರಾಷ್ಟ್ರಧ್ವಜವನ್ನು ಪ್ರಧಾನಿಗೆ ನೀಡಿ ಜಿಲ್ಲಾಡಳಿತ ಸನ್ಮಾನಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT