ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಿಎಂ ಉಷಾ’: ರಾಜ್ಯದ 2 ವಿವಿಗೆ ತಲಾ ₹100 ಕೋಟಿ

ವಿಶ್ವವಿದ್ಯಾಲಯಗಳಲ್ಲಿ ಬಹು ಶಿಸ್ತೀಯ ಶಿಕ್ಷಣ, ಸಂಶೋಧನೆಗೆ ಅನುದಾನ ಯೋಜನೆ
Published 19 ಫೆಬ್ರುವರಿ 2024, 0:25 IST
Last Updated 19 ಫೆಬ್ರುವರಿ 2024, 0:25 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಶಿಕ್ಷಣ ಸಚಿವಾಲಯದ ಅಡಿಯಲ್ಲಿರುವ ಉನ್ನತ ಶಿಕ್ಷಣ ಇಲಾಖೆಯ ‘ಪ್ರಧಾನ ಮಂತ್ರಿ ಉಚ್ಚತರ್ ಶಿಕ್ಷಾ ಅಭಿಯಾನ್‌’ (ಪಿಎಂ–ಉಷಾ) ಯೋಜನೆಯ ‘ವಿಶ್ವವಿದ್ಯಾಲಯಗಳಲ್ಲಿ ಬಹುಶಿಸ್ತೀಯ ಶಿಕ್ಷಣ ಮತ್ತು ಸಂಶೋಧನೆ’ (ಎಂಇಆರ್‌ಯು) ಅಡಿ ರಾಜ್ಯದ ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ತಲಾ ₹100 ಕೋಟಿ ಅನುದಾನ ಪಡೆಯಲು ಅರ್ಹತೆ ಪಡೆದಿವೆ.

‘ಪಿಎಂ–ಉಷಾ’ ಯೋಜನೆಗೆ ಅನುಮೋದನೆ ನೀಡುವ ಮಂಡಳಿಯ (ಪಿಎಬಿ) ಸಭೆ ಇತ್ತೀಚೆಗೆ ನಡೆದಿದ್ದು, ಅನುದಾನ ಪಡೆಯಲು ಅರ್ಹತೆ ಪಡೆದಿರುವ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಕೇಂದ್ರ ಉನ್ನತ ಶಿಕ್ಷಣ ಇಲಾಖೆ ಶನಿವಾರ (ಫೆ. 17) ಬಿಡುಗಡೆ ಮಾಡಿದೆ. ಇದೇ ಮೊದಲ ಬಾರಿಗೆ ರಾಜ್ಯದ ಎರಡು ವಿಶ್ವವಿದ್ಯಾಲಯಗಳು ಈ ಯೋಜನೆಯಡಿ ದೊಡ್ಡ ಮೊತ್ತದ ಅನುದಾನ ಪಡೆಯಲು ಅರ್ಹ ಆಗಿವೆ. 

ಈ ಯೋಜನೆಗೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ, ‘ವಿಶ್ವವಿದ್ಯಾಲಯಗಳಲ್ಲಿ ಬಹುಶಿಸ್ತೀಯ ಶಿಕ್ಷಣ ಮತ್ತು ಸಂಶೋಧನೆ’ (ಎಂಇಆರ್‌ಯು), ‘ವಿಶ್ವವಿದ್ಯಾಲಯಗಳ ಬಲವರ್ಧನೆಗೆ ಅನುದಾನ’ (ಜಿಎಸ್‌ಯು) ಮತ್ತು ‘ಹೊಸ ಮಾದರಿಯ ಪದವಿ ಕಾಲೇಜುಗಳು’ (ಎನ್‌ಎಂಡಿಸಿ) ಈ ಮೂರು ವಿಭಾಗಗಳಲ್ಲಿ ಬಂದ ಪ್ರಸ್ತಾವಗಳನ್ನು ಪರಿಗಣಿಸಿ ಪಿಎಬಿ ಅನುದಾನ ಹಂಚಿಕೆ ಮಾಡುತ್ತಿದೆ. ಪ್ರಸಕ್ತ ಸಾಲಿನಲ್ಲಿ ಒಟ್ಟು ₹30 ಸಾವಿರ ಕೋಟಿಯನ್ನು ಈ ಯೋಜನೆಗಳಿಗೆ ಮೀಸಲಿಡಲಾಗಿದೆ. ದೇಶದ 1,472 ವಿಶ್ವವಿದ್ಯಾಲಯಗಳ ಪೈಕಿ ಕೇವಲ 26 ವಿಶ್ವವಿದ್ಯಾಲಯಗಳು ಮಾತ್ರ ತಲಾ ₹100 ಕೋಟಿ ಅನುದಾನ ಪಡೆಯಲು ಆಯ್ಕೆ ಆಗಿವೆ.

ಈ ಯೋಜನೆಯ ‘ವಿಶ್ವವಿದ್ಯಾಲಯಗಳ ಬಲವರ್ಧನೆಗೆ ಅನುದಾನ’ (ಜಿಎಸ್‌ಯು) ವಿಭಾಗದ ಅಡಿ ಬೆಂಗಳೂರಿನ ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯ, ಮಂಗಳೂರು ವಿಶ್ವವಿದ್ಯಾಲಯ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಕಲಬುರಗಿಯ ಗುಲ್ಬರ್ಗಾ ವಿಶ್ವವಿದ್ಯಾಲಯವು ಅನುದಾನ ಪಡೆಯಲು ಅರ್ಹತೆ ಪಡೆದಿವೆ.

ಕೇವಲ 90 ಪ್ರಸ್ತಾವ: ಹೊಸ ಮಾದರಿಯ ಪದವಿ ಕಾಲೇಜುಗಳು (ಎನ್‌ಎಂಡಿಸಿ) ವಿಭಾಗದಲ್ಲಿ ಅನುದಾನ ಪಡೆಯಲು 90 ಪ್ರಸ್ತಾವಗಳು ಮಾತ್ರ ಪಿಎಬಿಗೆ ಸಲ್ಲಿಕೆ ಆಗಿದ್ದವು. ಯಾವುದೇ ಉನ್ನತ ಶಿಕ್ಷಣ ಸಂಸ್ಥೆ ಇಲ್ಲದ ಜಿಲ್ಲೆಗಳಲ್ಲಿ ಮಾತ್ರ ಹೊಸ ಮಾದರಿಯ ಪದವಿ ಕಾಲೇಜುಗಳಿಗೆ  ಈ ಯೋಜನೆಯಡಿ ಅನುದಾನ ನೀಡಲಾಗುವುದು ಎಂಬ ಷರತ್ತು ವಿಧಿಸಲಾಗಿತ್ತು. ಸಲ್ಲಿಕೆಯಾಗಿದ್ದ ಪ್ರಸ್ತಾವಗಳೆಲ್ಲ ಈ ಷರತ್ತಿನ ಕಾರಣಕ್ಕೆ ಅನರ್ಹಗೊಂಡಿವೆ. ಹೀಗಾಗಿ, ಈ ವಿಭಾಗದಲ್ಲಿ ಅನುದಾನ ಪಡೆಯಲು ನಿಗದಿಪಡಿಸಿರುವ ಮಾನದಂಡಗಳನ್ನು ಪರಿಷ್ಕರಿಸಲು ಪಿಎಬಿ ನಿರ್ಧರಿಸಿದೆ. 

ಅನುದಾನ ಸಮರ್ಪಕ ಬಳಕೆ: ‘ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಘೋಷಣೆಯಾಗಿರುವ ಅನುದಾನದಲ್ಲಿ ₹50 ಕೋಟಿ ಪ್ರಸ್ತಾವಿತ ಹೊಸ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಿಗಾಗಿ ಶೈಕ್ಷಣಿಕ ಕಟ್ಟಡ, ಹಾಸ್ಟೆಲ್‌ಗಳ ನಿರ್ಮಾಣ, ₹30 ಕೋಟಿಯನ್ನು ಕ್ಯಾಂಪಸ್ ಉನ್ನತೀಕರಣ, ಕ್ರೀಡಾ ಸೌಲಭ್ಯಗಳ ಹೆಚ್ಚಳ, ಸ್ಮಾರ್ಟ್ ಕ್ಲಾಸ್‌, ಆರೋಗ್ಯ ಕೇಂದ್ರದ ಉನ್ನತೀಕರಣ, ಮ್ಯೂಸಿಯಂ ಸಂಪನ್ಮೂಲಗಳ ಡಿಜಿಟಲೀಕರಣ ಮತ್ತು ಪರಿಸರ ಸಂರಕ್ಷಣೆ ಮತ್ತು ಹಸಿರು ಕ್ಯಾಂಪಸ್ ಚಟುವಟಿಕೆಗೆ ಬಳಸಲಾಗುವುದು. ಉಳಿದ ₹20 ಕೋಟಿಯನ್ನು ಸುಧಾರಿತ ವೈಜ್ಞಾನಿಕ ಉಪಕರಣಗಳ ಖರೀದಿ ಮತ್ತು ವಿವಿಧ ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ’ ಎಂದು ಕುಲಸಚಿವ (ಆಡಳಿತ) ಶೇಕ್ ಲತೀಫ್ ತಿಳಿಸಿದರು.

‘ಪಿಎಂ ಉಷಾ’ ಯೋಜನೆಯಡಿ ₹ 100 ಕೋಟಿ ಘೋಷಣೆಯಾಗಿರುವುದು ಹೆಮ್ಮೆಯ ವಿಷಯ. ವಿದ್ಯಾರ್ಥಿಗಳ ಶೈಕ್ಷಣಿಕ ಏಳಿಗೆ ಸಂಶೋಧನೆ ಮತ್ತು ಅಭಿವೃದ್ಧಿಗೆ ಈ ಅನುದಾನವನ್ನು ಸಮರ್ಪಕವಾಗಿ ಬಳಸುತ್ತೇವೆ

-ಪ್ರೊ. ಜಯಕರ ಎಸ್.ಎಂ. ಕುಲಪತಿ ಬೆಂಗಳೂರು ವಿವಿ 

ಸೇಂಟ್‌ ಜೋಸೆಫ್‌ ಕಾಲೇಜು: ₹55 ಕೋಟಿ ರದ್ದು

ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಈ ಹಿಂದೆ ‘ರಾಷ್ಟ್ರೀಯ ಉಚ್ಚತರ್ ಶಿಕ್ಷಾ ಅಭಿಯಾನ’ (ರೂಸಾ) ಅಡಿ ಅನುದಾನ ನೀಡುತ್ತಿತ್ತು. ಅದನ್ನು ‘ಪಿಎಂ–ಉಷಾ’ ಎಂದು ಮರುನಾಮಕರಣ ಮಾಡಲಾಗಿದೆ. ಈ ಹಿಂದೆ ರೂಸಾ–1 ಮತ್ತು ರೂಸಾ–2ರ ಅಡಿ ಅನುಮೋದನೆ ನೀಡಿದ್ದ 144 ಯೋಜನೆಗಳನ್ನು ಇತ್ತೀಚೆಗೆ ನಡೆದ ಪಿಎಬಿ (ಯೋಜನೆ ಅನುಮೋದನೆ ಮಂಡಳಿ) ರದ್ದುಪಡಿಸಿದೆ. ಹಲವು ಬಾರಿ ಪರಿಶೀಲನೆ ನಡೆಸಿದ ಬಳಿಕವೂ ಸೂಕ್ತ ಸಮಯದಲ್ಲಿ ಕಾಮಗಾರಿ ಆರಂಭವಾಗದ ಕಾರಣ ರೂಸಾ ಯೋಜನೆಯಡಿ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ. ಅಸ್ವಿತ್ತದಲ್ಲಿರುವ ಸ್ವಾಯತ್ತ ಕಾಲೇಜು ವಿಶ್ವವಿದ್ಯಾಲಯವಾಗಿ ಮೇಲ್ದರ್ಜೆಗೇರಿದ ಕಾರಣಕ್ಕೆ ರೂಸಾ–2 ಯೋಜನೆಯಡಿ ಬೆಂಗಳೂರಿನ ಸೇಂಟ್‌ ಜೋಸೆಫ್‌ ಕಾಲೇಜಿಗೆ ₹55 ಕೋಟಿ ಮಂಜೂರು ಮಾಡಲಾಗಿತ್ತು. ರದ್ದುಗೊಂಡ 144 ಯೋಜನೆಗಳಲ್ಲಿ ಇದೂ ಸೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT