ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಎಸ್‌ವೈ ಪ್ರಕರಣ | ರಾಜ್ಯ ಸರ್ಕಾರದ ದ್ವೇಷ ರಾಜಕಾರಣದ ಪಾತ್ರ ಗೊತ್ತಿಲ್ಲ: ಶೋಭಾ

Published 14 ಜೂನ್ 2024, 15:43 IST
Last Updated 14 ಜೂನ್ 2024, 15:43 IST
ಅಕ್ಷರ ಗಾತ್ರ

ಬೆಂಗಳೂರು: ಬಿ.ಎಸ್‌.ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪೋಕ್ಸೊ ಪ್ರಕರಣದಲ್ಲಿ ರಾಜ್ಯ ಸರ್ಕಾರದ ದ್ವೇಷ ರಾಜಕಾರಣದ ಪಾತ್ರ ಇದೆಯೇ ಎಂಬುದು ಗೊತ್ತಿಲ್ಲ. ಆದರೆ ಸರ್ಕಾರದ ನಡೆಯನ್ನು ಜನ ಗಮನಿಸುತ್ತಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಶುಕ್ರವಾರ ಬೆಂಗಳೂರಿಗೆ ಬಂದ ಅವರು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

‘ಈ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ನನಗೆ ಗೊತ್ತಿಲ್ಲ. ಮಾಧ್ಯಮಗಳ ಮೂಲಕ ನೋಡಿದೆ. ಯಡಿಯೂರಪ್ಪ ಅವರ ದೀರ್ಘ ಕಾಲದ ರಾಜಕಾರಣ ನೋಡಿದ್ದೇನೆ. ಇಂತಹ ಆರೋಪಗಳು ಯಾವತ್ತೂ ಕೇಳಿ ಬಂದಿರಲಿಲ್ಲ’ ಎಂದು ಹೇಳಿದರು.

ಯಡಿಯೂರಪ್ಪ ವಿರುದ್ಧ ಹೊರಡಿಸಿದ್ದ ವಾರೆಂಟ್‌ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಹಿಂದೆ ಎಂದೂ ಬಾರದಿದ್ದ ಪ್ರಕರಣಗಳು ಈಗ ಯಾಕೆ ಬರುತ್ತಿವೆ? ನ್ಯಾಯಾಲಯ ಖಂಡಿತಾ ನೆಲದ ಕಾನೂನು ಎತ್ತಿ ಹಿಡಿಯಲಿದೆ. ಕಾಂಗ್ರೆಸ್‌ ಸರ್ಕಾರ ಎಲ್ಲರ ಮೇಲೆ ಕೇಸ್‌ ಹಾಕುತ್ತಿರುವುದನ್ನೂ ಜನ ಗಮನಿಸುತ್ತಿದ್ದಾರೆ’ ಎಂದರು.

ದರ್ಶನ್‌ಗೆ ಸರ್ಕಾರದ ರಕ್ಷಣೆ?:

‘ನಟ ದರ್ಶನ್‌ ಕಾಂಗ್ರೆಸ್‌ ಪರ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದರು. ಆ ಕಾರಣಕ್ಕಾಗಿ ಶಾಮಿಯಾನ ಹಾಕಿ ರಕ್ಷಣೆ ಮಾಡುತ್ತಿದ್ದಾರಾ?  ಆರೋಪಿಗಳು ಇರುವ ಠಾಣೆಗೆ ರಕ್ಷಣೆ ನೀಡಲಾಗಿದೆ. ಜನರಿಗೊಂದು ಕಾನೂನು, ದೊಡ್ಡವರಿಗೊಂದು ಕಾನೂನಾ’ ಎಂದು ಶೋಭಾ ಪ್ರಶ್ನಿಸಿದರು.

‘ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಯಾರಿಗೂ ರಕ್ಷಣೆ ಇಲ್ಲವಾಗಿದೆ. ನಿರಂತರ ಕೊಲೆ, ಅತ್ಯಾಚಾರಗಳು ನಡೆಯುತ್ತಿವೆ. ಸರ್ಕಾರ ಕೊಲೆಗಡುಕರ ಪರವಾಗಿ ಇದೆ. ಕೊಲೆಗಡುಕರಿಗೆ ರಾಜ್ಯದಲ್ಲಿ ಕಾನೂನು, ಪೊಲೀಸರ ಭಯವೇ ಇಲ್ಲದಂತಾಗಿದೆ. ಕಾಂಗ್ರೆಸ್‌ ಕಾರ್ಯಕರ್ತರಿಗೊಂದು ಕಾನೂನು ಉಳಿದವರಿಗೊಂದು ಕಾನೂನು ಎನ್ನುವ ಸಂದೇಶವನ್ನು ಸರ್ಕಾರ ನೀಡಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT