ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಾತಿಗಣತಿ ವರದಿ ಅಂಗೀಕರಿಸಿ: ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಆಗ್ರಹ

Published 27 ಜೂನ್ 2024, 16:17 IST
Last Updated 27 ಜೂನ್ 2024, 16:17 IST
ಅಕ್ಷರ ಗಾತ್ರ

ಬೆಂಗಳೂರು: ‘ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಎಚ್‌. ಕಾಂತರಾಜ ಅವರ ಅವಧಿಯಲ್ಲಿ ನಡೆದಿದ್ದ, ಈಗಾಗಲೇ ಸರ್ಕಾರಕ್ಕೆ ಸಲ್ಲಿಕೆಯಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯನ್ನು (ಜಾತಿ ಜನಗಣತಿ) ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಂಡಿಸಿ, ಅಂಗೀಕರಿಸಿ ಜಾರಿಗೊಳಿಸಬೇಕು’ ಎಂದು ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಆಗ್ರಹಿಸಿದೆ.

ಜಂಟಿ ಸುದ್ಧಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಒಕ್ಕೂಟ‌ದ ಪ್ರಧಾನ ಸಂಚಾಲಕರ ಕೆ.ಎಂ. ರಾಮಚಂದ್ರಪ್ಪ, ಸಂಚಾಲಕರಾದ ಮಾವಳ್ಳಿ ಶಂಕರ್ ಮತ್ತು ಎನ್. ಅನಂತನಾಯಕ್, ‘ದೇವರಾಜು ಅರಸು ಅಭಿವೃದ್ಧಿ ನಿಗಮಕ್ಕೆ ₹ 1,000 ಕೋಟಿ ಅನುದಾನ ನೀಡಬೇಕು. ಎಸ್‌ಸಿ, ಎಸ್‌ಟಿ ಆಯೋಗಕ್ಕೆ ಅಧ್ಯಕ್ಷರು, ಸದಸ್ಯರನ್ನು ನೇಮಿಸಬೇಕು. ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿರುವ ನಿಗಮಗಳಿಗೆ ಕನಿಷ್ಠ ತಲಾ ₹ 100 ಕೋಟಿ ಅನುದಾನ ನೀಡಬೇಕು’ ಎಂದು ಆಗ್ರಹಿಸಿದರು.

‘ರಾಜ್ಯದಲ್ಲಿ ಆರಂಭವಾಗಿರುವ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ (ಕೆಪಿಎಸ್‌) ಆಂಗ್ಲ ಮಾಧ್ಯಮ ತರಗತಿಗಳನ್ನು ಆರಂಭಿಸಿರುವುದು ಸ್ವಾಗತಾರ್ಹ. ಈ ಶಾಲೆಗಳಿಗೆ ಮೂಲಸೌಲಭ್ಯ ಒದಗಿಸಿ, ಗುಣಮಟ್ಟದ ಶಿಕ್ಷಣ ನೀಡಲು ಕ್ರಮ ವಹಿಸಬೇಕು. ಈ ಶಾಲೆಗಳ ವಿರುದ್ಧ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಏಕಪಕ್ಷೀಯ ಹೇಳಿಕೆ ನೀಡಿ, ಭಾಷಾ ಮಾಧ್ಯಮ ಗೊಂದಲ ಸೃಷ್ಟಿಸುವುದನ್ನು ನಿಲ್ಲಿಸಬೇಕು’ ಎಂದು ಒತ್ತಾಯಿಸಿದರು.

‘ನಿಗಮ, ಮಂಡಳಿ, ಪ್ರಾಧಿಕಾರಗಳ ನೇಮಕಾತಿಯಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ, ಅಲ್ಪಸಂಖ್ಯಾತ, ದಮನಿತ ಸಮುದಾಯಗಳಿಗೆ ಪ್ರಾತಿನಿಧ್ಯ ಹಾಗೂ ಸಾಮಾಜಿಕ ನ್ಯಾಯ ಒದಗಿಸಬೇಕು. ಹೊರಗುತ್ತಿಗೆ ನೇಮಕಾತಿಗಳಲ್ಲಿ 20 ನೌಕರರ ನೇಮಕಾತಿ ಸಂದರ್ಭದಲ್ಲಿ ಮಾತ್ರ ಮೀಸಲಾತಿ ನೀಡಬೇಕೆಂಬ ‌ಷರತ್ತು ತೆಗೆದು ಹಾಕಬೇಕು’ ಎಂದೂ ಆಗ್ರಹಿಸಿದರು.

‘ಶೋಷಿತ ಸಮುದಾಯದವರ ಅಹವಾಲುಗಳಿಗೆ ಕೆಲವು ಸಚಿವರುಗಳು ಸ್ಪಂದಿಸುತ್ತಿಲ್ಲ. ಅಂತಹ ಸಚಿವರು, ಶಾಸಕರುಗಳಿಗೆ ಮುಖ್ಯಮಂತ್ರಿ ತಿಳಿವಳಿಕೆ ನೀಡಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT