ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಮಾನ ವಿಳಂಬ: ಪೋರ್ಟ್‌ಬ್ಲೇರ್‌ನಲ್ಲಿ ಕರ್ನಾಟಕದ ಪ್ರವಾಸಿಗರು ಅತಂತ್ರ

Published 27 ಮೇ 2024, 16:15 IST
Last Updated 27 ಮೇ 2024, 16:15 IST
ಅಕ್ಷರ ಗಾತ್ರ

ಬೆಂಗಳೂರು: ಅಂಡಮಾನ್‌ ಮತ್ತು ನಿಕೋಬಾರ್ ದ್ವೀಪಕ್ಕೆ ಪ್ರವಾಸ ತೆರಳಿದ್ದ ಕರ್ನಾಟಕದ ಸುಮಾರು 150 ಮಂದಿ ಪ್ರವಾಸಿಗರು ನಿಗದಿತ ವೇಳೆಗೆ ವಿಮಾನ ಸೇವೆ ಲಭ್ಯವಾಗದ ಕಾರಣ ಪೋರ್ಟ್‌ ಬ್ಲೇರ್ ವಿಮಾನನಿಲ್ದಾಣದಲ್ಲಿ ಅತಂತ್ರರಾಗಿದ್ದಾರೆ.

ಈ ಪ್ರವಾಸಿಗರು ಮೇ 22ರಂದು ಬೆಂಗಳೂರಿನಿಂದ ‘ವಿಸ್ತಾರ’ ವಿಮಾನದಲ್ಲಿ ಬಂದಿದ್ದರು. ಸೋಮವಾರ (ಮೇ 27) ಮಧ್ಯಾಹ್ನ 1.30ಗೆ ಇದೇ ಸಂಸ್ಥೆಯ ವಿಮಾನದಲ್ಲಿ ವಾಪಸಾಗಬೇಕಿತ್ತು. ಆದರೆ, ಸಂಜೆಯವರೆವಿಗೂ ವಿಮಾನ ಸೇವೆ ಲಭ್ಯವಾಗಿರಲಿಲ್ಲ.

ಪೂರ್ವನಿಗದಿಯಂತೆ ವಿಮಾನ ಏರಲು,ಬೆಳಿಗ್ಗೆ 11 ಗಂಟೆ ವೇಳೆಗೆ ನಿಲ್ದಾಣಕ್ಕೆ ಬಂದಿದ್ದೆವು. ಚೆಕ್‌ ಇನ್ ಆಗಿ ಬೋರ್ಡಿಂಗ್ ಪಾಸ್ ಕೂಡಾ ಕೊಟ್ಟಿದ್ದರು. ಸಂಜೆಯಾದರೂ ವಿಮಾನ ಬಂದಿರಲಿಲ್ಲ. ಸಮರ್ಪಕ ಮಾಹಿತಿ ನೀಡಿರಲಿಲ್ಲ. ಊಟ, ನೀರಿನ ವ್ಯವಸ್ಥೆಯನ್ನು ಸಂಬಂಧಿತ ಸಂಸ್ಥೆಯವರು ಮಾಡಲಿಲ್ಲ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದರು.

‘ತಾಂತ್ರಿಕ ಕಾರಣದಿಂದ ವಿಮಾನ ನಿಲ್ದಾಣದಲ್ಲಿ ಇಳಿದಿಲ್ಲ ಎಂದು ಸ್ಥಳೀಯ ಸಿಬ್ಬಂದಿ ತಿಳಿಸುತ್ತಿದ್ದಾರೆ. ಸಂಜೆ 7 ಗಂಟೆಯಾದರೂ ವಿಮಾನ ಬರುವ ಸೂಚನೆಗಳು ಇಲ್ಲ. ನಿಲ್ದಾಣದಲ್ಲಿಯೇ ಉಳಿಯಲು ಅವಕಾಶವಿಲ್ಲ ಎಂದು ಅಧಿಕಾರಿಗಳು ತಿಳಿಸುತ್ತಿದ್ದಾರೆ. ಇದರಿಂದ ಆತಂಕವಾಗಿದೆ ಎಂದು ಮೈಸೂರಿನ ನಿವೃತ್ತ ಪ್ರಾಂಶುಪಾಲರಾದ ಪರಮೇಶ್ವರ ಅಳಲು ತೋಡಿಕೊಂಡರು.

ಮೈಸೂರಿನ 9 ಕುಟುಂಬಗಳ 18 ಜನರಿದ್ದಾರೆ. ಚಿತ್ರದುರ್ಗ, ದಾವಣಗೆರೆ, ಬೆಂಗಳೂರಿನ ಪ್ರವಾಸಿಗರು ಸೇರಿ ಕರ್ನಾಟಕದ ಸುಮಾರು 180 ಜನರಿದ್ದಾರೆ. ವಿಮಾನ ಸೇವೆ ಲಭ್ಯವಾಗುವ ಕುರಿತು ಸಿಬ್ಬಂದಿಗಳಿಂದ ಖಚಿತ ಮಾಹಿತಿ ಸಿಗುತ್ತಿಲ್ಲ ಎಂದು ವಿವರಿಸಿದರು.

ಇಂಡಿಗೊ ಮತ್ತು ಏರ್ ಇಂಡಿಯಾ ವಿಮಾನಗಳು ನಿಲ್ದಾಣದಲ್ಲಿ ಇಳಿದಿವೆ. ವಾತಾವರಣವು ತಿಳಿಯಾಗಿದೆ. ‘ವಿಸ್ತಾರ’ದ ಒಂದು ವಿಮಾನ ಬಂದಿತಾದರೂ ಆಗಸದಲ್ಲಿಯೇ ಎರಡು ಸುತ್ತು ಹಾಕಿ, ಚೆನ್ನೈಗೆ ಮರಳಿದೆ ಎಂದು ಮಾಹಿತಿ ನೀಡಿದರು.

ವಿಮಾನ ಸೇವೆಯು ವಿಳಂಬವಾದ ಕಾರಣ ನಿಲ್ದಾಣದ ಸ್ಥಳೀಯ ಅಧಿಕಾರಿಗಳು ಬ್ರೆಡ್‌ ತರಿಸಿಕೊಟ್ಟಿದ್ದಾರೆ. ಪ್ರವಾಸಿಗರಲ್ಲಿ 55–60 ವರ್ಷ ಮೀರಿದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT