ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವನಸಮುದ್ರದಲ್ಲಿ ವಿದ್ಯುತ್‌ ಉತ್ಪಾದನೆ ಹೆಚ್ಚಳ

ಕಾವೇರಿಯಲ್ಲಿ ನೀರಿನ ಹರಿವು ಹೆಚ್ಚಳ, ಜಲವಿದ್ಯುತ್‌ ಕೇಂದ್ರಗಳಿಗೆ ಕಳೆ
Last Updated 29 ಜುಲೈ 2018, 19:30 IST
ಅಕ್ಷರ ಗಾತ್ರ

ಮಂಡ್ಯ: ಕಳೆದ ನಾಲ್ಕು ವರ್ಷಗಳಿಂದ ನೀರಿನ ಕೊರತೆ ಎದುರಿಸುತ್ತಿದ್ದ ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರ ಹಾಗೂ ಶಿಂಷಾ ಜಲವಿದ್ಯುತ್‌ ಕೇಂದ್ರಗಳಲ್ಲಿ ಈಗ ವಿದ್ಯುತ್‌ ಉತ್ಪಾದನೆ ಹೆಚ್ಚಾಗಿದೆ. ಕಬಿನಿ ಹಾಗೂ ಕೆಆರ್‌ಎಸ್‌ ಜಲಾಶಯದಿಂದ 50 ಸಾವಿರ ಕ್ಯುಸೆಕ್‌ಗೂ ಹೆಚ್ಚು ನೀರು ಹರಿಯುತ್ತಿರುವುದು ಇದಕ್ಕೆ ಕಾರಣ.

ಏಷ್ಯಾ ಖಂಡದಲ್ಲೇ ಮೊದಲ ಬಾರಿಗೆ ಬೆಳಕು ನೀಡಿದ ಐತಿಹಾಸಿಕ ಶಿವನಸಮುದ್ರ ಜಲವಿದ್ಯುತ್‌ ಉತ್ಪಾದನಾ ಕೇಂದ್ರ 42 ಮೆಗಾವಾಟ್‌ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಶಿಂಷಾ ಜಲವಿದ್ಯುತ್‌ ಉತ್ಪಾದನಾ ಕೇಂದ್ರ 17.20 ಮೆಗಾವಾಟ್‌ ಸಾಮರ್ಥ್ಯ ಹೊಂದಿದೆ. 2014ರಿಂದ ಕಾವೇರಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾದ ಕಾರಣ ವಿದ್ಯುತ್‌ ಉತ್ಪಾದನೆಯ ಪ್ರಮಾಣ ತೀವ್ರ ಕುಸಿತ ಕಂಡಿತ್ತು. ಶಿವನಸಮುದ್ರ ಘಟಕ 2016–17ನೇ ಸಾಲಿನಲ್ಲಿ ಕೇವಲ 143 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸಿತ್ತು. ಇದು ಕಳೆದ 10 ವರ್ಷಗಳಲ್ಲಿ ಅತೀ ಕಡಿಮೆ ಪ್ರಮಾಣವಾಗಿತ್ತು.

ಈ ಬಾರಿಯ ಮುಂಗಾರು ಉತ್ತಮವಾಗಿದ್ದು ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ. 2017–18ನೇ ಸಾಲಿನಲ್ಲಿ ಇಲ್ಲಿಯವರೆಗೆ ಈಗಾಗಲೇ 225 ಮೆಗಾವಾಟ್‌ ವಿದ್ಯುತ್‌ ಉತ್ಪಾದನೆಯಾಗಿದೆ. ಏಪ್ರಿಲ್‌ನಲ್ಲಿ 4 ಮೆಗಾವಾಟ್‌ ಇದ್ದ ಉತ್ಪಾದನೆ ಜೂನ್‌ ತಿಂಗಳಲ್ಲಿ 16 ಮೆಗಾವಾಟ್‌ಗೇರಿದೆ. ಜುಲೈನಲ್ಲಿ ಉತ್ಪಾದನೆ ಪ್ರಮಾಣ 20 ಮೆಗಾವಾಟ್‌ ಮೀರಿದೆ. ಶಿಂಷಾ ಘಟಕದಲ್ಲಿ ಮೇನಲ್ಲಿ 1 ಮೆಗಾವಾಟ್‌ ಇದ್ದ ವಿದ್ಯುತ್‌ ಉತ್ಪಾದನೆ ಜೂನ್‌ ತಿಂಗಳಲ್ಲಿ 5 ಮೆಗಾವಾಟ್‌ಗೇರಿದೆ.

‘ಮಳೆ ಇಲ್ಲದೆ ನೀರಿನ ಹರಿವು ಕಡಿಮೆಯಾಗಿ ಕಳೆದ ನಾಲ್ಕು ವರ್ಷಗಳಿಂದ ನಾಲ್ಕು ಯಂತ್ರ (ಟರ್ಬೈನ್‌)ಗಳನ್ನು ಓಡಿಸುವುದೇ ಕಷ್ಟವಾಗಿತ್ತು. ಈಗ ಎರಡೂ ಘಟಕಗಳ 12 ಯಂತ್ರಗಳು ಚಾಲನೆಯಲ್ಲಿವೆ. ನೀರಿನ ಹರಿವು ಹೆಚ್ಚಿದೆ ಎಂಬ ಮಾತ್ರಕ್ಕೆ ಸಾಮರ್ಥ್ಯಕ್ಕಿಂತ ಹೆಚ್ಚಿನ ವಿದ್ಯುತ್‌ ಉತ್ಪಾದನೆ ಮಾಡಲು ಸಾಧ್ಯವಿಲ್ಲ’ ಎಂದು ಶಿವನಸಮುದ್ರ ಮತ್ತು ಶಿಂಷಾ ಜಲವಿದ್ಯುತ್‌ ಉತ್ಪಾದನಾ ಕೇಂದ್ರಗಳನ್ನು ನಿರ್ವಹಣೆ ಮಾಡುವ ಕೆಪಿಸಿಎಲ್‌ನ ಕಾರ್ಯಪಾಲಕ ಎಂಜಿನಿಯರ್‌ ಸಿದ್ದಪ್ಪಸ್ವಾಮಿ ಹೇಳಿದರು.

ಹೊಸ ಘಟಕ ಸ್ಥಾಪಿಸುವ ಪ್ರಸ್ತಾವ: ನದಿಯಲ್ಲಿ ನೀರಿನ ಹರಿವು ಅಗತ್ಯಕ್ಕಿಂತ ಹೆಚ್ಚಾಗಿದ್ದಾಗ ಮಾತ್ರ ಹೆಚ್ಚುವರಿ ವಿದ್ಯುತ್‌ ಉತ್ಪಾದನೆ ಮಾಡಲು ಶಿವನಸಮುದ್ರದಲ್ಲಿ 345 ಮೆಗಾವಾಟ್‌ ಸಾಮರ್ಥ್ಯದ ಇನ್ನೊಂದು ಜಲವಿದ್ಯುತ್‌ ಉತ್ಪಾದನಾ ಘಟಕ (ಸೀಸನಲ್‌ ಪ್ಲಾಂಟ್‌) ಸ್ಥಾಪಿಸುವ ಪ್ರಸ್ತಾವ ಸರ್ಕಾರದ ಮುಂದಿದೆ. ಈ ಘಟಕ ನಿರ್ಮಾಣಕ್ಕೆ ₹ 2 ಸಾವಿರ ಕೋಟಿ ವೆಚ್ಚದ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿದೆ. ಈಗಾಗಲೇ ಸರ್ವೆ ಕಾರ್ಯವೂ ಮುಗಿದಿದ್ದು ಪರಿಸರ ಇಲಾಖೆ ಅನುಮೋದನೆ ಸಿಗಬೇಕಾಗಿದೆ.

‘ಇತ್ತೀಚೆಗಷ್ಟೇ ಇಂಧನ ಇಲಾಖೆ ಅಧಿಕಾರಿಗಳು ಶಿವನಸಮುದ್ರಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಕಾರ್ಯ ಯೋಜನೆ ರೂಪಿಸಲಾಗುತ್ತಿದೆ. ಕಾವೇರಿ ನದಿ ವಿಚಾರ ಕರ್ನಾಟಕ ಮತ್ತು ತಮಿಳುನಾಡು ನಡುವಿನ ವಿವಾದಿತ ವಿಷಯವಾಗಿದ್ದು ಅದರ ಬಗ್ಗೆಯೂ ಸರ್ಕಾರ ಪರಿಶೀಲಿಸುತ್ತಿದೆ’ ಎಂದು ಕೆಪಿಸಿಎಲ್‌ ಅಧೀಕ್ಷಕ ಎಂಜಿನಿಯರ್‌ ಎಸ್‌.ಶಾಲಿನಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT