ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇವಣ್ಣ ಪ್ರಕರಣದ ಹಿಂದಿರುವ ತಿಮಿಂಗಿಲ ಯಾರು?: ಕುಮಾರಸ್ವಾಮಿ ಪ್ರಶ್ನೆ

Published 14 ಮೇ 2024, 13:08 IST
Last Updated 14 ಮೇ 2024, 13:08 IST
ಅಕ್ಷರ ಗಾತ್ರ

ಬೆಂಗಳೂರು: ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಬಂಧನ ರಾಜಕೀಯ ಪ್ರೇರಿತವಾಗಿದ್ದು, ಪ್ರಕರಣದ ಹಿಂದೆ ದೊಡ್ಡ ತಿಮಿಂಗಿಲವೇ ಇದೆ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.

ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿದ ಅವರು, ಆಡಿಯೊ ಮೂಲಕ ಸಿಕ್ಕಿಬಿದ್ದ ದೊಡ್ಡ ತಿಮಿಂಗಲವನ್ನು ಬಿಟ್ಟು ದೇವರಾಜೇಗೌಡ ಅವರನ್ನು ಬಂಧಿಸಿದ್ದಾರೆ. ಒಂದು ತಿಂಗಳಿನಿಂದ ಏನೆಲ್ಲಾ ಬೆಳವಣಿಗೆ ಆಯಿತು ಎನ್ನುವುದು ಗೊತ್ತಿದೆ ಎಂದರು. 

‘ದೇವೇಗೌಡರ ಕುಟುಂಬಕ್ಕೆ ಕಳಂಕ ತರಲು ಈ ರೀತಿ ಮಾಡಿದ್ದಾರೆ. ರೇವಣ್ಣ ಕುಟುಂಬ ಮುಗಿಸಲು ನಾನು ಸಂಚು ಮಾಡಿದ್ದೇನೆ ಎಂಬಂತೆ ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಎಂದಿಗೂ ನ್ಯಾಯ ಹಾಗೂ ನೊಂದ ಮಹಿಳೆಯರ ಪರ ಇದ್ದೇನೆ’ ಎಂದು ಹೇಳಿದರು.

‘ಪ್ರಕರಣ ಸಂಬಂಧ ಯಾರನ್ನೂ ವಹಿಸಿಕೊಳ್ಳುವ ಪ್ರಶ್ನೆ ಇಲ್ಲ. ವಿಡಿಯೊದಲ್ಲಿ ಇರುವ ಮಹಿಳೆಯರ ಕುಟುಂಬಗಳ ಬಗ್ಗೆ ಸರಕಾರಕ್ಕೆ ಅನುಕಂಪ‌ ಇಲ್ಲ. ಮಹಿಳೆಯರಿಗೆ ನ್ಯಾಯ ಸಿಗುವಂತೆ ಆಗಬೇಕು. ಒಬ್ಬರು ಹೆಣ್ಣುಮಗಳಿಗೆ ಹೆದರಿಸಿ‌ ಅವರಿಂದ ದೂರು ಪಡೆಯಲು ಪ್ರಯತ್ನ ಮಾಡಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಆ ಮಹಿಳೆ ದೂರು ಕೊಟ್ಟಿದ್ದಾರೆ. ಮಫ್ತಿಯಲ್ಲಿ ಅವರ ಮನೆ ಬಳಿ ಹೋಗಿ ಹೆದರಿಸಿದವರು ಯಾರು ಎನ್ನುವುದಕ್ಕೆ ಗೃಹ ಸಚಿವರು ಉತ್ತರ ಕೊಡಬೇಕು. ಸರ್ಕಾರಕ್ಕೆ ಬದ್ಧತೆ ಇದ್ದರೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕು. ರೇವಣ್ಣ ಸುತ್ತ ತನಿಖೆ ಗಿರಕಿ ಹೊಡೆಯುವ ಅಗತ್ಯವಿಲ್ಲ’ ಎಂದರು. 

‘ಬಿಜೆಪಿ ಪಕ್ಷದ ಮಾಜಿ ಶಾಸಕರೊಬ್ಬರ ಎಡಬಲದಲ್ಲಿ ಇದ್ದ ಇಬ್ಬರನ್ನು ಹಿಡಿಯಲಾಗಿದೆ. ಇನ್ನೊಂದು ವಾರದಲ್ಲಿ ಮುಖ್ಯವಾದವರನ್ನು ಹಿಡಿಯಲಾಗುತ್ತದೆ ಎಂದು ಕಾಂಗ್ರೆಸ್‌ ಶಾಸಕರು ಹೇಳಿದ್ದಾರೆ. ಎಸ್ ಐಟಿ ತನಿಖೆಯ ಎಲ್ಲಾ ಅಂಶಗಳು ಇವರಿಗೆ ಹೇಗೆ ಸೋರಿಕೆ ಆಗುತ್ತಿವೆ?. ಪ್ರಜ್ವಲ್ ರೇವಣ್ಣ ಅವರ ವಿಡಿಯೊಗಳು ಹೊರಬರುತ್ತವೆ ಎಂದು ಸಮಯದ ಸಮೇತ ಪೋಸ್ಟ್‌ ಹಾಕಿದ್ದ ನವೀನ್‌ ಗೌಡ ಈಗ ಜೆಡಿಎಸ್‌ ಶಾಸಕರಿಗೆ ಪೆನ್‌ಡ್ರೈವ್‌ ಕೊಟ್ಟಿದ್ದೆನೆ ಎಂದು ಹೇಳಿದ್ದಾನೆ. ಇಂತಹ ವಿಚಾರಗಳು ಎಸ್‌ಐಟಿ ಅಧಿಕಾರಿಗಳಿಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದ ಅವರು ಎಸ್‌ಐಟಿ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT