ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲೂ ಪೆಟ್ರೋಲ್, ಡೀಸೆಲ್‌ ತೆರಿಗೆ ಇಳಿಸಲು ಒತ್ತಡ

Last Updated 22 ಮೇ 2022, 19:35 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿಪೆಟ್ರೋಲ್ ಮತ್ತು ಡೀಸೆಲ್‌ ತೆರಿಗೆ ಕಡಿಮೆ ಮಾಡಬೇಕು ಎಂಬ ವ್ಯಾಪಕ ಆಗ್ರಹ ಕೇಳಿ ಬಂದ ಬೆನ್ನಲ್ಲೇ, ತೆರಿಗೆ ಇಳಿಕೆ ಮಾಡುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ಕೆಲವು ರಾಜ್ಯಗಳಲ್ಲಿ ತೆರಿಗೆ ಕಡಿಮೆ ಮಾಡಿ ಸಾರ್ವಜನಿಕರ ಮೇಲಿನ ಹೊರೆ ಕಡಿಮೆ ಮಾಡಿರುವುದನ್ನು ಪ್ರಸ್ತಾಪಿಸಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಮತ್ತು ಬಿಜೆಪಿ ಶಾಸಕ ಬಿ.ಎಸ್‌.ಯಡಿಯೂರಪ್ಪ ಅವರು ಇಲ್ಲೂ ತೆರಿಗೆಕಡಿಮೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ದಾವೋಸ್‌ಗೆ ತೆರಳುವ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ, ‘ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್‌ ಮೇಲಿನ ಎಕ್ಸೈಸ್‌ ಸುಂಕ ಇಳಿಕೆ ಮಾಡಿದೆ. ರಾಜ್ಯದಲ್ಲಿಯೂ ತೆರಿಗೆ ಕಡಿತ ಮಾಡುವ ಬಗ್ಗೆ ಪರಿಶೀಲನೆ ನಡೆಸುತ್ತೇನೆ. ಈ ಹಿಂದೆಯೂ ಕೇಂದ್ರ ಸರ್ಕಾರ ತೈಲದ ಮೇಲೆ ಸುಂಕ ಕಡಿಮೆ ಮಾಡಿದಾಗ, ರಾಜ್ಯ ಸರ್ಕಾರವೂ ತೆರಿಗೆ ಇಳಿಸಿತ್ತು. ಹಣಕಾಸು ಇಲಾಖೆ ಜತೆ ಚರ್ಚೆ ನಡೆಸಿ ಕ್ರಮ ತೆಗೆದುಕೊಳ್ಳುತ್ತೇನೆ’ ಎಂದರು.

ಮೀನಮೇಷ ಸರಿಯಲ್ಲ: ‘ಜನಾಕ್ರೋಶಕ್ಕೆ ಕೊನೆಗೂ ಮಣಿದಿರುವ ಕೇಂದ್ರ ಸರ್ಕಾರ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಿದೆ. ಹೀಗಾಗಿ ತೈಲ ಬೆಲೆಗಳು ದೇಶದಾದ್ಯಂತ ಕಡಿಮೆಯಾಗುತ್ತಿವೆ. ಆದರೆ,ಕರ್ನಾಟಕದಲ್ಲಿ ಬಿಜೆಪಿಯದ್ದೇ ಸರ್ಕಾರಸುಂಕ ಕಡಿತಕ್ಕೆ ಮೀನಮೇಷ ಎಣಿಸುತ್ತಿರುವುದು ಸರಿಯಲ್ಲ’ ಎಂದು ಎಚ್‌.ಡಿ.ಕುಮಾರಸ್ವಾಮಿ ಟ್ವೀಟ್‌ ಮಾಡಿದ್ದಾರೆ.

‘ನೆರೆಯ ಕೇರಳದಲ್ಲಿ ಈಗಾಗಲೇ ಸುಂಕ ಕಡಿತ ಮಾಡಲಾಗಿದೆ. ಆದರೆ, ರಾಜ್ಯದ ಬಿಜೆಪಿ ಸರ್ಕಾರವು ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ ಎನ್ನುವ ವ್ಯಾಪಾರಿ ಬುದ್ಧಿಯ ಜಾಣ ನಡೆ ಅನುಸರಿಸುತ್ತಿದೆ. ತೆರಿಗೆ ಕಡಿತದ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿರುವುದು ಒಪ್ಪುವ ಮಾತಲ್ಲ’ ಎಂದು ಅವರು ಹೇಳಿದರು.

ಕಾಂಗ್ರೆಸ್‌ ಮುಖಂಡ ಎಚ್‌.ಸಿ. ಮಹದೇವಪ್ಪ ಹೇಳಿಕೆ ನೀಡಿ, ‘ಪೆಟ್ರೋಲ್‌ ದರವನ್ನು ₹115 ಕ್ಕೆ ಏರಿಸಿ,ಬಳಿಕ ₹9 ಇಳಿಸಿದರೆ ಜನರ ಸಂಕಷ್ಟ ಕಡಿಮೆ ಆಗುವುದಿಲ್ಲ. ಈ ಸಂದರ್ಭದಲ್ಲಿ ಏನೋ ಮಹಾ ಜವಾಬ್ದಾರಿಯಿಂದ ಆಡಳಿತ ನಡೆಸುತ್ತಿರುವಂತೆ ಪ್ರಧಾನಿ ಯವರು ಮಾತನಾಡಿರುವುದು ಹಾಸ್ಯಾಸ್ಪದ ಸಂಗತಿ’ ಎಂದು ತಿಳಿಸಿದ್ದಾರೆ.

‘ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆಯು ಕಡಿಮೆಯೇ ಇರುವಾಗ ತೈಲ ಬೆಲೆಯನ್ನು ವಿಪರೀತವಾಗಿ ಹೆಚ್ಚು ಮಾಡಿರುವ ಬಿಜೆಪಿ ಸರ್ಕಾರ ಲೂಟಿಯಲ್ಲಿ ಮುಳುಗಿದೆ’ ಎಂದು ಹೇಳಿದ್ದಾರೆ.

ತೆರಿಗೆ ಪ್ರಮಾಣ ತಗ್ಗಿಸಲು ಬಿಎಸ್‌ವೈ ಸಲಹೆ:ರಾಜ್ಯ ಸರ್ಕಾರವೂಪೆಟ್ರೋಲ್‌ ಮತ್ತು ಡೀಸೆಲ್‌ ಸುಂಕ ಕಡಿತ ಮಾಡಿದರೆ ಜನತೆಗೆ ಹೆಚ್ಚು ಸಹಾಯಕವಾಗಲಿದೆ. ಈ ಬಗ್ಗೆ ಆಲೋಚನೆ ಮಾಡಬೇಕು ಎಂದು ಶಾಸಕ ಬಿ.ಎಸ್‌.ಯಡಿಯೂರಪ್ಪ ಸಲಹೆ ನೀಡಿದ್ದಾರೆ. ಬೆಲೆ ಏರಿಕೆಯ ಸಂಕಷ್ಟದಲ್ಲಿ ದೇಶದ ಜನತೆ ಇದ್ದಾಗ ಪ್ರಧಾನಿಯವರು ದೊಡ್ಡ ಮನಸ್ಸು ಮಾಡಿ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಸುಂಕವನ್ನು ಕಡಿತ ಮಾಡಿರುವುದು ಜನಪರ ಕ್ರಮ. ರಾಜ್ಯವೂ ಇದೇ ಮಾದರಿ ಅನುಸರಿಸಬೇಕು ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT