ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಸಿಇಪಿ ವಿರುದ್ಧ ಬೃಹತ್ ಪ್ರತಿಭಟನೆ

ಮಂಡ್ಯದಲ್ಲಿ 10 ಸಾವಿರಕ್ಕೂ ಹೆಚ್ಚು ಜನ ಭಾಗಿ; ಮೂರೂವರೆ ತಾಸು ಬೆಂಗಳೂರು– ಮೈಸೂರು ಹೆದ್ದಾರಿ ಸ್ತಬ್ಧ
Last Updated 31 ಅಕ್ಟೋಬರ್ 2019, 19:32 IST
ಅಕ್ಷರ ಗಾತ್ರ

ಮಂಡ್ಯ: ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಬಾರದು ಎಂದು ಆಗ್ರಹಿಸಿ, ಸಾವಿರಾರು ಹಾಲು ಉತ್ಪಾದಕರು ನಗರದಲ್ಲಿ ಗುರುವಾರ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಇದರಿಂದಾಗಿ, ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯು ಮೂರೂವರೆ ಗಂಟೆ ಕಾಲ ಸ್ತಬ್ಧಗೊಂಡಿತ್ತು. ಹೆದ್ದಾರಿಯ ಎರಡೂ ಕಡೆಯಲ್ಲಿ ಎರಡು ಕಿ.ಮೀ. ವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಮಂಡ್ಯ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ಮನ್‌ಮುಲ್‌) ಪ್ರತಿಭಟನೆಗೆ ಕರೆ ನೀಡಿತ್ತು. ಜಿಲ್ಲೆಯ ಹಳ್ಳಿಹಳ್ಳಿಗಳ ಹಾಲು ಉತ್ಪಾದಕರು ಬಸ್‌ ಹಾಗೂ ವ್ಯಾನ್‌ಗಳಲ್ಲಿ ಬಂದಿದ್ದರು.

ಸಿಲ್ವರ್‌ ಜ್ಯೂಬಿಲಿ ಉದ್ಯಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಜನಸಾಗರ ಹರಿದು ಬಂದಿದ್ದರಿಂದ, ಮಧ್ಯಾಹ್ನ 12 ಗಂಟೆಯಿಂದ
3.30ರವರೆಗೆ ವಾಹನಗಳು ನಿಂತಲ್ಲಿಯೇ ನಿಂತಿದ್ದವು. ಟ್ರಾಫಿಕ್‌ನಲ್ಲಿ ಸಿಲುಕಿದ್ದ ಆಂಬುಲೆನ್ಸ್‌ಗಳನ್ನು ಬದಲಿ ಮಾರ್ಗದ ಮೂಲಕ ಕಳುಹಿಸಲಾಯಿತು. ಸಾರಿಗೆ ಬಸ್‌ಗಳ ಪ್ರಯಾಣಿಕರು ಮಧ್ಯಾಹ್ನ ಊಟವೂ ಸಿಗದೇ ಪರದಾಡಿದರು.

ಹೆದ್ದಾರಿ ಬಂದ್‌ ಆಗಿದ್ದರಿಂದ ನಗರದ ವಿವಿ ರಸ್ತೆ, ಆರ್‌. ಪಿ. ರಸ್ತೆ, ನೂರು ಅಡಿ ರಸ್ತೆಗಳಲ್ಲೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಮೈಸೂರು ಹಾಗೂ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ನಿಲ್ದಾಣದ ನಡುವೆ ಓಡಾಡುವ ಸಾರಿಗೆ ಬಸ್‌ ಟ್ರಾಫಿಕ್‌ನಲ್ಲಿ ಸಿಲುಕಿದ್ದ ಕಾರಣ, ವಿಮಾನ ನಿಲ್ದಾಣ ತಲು‍ಪಲು ತಡವಾಗುತ್ತದೆ ಎಂದು ಪ್ರಯಾಣಿಕರು ಆತಂಕಗೊಂಡಿದ್ದರು.

ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ನಂತರವೂ ರೈತರು, ಮಹಿಳೆಯರು ಖಾಲಿ ಕೊಡ ಹೊತ್ತು ಹೆದ್ದಾರಿಯಲ್ಲೇ ಕುಳಿತಿದ್ದರು. ಇಷ್ಟೊಂದು ಸಂಖ್ಯೆಯ ರೈತರು ಸೇರುತ್ತಾರೆ ಎಂಬ ಮುನ್ಸೂಚನೆ ಇಲ್ಲದ ಕಾರಣ ಹೆಚ್ಚಿನ ಸಂಖ್ಯೆಯ ಪೊಲೀಸರೂ ಇರಲಿಲ್ಲ. ಹೀಗಾಗಿ ರೈತರ ಮನವೊಲಿಸಲು ಸಾಧ್ಯವಾಗಲಿಲ್ಲ.

ಸಿದ್ದರಾಮಯ್ಯಗೂ ತಟ್ಟಿದ ಬಿಸಿ: ನಗರಕ್ಕೆ ಬಂದಿದ್ದ ಸಿದ್ದರಾಮಯ್ಯ ಅವರಿಗೂ ಈ ಪ್ರತಿಭಟನೆ ಬಿಸಿ ತಟ್ಟಿತು. ಕಾಂಗ್ರೆಸ್‌ ಕಚೇರಿಯಲ್ಲಿ ಆಯೋಜಿಸಿದ್ದ ಇಂದಿರಾಗಾಂಧಿ ಪುಣ್ಯ ಸ್ಮರಣೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಅವರು, ಬದಲಿ ಮಾರ್ಗದ ಮೂಲಕ ಕಾರ್ಯಕ್ರಮದ ಸ್ಥಳವನ್ನು ತಲುಪಿದರು. ಕಾರ್ಯಕ್ರಮ ಮುಗಿಸಿ ಅವರು ಬದಲಿ ಮಾರ್ಗದಲ್ಲೇ ತೆರಳಿದರು.

ಹಾಲು ಪೂರೈಕೆ ಸ್ಥಗಿತ:ಬಮೂಲ್‌ ಎಚ್ಚರಿಕೆ

ಬೆಂಗಳೂರು: ‘ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದದಿಂದ (ಆರ್‌ಸಿಇಪಿ) ಹೊರಗಿಡದಿದ್ದರೆ ಹಾಲು ಪೂರೈಕೆ ಸ್ಥಗಿತಗೊಳಿಸಿ ಹೋರಾಟ ನಡೆಸಲಾಗುವುದು’ ಎಂದು ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮೂಲ್‌) ಎಚ್ಚರಿಕೆ ನೀಡಿದೆ.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಮೂಲ್‌ ಅಧ್ಯಕ್ಷ ನರಸಿಂಹಮೂರ್ತಿ ಹಾಗೂ ಇತರ ನಿರ್ದೇಶಕರು, ‘ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಇದೇ 2ರಂದು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲಾಗುವುದು. ಕೇಂದ್ರ ಸರ್ಕಾರ ರೈತರ ಮನವಿಗೆ ಸ್ಪಂದಿಸುವ ವಿಶ್ವಾಸವಿದೆ. ಅದನ್ನೂ ಮೀರಿ ರೈತರ ಹಿತ ಬಲಿಕೊಟ್ಟರೆ ಉಗ್ರ ಹೋರಾಟ ಅನಿವಾರ್ಯ’ ಎಂದರು. ‘ರಾಜ್ಯದಲ್ಲಿ ಪ್ರತಿನಿತ್ಯ 80 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಮನೆಗೊಂದು ಹಸು ಕಟ್ಟಿಕೊಂಡು ರೈತರು ಜೀವನ ಸಾಗಿಸುತ್ತಿದ್ದಾರೆ. ಅವರ ಹಿತ ಕಾಪಾಡುವ ನಿಟ್ಟಿನಲ್ಲಿ ನಡೆಸುತ್ತಿರುವ ಹೋರಾಟಕ್ಕೆ ಎಲ್ಲಾ ಪಕ್ಷದ ಮುಖಂಡರನ್ನೂ ಆಹ್ವಾನಿಸಲಾಗಿದೆ’ ಎಂದರು.

ಸಂಸದೆ ಸುಮಲತಾ ವಿರುದ್ಧ ಆಕ್ರೋಶ

ಹೈನುಗಾರಿಕೆಗೆ ಮರಣ ಶಾಸನವಾಗಿರುವ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಕೂಡದು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು, ಸಂಸದೆ ಎ.ಸುಮಲತಾ ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದರು. ಗೆಲುವು ಸಾಧಿಸಿದ ನಂತರ ಅವರು ರೈತರ ಕಷ್ಟ ಕೇಳಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಲವೆಡೆ ಪ್ರತಿಭಟನೆ: ತುಮಕೂರು, ಮುಳಬಾಗಿಲು, ತಿಪಟೂರು, ಶ್ರೀನಿವಾಸಪುರ, ಚಿಕ್ಕಬಳ್ಳಾಪುರದಲ್ಲಿಯೂ ರೈತರು ಪ್ರತಿಭಟನೆ ನಡೆಸಿದರು.

ನ. 4ಕ್ಕೆ ರೈತರಿಂದ ರಾಷ್ಟ್ರವ್ಯಾಪಿ ಪ್ರತಿಭಟನೆ

ನವದೆಹಲಿ (ಪಿಟಿಐ): ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ಒಪ್ಪಂದಕ್ಕೆ ಭಾರತ ಸಹಿ ಹಾಕದಂತೆ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಲು ನವೆಂಬರ್‌ 4ರಂದು ದೇಶದಾದ್ಯಂತ ಪ್ರತಿಭಟನೆ ನಡೆಸಲು ಅಖಿಲ ಭಾರತ ಕಿಸಾನ್‌ ಸಂಘರ್ಷ ಸಮನ್ವಯ ಸಮಿತಿಯು (ಎಐಕೆಎಸ್‌ಸಿಸಿ) ನಿರ್ಧರಿಸಿದೆ.

ಸಚಿವರ ಸಭೆ: 16 ದೇಶಗಳ ವಾಣಿಜ್ಯ ಸಚಿವರು ಶುಕ್ರವಾರ ಬ್ಯಾಂಕಾಕ್‌ನಲ್ಲಿ ಸಭೆ ಸೇರಿ ಉದ್ದೇಶಿತ ಮುಕ್ತ ವ್ಯಾಪಾರ ಒಪ್ಪಂದಕ್ಕೆ (ಆರ್‌ಸಿಇಪಿ) ಸಂಬಂಧಿಸಿದ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT