ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

660 ಪಿಎಸ್‌ಐ ನೇಮಕಾತಿಗೆ ಅಧಿಸೂಚನೆ: ಗೃಹ ಸಚಿವ ಜಿ. ಪರಮೇಶ್ವರ

Published 24 ಜನವರಿ 2024, 13:49 IST
Last Updated 24 ಜನವರಿ 2024, 13:49 IST
ಅಕ್ಷರ ಗಾತ್ರ

ಬೆಂಗಳೂರು: ‘ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) 545 ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಮೂಲಕ ಮರು ಪರೀಕ್ಷೆ ಸುಗಮವಾಗಿ ನಡೆದಿದೆ. ಮುಂದಿನ ಹಂತದಲ್ಲಿ 403 ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗುವುದು. ಈ ಎರಡೂ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಮತ್ತೆ 660 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುವುದು’ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.

ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘660 ಹುದ್ದೆಗಳ ನೇಮಕಾತಿಗೂ ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ. ಮುಂದಿನ ಎರಡು ವರ್ಷಗಳ ಒಳಗೆ ಈ ಎಲ್ಲ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು’ ಎಂದರು.

‘ಪಿಎಸ್ಐ 545 ಹುದ್ದೆಗಳಿಗೆ ನಡೆದ ಪರೀಕ್ಷೆಯ ಮೌಲ್ಯಮಾಪನವನ್ನು ಆದಷ್ಟು ಬೇಗ ಮುಗಿಸಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. 54 ಸಾವಿರ ಅಭ್ಯರ್ಥಿಗಳು ಈ ಪರೀಕ್ಷೆ ಬರೆಯಬೇಕಿತ್ತು. ಕೆಲವರು ಗೈರಾಗಿದ್ದಾರೆ. ಯಾವುದೇ ರೀತಿಯ ಪರೀಕ್ಷಾ ಅಕ್ರಮ ಘಟನೆಗಳು ನಡೆದಿಲ್ಲ’ ಎಂದರು.

‘ಮುಂದಿನ ಹಂತದಲ್ಲಿ 403 ಹುದ್ದೆಗಳ ನೇಮಕಾತಿಗೆ ಈಗಾಗಲೇ ದೈಹಿಕ ಪರೀಕ್ಷೆ ಮುಗಿದಿದೆ. ಪರೀಕ್ಷೆ ಬಾಕಿ ಇದೆ‌. ಇದನ್ನು ಕೂಡ ಕೆಇಎಗೆ ವಹಿಸುವ ಚಿಂತನೆಯಿದೆ. ಈ ಎರಡೂ ನೇಮಕಾತಿ ಪ್ರಕ್ರಿಯೆ ಮುಗಿದರೆ ಇಲಾಖೆಗೆ ಒಟ್ಟು 948 ಪಿಎಸ್ಐಗಳು ಲಭ್ಯವಾಗುತ್ತಾರೆ‌’ ಎಂದರು.

ತನಿಖೆಯಿಂದ ಸತ್ಯಾಸತ್ಯತೆ ಗೊತ್ತಾಗಲಿದೆ: ‘ಕಲಬುರಗಿಯಲ್ಲಿ ಅಂಬೇಡ್ಕರ್ ಪುತ್ಥಳಿಗೆ ಅಪಮಾನ ಮಾಡಿದ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಎಲ್ಲವನ್ನು ಪರಿಶೀಲನೆ ನಡೆಸಲಾಗುವುದು. ಕೃತ್ಯದ ಉದ್ದೇಶ ಏನೆಂಬುವುದು ತನಿಖೆಯಿಂದ ಹೊರಬರಬೇಕಿದೆ. ಯಾರದ್ದಾದರೂ ಕುಮ್ಮಕ್ಕು ಇದೆಯಾ ಎಂಬುದೂ ತನಿಖೆಯಿಂದ ಗೊತ್ತಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT