ಬೆಂಗಳೂರು: ‘ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಮೃತ ಪಿಎಸ್‌ಐ ಪರಶುರಾಮ್ ಅವರ ಕುಟುಂಬಕ್ಕೆ ರಾಜ್ಯ ಸರ್ಕಾರ ಈವರೆಗೆ ಪರಿಹಾರ ಒದಗಿಸಿಲ್ಲ. ತಕ್ಷಣವೇ ಪರಿಹಾರ ಒದಗಿಸಬೇಕು’ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.
ಶನಿವಾರ ಪತ್ರ ಬರೆದಿರುವ ಅವರು, ‘ಪರಶುರಾಮ್ ಮೃತಪಟ್ಟ ಸಂದರ್ಭದಲ್ಲಿ ಗೃಹ ಸಚಿವರು ಮೃತರ ಮನೆಗೆ ಭೇಟಿ ನೀಡಿದ್ದರು. ₹50 ಲಕ್ಷ ಪರಿಹಾರ ಮತ್ತು ಮೃತರ ಪತ್ನಿಗೆ ಉದ್ಯೋಗದ ಭರವಸೆ ನೀಡಿದ್ದರು. ಅದಾಗಿ 45 ದಿನಗಳಾದರೂ ಪರಿಹಾರ ದೊರೆತಿಲ್ಲ. ಶೀಘ್ರವೇ ಪರಿಹಾರ ಒದಗಿಸಬೇಕು’ ಎಂದು ಒತ್ತಾಯಿಸಿದ್ದಾರೆ.
‘ಈ ಪ್ರಕರಣದಲ್ಲಿ ಸ್ಥಳೀಯ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಮತ್ತು ಅವರ ಮಗ ಪಂಪನಗೌಡ ವಿರುದ್ಧ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಆದರೂ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಮೃತರ ಕುಟುಂಬಕ್ಕೆ ನ್ಯಾಯ ಒದಗಿಸುವ ಉದ್ದೇಶದಿಂದ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.