ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷದಲ್ಲೇ ಸಾರ್ವಜನಿಕ ಸಾಲ ಶೇ 31.38ರಷ್ಟು ಹೆಚ್ಚಳ

2020–21ರ ಹಣಕಾಸು ಸ್ಥಿತಿಗೆ ಸಂಬಂಧಿಸಿದ ಸಿಎಜಿ ವರದಿಯಲ್ಲಿ ಉಲ್ಲೇಖ
Last Updated 14 ಡಿಸೆಂಬರ್ 2021, 22:10 IST
ಅಕ್ಷರ ಗಾತ್ರ

ಬೆಳಗಾವಿ (ಸುವರ್ಣ ವಿಧಾನಸೌಧ): 2020–21ರ ಒಂದೇ ಆರ್ಥಿಕ ವರ್ಷದಲ್ಲಿ ರಾಜ್ಯ ಸರ್ಕಾರದ ಸಾರ್ವಜನಿಕ ಸಾಲದ ಪ್ರಮಾಣದಲ್ಲಿ ಶೇಕಡ 31.38ರಷ್ಟು ಹೆಚ್ಚಳವಾಗಿದೆ. ಈ ಅವಧಿಯಲ್ಲಿ ರಾಜ್ಯದ ಒಟ್ಟು ಸಾಲದ ಪ್ರಮಾಣ ರಾಜ್ಯದ ನಿವ್ವಳ ಆಂತರಿಕ ಉತ್ಪನ್ನದ (ಜಿಎಸ್‌ಡಿಪಿ) ಶೇ 23.06ರಷ್ಟನ್ನು ತಲುಪಿದೆ ಎಂಬುದನ್ನು ಮಹಾಲೇಖಪಾಲರ (ಸಿಎಜಿ) ವರದಿಯಲ್ಲಿ ಉಲ್ಲೇಖಿಸಲಾಗಿದೆ.

2020–21ನೇ ಸಾಲಿನ ಧನ ವಿನಿಯೋಗ ಲೆಕ್ಕ ಮತ್ತು ಹಣಕಾಸು ಲೆಕ್ಕಗಳಿಗೆ ಸಂಬಂಧಿಸಿದ ಸಿಎಜಿಯ ಲೆಕ್ಕಪರಿಶೋಧನಾ ವರದಿಗಳನ್ನು ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಂಗಳವಾರ ಮಂಡಿಸಲಾಯಿತು. ಕೋವಿಡ್‌ ಸಂಕಷ್ಟ ಮತ್ತು ಲಾಕ್‌ಡೌನ್‌ ಅವಧಿಯಲ್ಲಿ ಹೆಚ್ಚುವರಿ ಸಾಲ ಪಡೆದಿರುವುದು ಸರ್ಕಾರದ ಮೇಲಿನ ಸಾಲದ ಹೊರೆಯನ್ನು ಗಣನೀಯವಾಗಿ ಹೆಚ್ಚಿಸಿದೆ ಎಂಬುದನ್ನು ವರದಿ ತೆರೆದಿಟ್ಟಿದೆ.

2020ರ ಮಾರ್ಚ್‌ ಅಂತ್ಯದಲ್ಲಿ ರಾಜ್ಯ ಸರ್ಕಾರದ ಸಾರ್ವಜನಿಕ ಸಾಲದ ಮೊತ್ತ ₹ 2.34 ಲಕ್ಷ ಕೋಟಿ ಇತ್ತು. 2021ರ ಮಾರ್ಚ್‌ ಅಂತ್ಯಕ್ಕೆ ಈಷ ಮೊತ್ತ ₹ 3.07 ಲಕ್ಷ ಕೋಟಿಗೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯವು ಪಡೆದಿರುವ ಸಾಲ ಮತ್ತು ಮುಂಗಡಗಳ ಮೊತ್ತವು ₹ 13,908 ಕೋಟಿಯಿಂದ ₹ 26,617 ಕೋಟಿಗೆ ಹೆಚ್ಚಳವಾಗಿದೆ.

ಕೋವಿಡ್‌ ಅವಧಿಯಲ್ಲಿ ಆರ್ಥಿಕ ಹೊರೆಯನ್ನು ನಿಭಾಯಿಸಲು ಜಿಎಸ್‌ಡಿಪಿಯ ಶೇ 5ರಷ್ಟು ಸಾಲ ಪಡೆಯುವ ತೀರ್ಮಾನವನ್ನು ಸರ್ಕಾರ ಮಾಡಿತ್ತು. ಇದರಿಂದಾಗಿ ₹ 80,000 ಕೋಟಿಯಷ್ಟು ಹೆಚ್ಚುವರಿ ಸಾಲ ಪಡೆಯಲಾಗಿತ್ತು. ಇದರ ಜತೆಯಲ್ಲೇ ಕೋವಿಡ್‌ ಅವಧಿಯಲ್ಲಿ ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರವನ್ನು ಸಾಲದ ರೂಪದಲ್ಲಿ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಇದು ರಾಜ್ಯ ಸರ್ಕಾರದ ಸಾಲದ ಪ್ರಮಾಣದಲ್ಲಿ ₹ 18,000 ಕೋಟಿಯಷ್ಟು ಹೆಚ್ಚಳಕ್ಕೆ ಕಾರಣವಾಗಿತ್ತು.

ಕೋವಿಡ್‌ ಬಿಕ್ಕಟ್ಟು, ಲಾಕ್‌ಡೌನ್‌ನಲ್ಲಿ ತೆರಿಗೆ ಸಂಗ್ರಹ ಕುಸಿತ, ಜಿಎಸ್‌ಟಿ ಪರಿಹಾರ ಇಳಿಕೆಯ ಕಾರಣಗಳಿಂದಾಗಿ 2020–21ನೇ ಆರ್ಥಿಕ ವರ್ಷದಲ್ಲಿ ರಾಜ್ಯ ಸರ್ಕಾರವು ಹಿಂದಿನ ವರ್ಷಗಳಿಗಿಂತ ಹೆಚ್ಚು ಸಾಲ ಪಡೆದಿದೆ.

ವರಮಾನ ಕುಸಿತ: 2020–21ರಲ್ಲಿ ರಾಜ್ಯ ಸರ್ಕಾರದ ವರಮಾನ ಸಂಗ್ರಹದಲ್ಲಿ ಗಣನೀಯ ಕುಸಿತವಾಗಿದೆ. 2019–20ರಲ್ಲಿ ರಾಜ್ಯ ಸರ್ಕಾರಕ್ಕೆ ಜಿಎಸ್‌ಟಿ ಪಾಲಿನಿಂದ ₹ 42,147 ಕೋಟಿ ಲಭಿಸಿತ್ತು. ಆದರೆ, 2020–21ರಲ್ಲಿ ಈ ಮೊತ್ತ ₹ 37,711 ಕೋಟಿಗೆ ಕುಸಿದಿದೆ. ಅಬಕಾರಿ, ನೋಂದಣಿ ಮತ್ತು ಮುದ್ರಾಂಕ ಸೇರಿದಂತೆ ರಾಜ್ಯದ ಸ್ವಂತ ತೆರಿಗೆಗಳ ಸಂಗ್ರಹದಲ್ಲೂ ಕುಸಿತ ಕಂಡುಬಂದಿದೆ ಎಂದು ಸಿಎಜಿ ವರದಿ ಹೇಳಿದೆ.

‘2020–21ರಲ್ಲಿ ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ಘೋಷಿಸಿದ್ದ ₹ 18,421 ಕೋಟಿ ಸಾಲವೂ ಸೇರಿದಂತೆ ಒಟ್ಟು ₹ 96,506 ಕೋಟಿ ಸಾಲ ಪಡೆದಿದೆ. ಇದರಿಂದಾಗಿ ರಾಜ್ಯ ಸರ್ಕಾರದ ಒಟ್ಟು ಸಾಲದ ಮೊತ್ತವು ಜಿಎಸ್‌ಡಿಪಿಯ ಶೇ 23.06ರಷ್ಟಾಗಿದೆ’ ಎಂದು ಸಿಎಜಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT