ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆ ಸಂತ್ರಸ್ತರಿಗೆ ಶೀಘ್ರ ಪರಿಹಾರ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ

ಗೌರಿಹಬ್ಬದಂದು ಕೆಆರ್‌ಎಸ್‌, ಕಬಿನಿಗೆ ಬಾಗಿನ
Last Updated 21 ಆಗಸ್ಟ್ 2020, 20:16 IST
ಅಕ್ಷರ ಗಾತ್ರ

ಮಂಡ್ಯ/ಮೈಸೂರು: ನೆರೆ ಸಂತ್ರಸ್ತರಿಗೆ ಶೀಘ್ರದಲ್ಲೇ ಪರಿಹಾರ ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಶುಕ್ರವಾರ ಇಲ್ಲಿ ತಿಳಿಸಿದರು.

ಕೆಆರ್‌ಎಸ್‌ ಜಲಾಶಯದಲ್ಲಿ ಕಾವೇರಿಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ‘ಈ ಬಾರಿ ರಾಜ್ಯದ ಎಲ್ಲಾ ಜಲಾಶಯಗಳು ತುಂಬಿದ್ದು ಕೃಷಿ ಹಾಗೂ ಕುಡಿಯುವ ನೀರಿಗೆ ಯಾವುದೇ ತೊಂದರೆ ಇಲ್ಲ. ಕೆಲವೆಡೆ ಅತಿವೃಷ್ಟಿ ಉಂಟಾಗಿದ್ದು, ತೊಂದರೆಗೆ ಸಿಲುಕಿರುವವರಿಗೆ ಶೀಘ್ರವೇ ಪರಿಹಾರ ವಿತರಿಸಲಾಗುವುದು’ ಎಂದರು.

ಕೆಆರ್‌ಎಸ್‌ ಜಲಾಶಯ ನಿರ್ಮಾಣವಾದ ನಂತರ 36 ಬಾರಿ ಗರಿಷ್ಠ ಮಟ್ಟ ತಲುಪಿದೆ. ಸತತವಾಗಿ ಮೂರನೇ ಬಾರಿ ತುಂಬಿರುವುದು ಸಂತಸದ ವಿಚಾರವಾಗಿದ್ದು, ತಾವು ಐದನೇ ಬಾರಿ ಕಾವೇರಿ ಮಾತೆಗೆ ಬಾಗಿನ ಅರ್ಪಿಸುತ್ತಿರುವುದು ತಮ್ಮ ಭಾಗ್ಯ ಎಂದರು.

ಮೈಸೂರು ಜಿಲ್ಲೆಯ ಎಚ್‌.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯದಲ್ಲಿ ಕಪಿಲೆಗೂ ಬಾಗಿನ ಅರ್ಪಿಸಿದರು.

ಹಾಸನ ಜಿಲ್ಲೆಯ ಗೊರೂರಿನ ಹೇಮಾವತಿ ಜಲಾಶಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹಾಗೂ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಬಾಗಿನ ಅರ್ಪಿಸಿದರು.

ಬಂಧನ, ಬಿಡುಗಡೆ: ಬಾಗಿನ ಸಲ್ಲಿಸಲು ಬಂದಿದ್ದ ಮುಖ್ಯಮಂತ್ರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಲು ಮುಂದಾಗಿದ್ದ ವಿವಿಧ ಸಂಘಟನೆಗಳ ಮುಖಂಡರನ್ನು ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದರು. ಮುಂಜಾಗ್ರತಾ ಕ್ರಮವಾಗಿ ಕೆಲವರನ್ನು ಬೆಳಿಗ್ಗೆಯೇ ವಶಕ್ಕೆ ಪಡೆಯಲಾಗಿತ್ತು. ಹಲವು ಮುಖಂಡರು ಮನೆಯಿಂದ ಹೊರಗೆ ಬಾರದಂತೆ ದಿಗ್ಬಂಧನ ವಿಧಿಸಲಾಗಿತ್ತು.

ಮೇಕೆದಾಟು ಯೋಜನೆ ಜಾರಿಗೆ ಬದ್ಧ
ಮೇಕೆದಾಟು ಯೋಜನೆ ಜಾರಿಗೆ ಸರ್ಕಾರ ಬದ್ಧವಾಗಿದ್ದು, ಕೇಂದ್ರ ಸರ್ಕಾರದ ಮನವೊಲಿಸಿ ಯೋಜನೆಗೆ ವಿಶೇಷ ಅನುಮೋದನೆ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

‘ಬೃಂದಾವನ ಉದ್ಯಾನವನ್ನು ವಿಶ್ವದರ್ಜೆಯ ಪ್ರವಾಸಿ ತಾಣವನ್ನಾಗಿ ರೂಪಿಸಲು ಕ್ರಮ ವಹಿಸಲಾಗುವುದು. ಇದೇ ಮೊದಲ ಬಾರಿಗೆ ನಮ್ಮ ಸರ್ಕಾರ ಕೆಆರ್‌ಎಸ್‌ ಜಲಾಶಯದ 16 ಗೇಟ್‌ಗಳ ದುರಸ್ತಿಗೆ ₹ 8.5 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಂಡಿದೆ. ನೀರಾವರಿ ಇಲಾಖೆಯಡಿ ರಾಜ್ಯದಾದ್ಯಂತ ₹ 7,400 ಕೋಟಿ ವೆಚ್ಚದಲ್ಲಿ 28 ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT