ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜ್ವಲ್ ರೇವಣ್ಣ ಗೆಲ್ಲಿಸಿದ್ದು ಯಾರು?: ಆರ್‌.ಅಶೋಕ

Published 30 ಏಪ್ರಿಲ್ 2024, 8:19 IST
Last Updated 30 ಏಪ್ರಿಲ್ 2024, 8:19 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಪ್ರಜ್ವಲ್‌ ರೇವಣ್ಣ ಪ್ರಕರಣಕ್ಕೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ ಎಂದು ಎಚ್‌.ಡಿ.ಕುಮಾರಸ್ವಾಮಿ ಅವರೇ ಹೇಳಿದ್ದಾರೆ. ಪ್ರಜ್ವಲ್ ಈಗ ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿ. ಅವರು ಗೆದ್ದ ನಂತರ ನಮ್ಮನ್ನು ಪ್ರಶ್ನೆ ಮಾಡಿದರೆ ನಾವು ಉತ್ತರಿಸುತ್ತೇವೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಹೇಳಿದರು.

‘ಕಾಂಗ್ರೆಸ್–ಜೆಡಿಎಸ್ ಮೈತ್ರಿ ಸರ್ಕಾರ ಇದ್ದಾಗ ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ಕೊಟ್ಟು, ಅವರ ಪರ ಪ್ರಚಾರ ಮಾಡಿ, ಅವರನ್ನು ಗೆಲ್ಲಿಸಿದ್ದು ಯಾರು? ಎಂಬುದಕ್ಕೆ ಕಾಂಗ್ರೆಸ್‌ನವರು ಉತ್ತರಿಸಬೇಕು’ ಎಂದು ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ಪೆನ್‌ಡ್ರೈವ್‌ನಲ್ಲಿರುವ ವಿಡಿಯೊಗಳ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿದೆ. ವಿಡಿಯೊಗಳ ಬಗ್ಗೆ ಸತ್ಯಾಸತ್ಯತೆ ಹೊರಬಂದು ತಪ್ಪಿತಸ್ಥರಿಗೆ ಕಾನೂನಿನ ಅಡಿ ಶಿಕ್ಷೆ ಆಗಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಲವ್ ಜಿಹಾದ್‌ ತಂದಿದೆ. ಅದರ ಪ್ರಯೋಗ ಹುಬ್ಬಳ್ಳಿಯಲ್ಲಿ ಆಗಿದೆ. ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇನೆ. ನೇಹಾಗೆ ನ್ಯಾಯ ದೊರಕಿಸುವ ಕೆಲಸ ಮಾಡುತ್ತೇನೆ’ ಎಂದು ಹೇಳಿದರು.

ಬರ ಪರಿಹಾರ ರೈತರಿಗೆ ತಲುಪಿಸಿ

‘ಕೇಂದ್ರ ಸರ್ಕಾರ ರಾಜ್ಯಕ್ಕೆ ಬಿಡುಗಡೆ ಮಾಡಿರುವ ಬರ ಪರಿಹಾರಕ್ಕೆ ಕಾಂಗ್ರೆಸ್ ಸರ್ಕಾರ ತನ್ನ ಪಾಲು ಸೇರಿಸಿ ನೇರವಾಗಿ ರೈತರಿಗೆ ತಲುಪಿಸಬೇಕು. ಆ ಮೂಲಕ ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿಲ್ಲ ಎಂಬುದನ್ನು ತೋರ್ಪಡಿಸಬೇಕು. ಈ ಹಣವನ್ನು ಲೂಟಿ ಮಾಡಿ ಮಧ್ಯಪ್ರದೇಶ, ರಾಜಸ್ಥಾನಗಳಿಗೆ ಕಳಿಸಬಾರದು’ ಎಂದು ಆಗ್ರಹಿಸಿದರು.

‘ಕೇಂದ್ರ ಸರ್ಕಾರ ಬರ ಪರಿಸ್ಥಿತಿ ಅಧ್ಯಯನ ಮಾಡಿ ಚುನಾವಣಾ ನೀತಿ ಸಂಹಿತೆ ಇದ್ದರೂ ಚುನಾವಣಾ ಆಯೋಗಕ್ಕೆ ಮನವಿ ಮಾಡಿ ಕರ್ನಾಟಕ, ಕೇರಳ, ಅಸ್ಸಾಂ ರಾಜ್ಯಗಳಿಗೆ ಬರ ಪರಿಹಾರ ಬಿಡುಗಡೆ ಮಾಡಿದೆ. ರಾಜ್ಯದ ಇತಿಹಾಸದಲ್ಲಿ ಒಂದೇ ಕಂತಿನಲ್ಲಿ ಇಷ್ಟು ಪ್ರಮಾಣದ ಬರ ಪರಿಹಾರ ಹಣ ಬಿಡುಗಡೆಯಾಗಿದ್ದು ಇದೇ ಮೊದಲು‘ ಎಂದು ಹೇಳಿದರು.

‘ರಾಜ್ಯದಲ್ಲಿ ನಮ್ಮ ಸರ್ಕಾರ ಇದ್ದಾಗ ರೈತರ ಸಂಕಷ್ಟಕ್ಕೆ ಸ್ಪಂದಿಸಿದ್ದೇವೆ. ಈಗ ನೀವು ಆ ಕೆಲಸ ಮಾಡದಿದ್ದರೆ ನೀವು ರೈತರ ವಿರೋಧಿಗಳು ಎಂಬುದು ಸಾಬೀತಾಗುತ್ತದೆ’ ಎಂದರು.

‘ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಬರ ಪರಿಹಾರ ಹಣ ಆನೆಗೆ ಅರೆಕಾಸಿನ ಮಜ್ಜಿಗೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಆದರೆ, ಯುಪಿಎ ಸರ್ಕಾರ ಇದ್ದಾಗ ಸಾಸಿವೆ ಕಾಳಷ್ಟು ಪರಿಹಾರ ನೀಡಿಲ್ಲ. ಮನಮೋಹನ್‌ ಸಿಂಗ್ ನೇತೃತ್ವದ ಸರ್ಕಾರ ಇದ್ದಾಗ ರಾಜ್ಯಕ್ಕೆ ಭರಪೂರ ಅನ್ಯಾಯ ಮಾಡಲಾಗಿದೆ’ ಎಂದು ಆರೋಪಿಸಿದರು.

‘2005ರಿಂದ 2014ರವರೆಗೆ ಯುಪಿಎ ಸರ್ಕಾರ ಇದ್ದಾಗ ನಾವು ₹44,838 ಕೋಟಿ ಬರ ಪರಿಹಾರ ಕೇಳಿದ್ದೆವು. ಅವರು ₹4,571 ಕೋಟಿ ನೀಡಿದ್ದರು. 2014ರಿಂದ ಈವರೆಗೆ ಎನ್‌ಡಿಎ ಸರ್ಕಾರಕ್ಕೆ ರಾಜ್ಯ ಸರ್ಕಾರ ₹25,591 ಕೋಟಿ ಕೇಳಿತ್ತು. ₹15,920 ಕೋಟಿ ಬಿಡುಗಡೆ ಮಾಡಲಾಗಿದೆ. ಒಟ್ಟಾರೆ ಶೇ 62.21ರಷ್ಟು ಬಿಡುಗಡೆ ಆಗಿದ್ದು, ಇದು ನಮ್ಮ ಮಾರ್ಕ್ಸ್‌ ಕಾರ್ಡ್‌’ ಎಂದರು.

‘ಈಗ ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಕಾಂಗ್ರೆಸ್‌ನವರು ಹೇಳುತ್ತಾರೆ. ಆಗ ರಾಜ್ಯದ ಜನರ ಹಣಕ್ಕೆ ಬೆಲೆ ಇರಲಿಲ್ಲವೇ‌? ನಿಮ್ಮ ಸಂಸದರು ನಿದ್ದೆ ಮಾಡುತ್ತಿದ್ದರಾ’ ಎಂದು ಪ್ರಶ್ನಿಸಿದರು.

‘ರಾಜ್ಯದ ಬರ ಪರಿಸ್ಥಿತಿ ಅರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದು ಬರ ಪರಿಹಾರ ಹಣ ಬಿಡುಗಡೆಗೆ ಅನುಮತಿ ಕೋರಿದ್ದರು. ಇದು ಗೊತ್ತಾಗಿ ಕಾಂಗ್ರೆಸ್‌ನವರು ನ್ಯಾಯಾಲಯದ ಮೊರೆ ಹೋಗಿ, ನಾವೇ ಹೋರಾಟ ಮಾಡಿ ಬಿಡುಗಡೆ ಮಾಡಿಸಿದ್ದೇವೆ ಎಂದು ಹೇಳುತ್ತಿದ್ದಾರೆ. ಇದರಲ್ಲಿ ನಿಮ್ಮ ಪಾತ್ರ ಏನೂ ಇಲ್ಲ’ ಎಂದು ಹರಿಹಾಯ್ದರು.

‘ಸಾಮಾಜಿಕ ನ್ಯಾಯದ ಪರ ಮಾತನಾಡುವ ಕಾಂಗ್ರೆಸ್‌ ಸರ್ಕಾರ ಒಬಿಸಿ ಮೀಸಲಾತಿಯನ್ನು ಕಿತ್ತುಕೊಂಡು ಮುಸ್ಲಿಮರಿಗೆ ಕೊಡಲು ಹೊರಟಿದೆ. ಧರ್ಮಾಧಾರಿತ ಮೀಸಲಾತಿ ಇಲ್ಲ ಎಂದು ಸಂವಿಧಾನದಲ್ಲಿ ಹೇಳಲಾಗಿದೆ. ನೀವು ಸಂವಿಧಾನ ರಕ್ಷಕರೋ, ಭಕ್ಷಕರೋ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT