ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಚ್‌.ಕಾಂತರಾಜ ಆಯೋಗದ ವರದಿ ತಿರಸ್ಕರಿಸಿ, ಮರು ಸಮೀಕ್ಷೆಗೆ ಒತ್ತಾಯಿಸಿದ ಆರ್.ಅಶೋಕ

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ
Published 23 ನವೆಂಬರ್ 2023, 15:36 IST
Last Updated 23 ನವೆಂಬರ್ 2023, 15:36 IST
ಅಕ್ಷರ ಗಾತ್ರ

ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ವರದಿ ಸ್ವೀಕರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ತರಾತುರಿ ಮಾಡುತ್ತಿರುವುದು ಸಂಶಯಕ್ಕೆ ದಾರಿ ಮಾಡಿಕೊಟ್ಟಿದೆ. ದಶಕದ ಹಿಂದಿನ ಅವೈಜ್ಞಾನಿಕ ವರದಿ ತಿರಸ್ಕರಿಸಿ, ಮರು ಸಮೀಕ್ಷೆ ನಡೆಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಒತ್ತಾಯಿಸಿದರು.

ವಿಧಾನಸೌಧದಲ್ಲಿ ಗುರುವಾರ ನೂತನ ಕಚೇರಿಯ ಪೂಜೆ ನೆರವೇರಿಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಎಚ್‌.ಕಾಂತರಾಜ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿದ್ದ ವರದಿಯ ನೈಜತೆ ಬಗ್ಗೆ ಅನುಮಾನಗಳಿವೆ. ಪ್ರತಿ ಮನೆಗೂ ತೆರಳದೇ ವರದಿ ಸಿದ್ಧಪಡಿಸಲಾಗಿದೆ ಎಂದು ಸಾರ್ವಜನಿಕರೇ ಆರೋಪಿಸಿದ್ದಾರೆ. ಹತ್ತು ವರ್ಷಗಳ ಹಿಂದಿಗೂ, ಈಗಿನ ಜನಸಂಖ್ಯೆಗೂ ಸಾಕಷ್ಟು ವ್ಯತ್ಯಾಸವಿದೆ. ಈಗ ವರದಿಯ ಮೂಲ ಪ್ರತಿಯೇ ನಾಪತ್ತೆಯಾಗಿದೆ. ಅದಕ್ಕೆ ಕಾರ್ಯದರ್ಶಿಯ ಸಹಿಯೇ ಇಲ್ಲ ಎಂದು ದೂರಲಾಗಿದೆ. ಅಂತಹ ವರದಿಯನ್ನು ಲೋಕಸಭಾ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಓಲೈಕೆಗಾಗಿ ಸ್ವೀಕರಿಸಲು ಮುಖ್ಯಮಂತ್ರಿ ಮುಂದಾಗಿದ್ದಾರೆ ಎಂದು ದೂರಿದರು.

ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನೀಡಬೇಕು ಎಂಬ ವಿಷಯದಲ್ಲಿ ಬಿಜೆಪಿಗೂ ಸಹಮತವಿದೆ. ಆದರೆ, ಅವೈಜ್ಞಾನಿಕ, ವಿವಾದಿತ ವರದಿ ಆಧರಿಸಿ ಕ್ರಮಕ್ಕೆ ಮುಂದಾದರೆ ಪಕ್ಷ ವಿರೋಧಿಸುತ್ತದೆ.  ವಿರೋಧ ವ್ಯಕ್ತಪಡಿಸಿರುವ ವಿವಿಧ ಸಮುದಾಯಗಳ ಮುಖಂಡರು, ಧರ್ಮಗುರುಗಳನ್ನು ಕರೆದು ಮಾತನಾಡಬೇಕು. ಹಿಂದೆ ವೀರಶೈವ ಲಿಂಗಾಯತ ಧರ್ಮ ಒಡೆಯಲು ಮುಂದಾಗಿದ್ದರ ಪರಿಣಾಮ ನೆನಪು ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಯಾರದೋ ಮನೆಯಲ್ಲಿ ಕುಳಿತು ರೂಪಿಸಿದ ಅವೈಜ್ಞಾನಿಕ ವರದಿ ತಿರಸ್ಕರಿಸಿ, ಮರುಸಮೀಕ್ಷೆ ನಡೆಸದೇ ಇದ್ದರೆ ಪಕ್ಷ ರಾಜ್ಯದಾದ್ಯಂತ ಹೋರಾಟ ನಡೆಸಲಿದೆ ಎಂದರು.

ರಾಜಕೀಯ ಲಾಭಕ್ಕೆ ವರದಿ ಪ್ರಸ್ತಾಪ: ಬೊಮ್ಮಾಯಿ ‘ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವುದರಿಂದ ರಾಜಕೀಯ ಲಾಭ ಪಡೆಯುವುದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ಗಣತಿ ವಿಷಯ ಪ್ರಸ್ತಾಪ ಮಾಡುತ್ತಿದ್ದಾರೆ’ ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು. ಹಿಂದುಳಿದ ವರ್ಗಗಳ ಆಯೋಗ ಸರಿಯಾಗಿ ಸಮೀಕ್ಷೆ ನಡೆಸಿಲ್ಲ. ಅಧ್ಯಕ್ಷರು ಸದಸ್ಯರ ಮಧ್ಯೆ ಸಮನ್ವಯ ಇರಲಿಲ್ಲ ರಾಜಕೀಯ ಹಸ್ತಕ್ಷೇಪವೂ ಇತ್ತು. ಆಗಲೂ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಸುಮ್ಮನಿದ್ದರಲ್ಲದೇ ವರದಿಯನ್ನು ಪಡೆಯಲಿಲ್ಲ. ಈಗ ಚುನಾವಣೆ ಕಾರಣಕ್ಕೆ ಇದರ ಪ್ರಸ್ತಾಪ ಮಾಡುತ್ತಿದ್ದಾರೆ. ವರದಿ ಸ್ವೀಕರಿಸಿದ ಮೇಲೆ ನಮ್ಮ ತೀರ್ಮಾನ ತಿಳಿಸುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT