ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ: ರಸ್ತೆ ಜಲಾವೃತ, ಸೇತುವೆ–ಮನೆಗಳಿಗೆ ಹಾನಿ

Published 23 ಜುಲೈ 2023, 16:40 IST
Last Updated 23 ಜುಲೈ 2023, 16:40 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾನುವಾರ ಮಳೆಗೆ ರಸ್ತೆಗಳು ಜಲಾವೃತಗೊಂಡಿದ್ದು, ಸಂಚಾರ ವ್ಯತ್ಯಯವಾಗಿದೆ. ಹಲವೆಡೆ ಸೇತುವೆಗಳು ಹಾಗೂ ಮನೆಗಳಿಗೆ ಹಾನಿಯುಂಟಾಗಿದೆ.

ಕೊಡಗು ಜಿಲ್ಲೆಯಲ್ಲಿ ನಾಪೋಕ್ಲು– ಮೂರ್ನಾಡು ಸಂಪರ್ಕ ರಸ್ತೆಯ ಹೊದ್ದೂರು ಬಳಿ ಬೊಳಿಬಾಣೆ ಹಾಗೂ ಹಾವೇರಿ ಜಿಲ್ಲೆ ಸವಣೂರು ತಾಲ್ಲೂಕಿನ ಕಳಸೂರು ಬಳಿ ರಸ್ತೆಗಳು ಜಲಾವೃತವಾಗಿದ್ದು, ಸಂಪರ್ಕ ಕಡಿತಗೊಂಡಿದೆ.

ಕೊಡಗು ಜಿಲ್ಲೆಯ ನಾಗರಹೊಳೆ ಅರಣ್ಯದಂಚಿನ ಚಿಣ್ಣರಹಾಡಿಗೆ ಸಂಪರ್ಕ ಕಲ್ಪಿಸುವ ತೋಡಿಗೆ ನಿರ್ಮಿಸಿದ್ದ ಕಾಲುಸೇತುವೆ ಕೊಚ್ಚಿಕೊಂಡು ಹೋಗಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲ್ಲೂಕಿನ ಐದು ಹಾಗೂ ಚಿಕ್ಕೋಡಿ ತಾಲ್ಲೂಕಿನ ಒಂದು ಸೇತುವೆ ಮುಳುಗಿವೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ವನಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಣಗೇರಿ ಗ್ರಾಮದ ಸೇತುವೆ ಮೇಲೆ ನೀರು ಹರಿದಿದ್ದು, ಕೊಡಗಿನ ಸೋಮವಾರಪೇಟೆ - ವನಗೂರು ಸಂಪರ್ಕಿಸುವ ರಸ್ತೆಯಲ್ಲಿ ಸಂಚಾರ ಬಂದ್ ಆಗಿತ್ತು.

ಮನೆಗಳಿಗೆ ಹಾನಿ: ಕೊಡಗು ಜಿಲ್ಲೆಯ ಕುಂಜಿಲ ಗ್ರಾಮದ ಮಕ್ಕಿ ಉಮ್ಮರ್ ಅವರ ಮನೆಯ ಚಾವಣಿಯ ಶೀಟ್‌ಗಳು ಹಾರಿ ಹೋಗಿವೆ. ಧಾರವಾಡ ಜಿಲ್ಲೆಯ ವಿವಿಧ ತಾಲ್ಲೂಕಿನ ಗ್ರಾಮಗಳಲ್ಲಿ ಸುಮಾರು 24 ಮನೆಗಳಿಗೆ ಹಾನಿ ಆಗಿದೆ. ಉಡುಪಿ ಜಿಲ್ಲೆಯಲ್ಲಿ ಕುಂದಾಪುರ ತಾಲ್ಲೂಕಿನ ‌ವಿವಿಧ ಗ್ರಾಮಗಳ ಮನೆಗಳಿಗೆ ಹಾನಿಯಾಗಿದೆ. ಕಬ್ಬಿನಾಲೆ, ಹಳ್ಳಿ ಹೊಳೆಯಲ್ಲಿ ಅಡಿಕೆ ತೋಟಕ್ಕೆ ಹಾನಿಯಾಗಿದೆ.

ಜಾನುವಾರು ಸಾವು

ಧಾರವಾಡ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಮೂರು ಆಡುಗಳು ಹಾಗೂ ಒಂದು ದನ ಹಾಗೂ ಎಮ್ಮೆ ಮೃತಪಟ್ಟಿವೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನಲ್ಲಿ ಒಂದು ಎತ್ತು ಮೃತಪಟ್ಟಿದೆ.

ಮಂಗಳೂರಿನ ಮುಂಡಾಜೆ ಸಮೀಪದ ಅಂಬಡ್ತ್ಯಾರು ಬಳಿ  ರಾಷ್ಟ್ರೀಯ ಹೆದ್ದಾರಿಗೆ ಮರ ಬಿದ್ದು– ಚಿಕ್ಕಮಗಳೂರು– ಮಂಗಳೂರು ನಡುವೆ ಸಂಪರ್ಕ ಒಂದೂವರೆ ಗಂಟೆ ಕಾಲ ಕಡಿತಗೊಂಡಿತ್ತು. ನಗರದ ನಾರಾಯಣಗುರು ವೃತ್ತದ ಬಳಿ ಸುಮಾರು 300 ವರ್ಷಗಳಷ್ಟು ಹಳೆಯ ಆಲದ ಮರ ರಸ್ತೆಗುರುಳಿದೆ. 

ಮಹಿಳೆಗೆ ಗಾಯ: ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕು ಹೊಳಲು ಗ್ರಾಮದಲ್ಲಿ ಮಣ್ಣಿನ ಮಾಳಿಗೆ ಮನೆ ಕುಸಿದು ಮಹಿಳೆಯೊಬ್ಬರು ಗಾಯಗೊಂಡಿದೆ.

ಜಲಪಾತ ವೀಕ್ಷಣೆಗೆ ನಿಷೇಧ

ಬೆಳಗಾವಿ ನಗರ ಹಾಗೂ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗಿದೆ. ಖಾನಾಪುರ ತಾಲ್ಲೂಕಿನಲ್ಲಿ ಮಳೆ ಮತ್ತಷ್ಟು ಬಿರುಸು ಪಡೆದ ಕಾರಣ ಜಲಪಾತಗಳ ವೀಕ್ಷಣೆ ಮೇಲೆ ಹೇರಿದ ನಿಷೇಧವನ್ನು ಮುಂದುವರಿಸಲಾಗಿದೆ. 

ನಿರ್ಬಂಧದ ನಡುವೆಯೂ ಮಹಾರಾಷ್ಟ್ರ ಗಡಿಯಲ್ಲಿರುವ ಬಾಬಾಫಾಲ್ಸ್‌ ನೋಡಲು ಹೆಚ್ಚು ಜನ ಓಡಾಡುವುದು ಭಾನುವಾರ ಕಂಡುಬಂತು. ಶಿಂಧೋಳಿ– ತಿಲಾರಿ ಮಾರ್ಗದ ರಸ್ತೆಯ ಮೇಲೆ ಎರಡು ಅಡಿಯಷ್ಟು ನೀರು ಹರಿಯುತ್ತಿದ್ದರೂ ಜನ ನಡೆದುಕೊಂಡು ಸಾಗಿದ್ದು ಕಂಡುಬಂತು.

ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಅಲ್ಲಲ್ಲಿ ಮನೆಗಳು ಕುಸಿದಿದ್ದರೆ, ಮರಗಳು ಧರೆಗುರುಳಿವೆ. ಶೃಂಗೇರಿ–ಮಂಗಳೂರು ಹೆದ್ದಾರಿಯಲ್ಲಿ ಸಂಪರ್ಕ ಕಡಿತಗೊಂಡಿದೆ.

ದಾವಣಗೆರೆ ಜಿಲ್ಲೆಯ ಜಿಲ್ಲೆಯ ವಿವಿಧೆಡೆ ಬಿರುಸಿನ ಮಳೆಯಾಗಿದೆ. ಇದರಿಂದಾಗಿ ರೈತರ ಮೊಗದಲ್ಲಿ ಸಂತಸ ಮೂಡಿದೆ.

ಮುನ್ನೆಚ್ಚರಿಕೆ

ಕರಾವಳಿ ಭಾಗದಲ್ಲಿ ಬಿರುಗಾಳಿಯು ಗಂಟೆಗೆ 40–45 ಕಿಲೋ ಮೀಟರ್‌ನಿಂದ 55 ಕಿಲೋ ಮೀಟರ್‌ ವೇಗದಲ್ಲಿ ಬೀಸುವ ಸಾಧ್ಯತೆಯಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ರಾಜ್ಯದ ಇತರೆ ಭಾಗದಲ್ಲಿ ಬಿರುಗಾಳಿಯು ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆಯಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT