ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ವಿವಿಧೆಡೆ ಇನ್ನೂ ಒಂದು ವಾರ ಮಳೆ ಮುಂದುವರಿಕೆ: ಹವಾಮಾನ ಇಲಾಖೆ

Published 9 ಮೇ 2024, 14:41 IST
Last Updated 9 ಮೇ 2024, 14:41 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ವಿವಿಧೆಡೆ ಇನ್ನೂ ಒಂದು ವಾರ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.

ಮೇ 10ರಂದು ಚಾಮರಾಜನಗರ, ಮೈಸೂರು, ಮಂಡ್ಯ, ಕೋಲಾರ, ಹಾಸನ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಬಿರುಗಾಳಿಯೊಂದಿಗೆ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ.

ಬೀದರ್‌, ಕಲಬುರಗಿ, ಯಾದಗಿರಿ, ಕೊಪ್ಪಳ, ಚಿಕ್ಕಮಗಳೂರು, ಹಾಸನ, ಕೊಡಗು, ತುಮಕೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆ ಬೀಳಲಿದೆ. ಬಳ್ಳಾರಿ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ದಾವಣಗೆರೆ, ರಾಮನಗರ, ಶಿವಮೊಗ್ಗ, ವಿಜಯನಗರ, ರಾಯಚೂರು, ಕೊಪ್ಪಳ, ಬಾಗಲಕೋಟೆ, ವಿಜಯಪುರ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೆಲವೆಡೆ ಸ್ವಲ್ಪ ಮಳೆ ಬರಲಿದೆ. 

ಮೇ 11ರಂದು ಈ ಜಿಲ್ಲೆಗಳಲ್ಲದೇ ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ, ಉಡುಪಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಮುಂದಿನ ಒಂದು ವಾರ ಪ್ರತಿದಿನ ಸಂಜೆಯ ಹೊತ್ತಿಗೆ ಮಳೆ ಬರುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುಂದಿನ 24 ಗಂಟೆಗಳಲ್ಲಿ ತಾಪಮಾನದಲ್ಲಿ ಹೆಚ್ಚಿನ ಬದಲಾವಣೆ ಇರುವುದಿಲ್ಲ. ಬಳಿಕ ತಾಪಮಾನ 2ರಿಂದ 4 ಡಿಗ್ರಿ ಸೆಲ್ಸಿಯಸ್‌ ಕಡಿಮೆಯಾಗುವ ಸಾಧ್ಯತೆಯಿದೆ. ತಾಪಮಾನ ಗರಿಷ್ಠ 34 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್‌ ಇರಲಿದೆ.

ಮಳೆ ಪ್ರಮಾಣ: ಕಲಬುರಗಿ ಜಿಲ್ಲೆಯ ಸೇಡಂನಲ್ಲಿ 6 ಸೆಂ.ಮೀ., ಬೀದರ್‌, ಚಾಮರಾಜನಗರ ಜಿಲ್ಲೆಯ ಬೇಗೂರು, ಕೊಡಗು ಜಿಲ್ಲೆಯ ನಾಪೊಕ್ಲುಗಳಲ್ಲಿ 4.ಸೆಂ.ಮೀ., ಮಂಡ್ಯ ಜಿಲ್ಲೆಯ ಮದ್ದೂರು, ಕೃಷ್ಣರಾಜಸಾಗರದಲ್ಲಿ 3 ಸೆಂ.ಮೀ. ಮಳೆಯಾಗಿದೆ. ರಾಮನಗರ, ಮಂಡ್ಯ, ಕೊಡಗು ಜಿಲ್ಲೆಯ ಭಾಗಮಂಡಲ, ಬೆಂಗಳೂರು ನಗರ, ಮೈಸೂರು, ನಂಜನಗೂಡು, ಯಾದಗಿರಿ ಜಿಲ್ಲೆಯ ಸುರಪುರಗಳಲ್ಲಿ 2 ಸೆಂ.ಮೀ. ಮಳೆಯಾಗಿರುವುದು ದಾಖಲಾಗಿದೆ.

ಕೊಡಗಿನಲ್ಲಿ ವರ್ಷಧಾರೆ

ಮಡಿಕೇರಿ: ಕೊಡಗು ಜಿಲ್ಲೆಯ ಅಲ್ಲಲ್ಲಿ ಗುರುವಾರವೂ ಬಿರುಸಿನಿಂದ ಮಳೆ ಸುರಿದಿದೆ. ಮಡಿಕೇರಿ, ಸುಂಟಿಕೊಪ್ಪ, ನಾಪೋಕ್ಲು ಭಾಗದಲ್ಲಿ ಧಾರಾಕಾರ ಮಳೆಯಾಗಿದೆ. ಗೋಣಿಕೊಪ್ಪಲು ಭಾಗದಲ್ಲಿ ಸಾಧಾರಣ ಮಳೆ ಸುರಿದಿದೆ.

ಗುಡುಗು ಸಿಡಿಲು, ಬಿರುಗಾಳಿಯೊಂದಿಗೆ ಸುರಿದ ಮಳೆಯು ಬಿಸಿಲ ಬೇಗೆಯನ್ನು ಕಡಿಮೆ ಮಾಡಿತು. ಏಳನೇ ಹೊಸಕೋಟೆ, ಕೆದಕಲ್, ಗದ್ದೆಹಳ್ಳ ಭಾಗದಲ್ಲಿ ಹೆಚ್ಚು ಮಳೆ ಸುರಿದಿದೆ.

ನಾಪೋಕ್ಲು ವ್ಯಾಪ್ತಿಯಲ್ಲಿ ಸುರಿದ ಭಾರಿ ಗಾಳಿ ಮಳೆಗೆ ಹಲವೆಡೆ ಹಾನಿ ಸಂಭವಿಸಿದೆ. ಪಟ್ಟಣದಲ್ಲಿ ಕೆಲವು ಮನೆಗಳಿಗೆ ನೀರು ನುಗ್ಗಿದೆ. ಗ್ರಾಮೀಣ ಪ್ರದೇಶದಲ್ಲಿ ಗಾಳಿಗೆ ಮರದ ರೆಂಬೆಗಳು ಮುರಿದುಬಿದ್ದಿವೆ. ಕೆಲವು ಭಾಗಗಳಲ್ಲಿ ವಿದ್ಯುತ್ ಕಂಬಗಳು ತುಂಡಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

(ರಾಯಚೂರು ವರದಿ): ಜಿಲ್ಲೆಯ ರಾಯಚೂರು ಗ್ರಾಮೀಣ, ಕವಿತಾಳ ಸೇರಿದಂತೆ ವಿವಿಧೆಡೆ ಗುರುವಾರ ಸಾಧಾರಣ ಮಳೆಯಾಗಿದೆ.

ಕವಿತಾಳದಲ್ಲಿ ಬಿರುಗಾಳಿ, ಗುಡುಗು ಸಹಿತ ಸುಮಾರು 20 ನಿಮಿಷ ಮಳೆಯಾಗಿದೆ. ಮಾನ್ವಿಯಲ್ಲಿ ಆಲಿಕಲ್ಲು ಮಳೆ ಸುರಿದಿದೆ. ಮಳೆಯಿಂದಾಗಿ ವಾತಾವರಣ ತುಸು ತಂಪಾಗಿದೆ.

(ಬಳ್ಳಾರಿ ವರದಿ): ಬಳ್ಳಾರಿ ನಗರದಲ್ಲಿ ಗುರುವಾರ ಸಂಜೆ ಸಿಡಿಲು, ಗುಡುಗು, ಗಾಳಿ ಸಹಿತ ಮಳೆಯಾಯಿತು.

ಕಂಪ್ಲಿ ತಾಲ್ಲೂಕಿನ ಮೆಟ್ರಿ, ಚಿನ್ನಾಪುರ ಸೇರಿ ವಿವಿಧ ಗ್ರಾಮಗಳಲ್ಲಿ ಬುಧವಾರ ತಡರಾತ್ರಿ ಗುಡುಗು, ಮಿಂಚು, ಬಿರುಗಾಳಿ ಸಹಿತ ಮಳೆಯಾಯಿತು. ಚಿನ್ನಾಪುರ ಗ್ರಾಮದಲ್ಲಿ ಬೇವಿನ ಮರ ನೆಲಕ್ಕುರುಳಿದರೆ, ಮೆಟ್ರಿ ಗ್ರಾಮದಲ್ಲಿ ತೋಟಗಳಿಗೆ ಅಳವಡಿಸಿದ್ದ ರಕ್ಷಣಾ ಕಂಬಗಳು ತುಂಡಾದವು. ಇಡೀ ರಾತ್ರಿ ವಿದ್ಯುತ್ ಕಡಿತಗೊಂಡಿತ್ತು.

ಗುಳೇದಗುಡ್ಡ (ಬಾಗಲಕೋಟೆ ಜಿಲ್ಲೆ): ಗುಳೇದಗುಡ್ಡ ಪಟ್ಟಣ ಹಾಗೂ ಪಟ್ಟಣದ ಸುತ್ತಮುತ್ತ ಅರ್ಧಗಂಟೆ ಮಳೆ ಸುರಿಯಿತು. ಮಳೆಯಿಂದ ವಾತಾವರಣ ತಂಪಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT