ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅರುಣ್ ಕುಮಾರ್ ಪುತ್ತಿಲ ವಿರುದ್ಧ ಅತ್ಯಾಚಾರ ಆರೋಪ: ಪ್ರಕರಣಕ್ಕೆ ಹೈಕೋರ್ಟ್ ತಡೆ

Published : 11 ಸೆಪ್ಟೆಂಬರ್ 2024, 15:21 IST
Last Updated : 11 ಸೆಪ್ಟೆಂಬರ್ 2024, 15:21 IST
ಫಾಲೋ ಮಾಡಿ
Comments

ಬೆಂಗಳೂರು: ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅತ್ಯಾಚಾರ ಆರೋಪದ ಎಫ್‌ಐಆರ್ ಮತ್ತು ವಿಚಾರಣಾ ನ್ಯಾಯಾಲಯದ ನ್ಯಾಯಿಕ ಪ್ರಕ್ರಿಯೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

‘ನನ್ನ ವಿರುದ್ಧದ ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿ ಅರುಣ್ ಕುಮಾರ್ ಪುತ್ತಿಲ (54) ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಪಿ.ಪಿ.ಹೆಗ್ಡೆ, ‘ಇದೊಂದು ದುರದ್ದೇಶಪೂರಿತ ಕ್ರಿಮಿನಲ್‌ ಪ್ರಕರಣ. ಪುತ್ತಿಲ ಅವರ ವಿರುದ್ಧ ರಾಜಕೀಯ ಚಿತಾವಣೆ ನಡೆಸಲು ಈ ದೂರು ದಾಖಲಿಸಲಾಗಿದೆ. ದೂರುದಾರ ಮಹಿಳೆಯ ನಡವಳಿಕೆ ಅಸಹಜ ಮತ್ತು ಅನುಮಾನಾಸ್ಪದವಾಗಿದೆ’ ಎಂದು ವಿವರಿಸಿದರು. 

‘ಅರ್ಜಿದಾರರ ಗೌರವಕ್ಕೆ ಧಕ್ಕೆ ತರುವ ಹೇಳಿಕೆಗಳನ್ನು ನೀಡಬಾರದು ಎಂದು ಬೆಂಗಳೂರಿನ ಸಿವಿಲ್ ನ್ಯಾಯಾಲಯ ಆಗಸ್ಟ್ 28ರಂದು ಪ್ರತಿಬಂಧಕ ಆದೇಶ ಹೊರಡಿಸಿತ್ತು. ಇದಾದ ಬಳಿಕ, ಅತ್ಯಾಚಾರ, ಲೈಂಗಿಕ ಶೋಷಣೆ ಆರೋಪದ ಈ ಎಫ್‌ಐಆರ್ ದಾಖಲಿಸಲಾಗಿದೆ. 2023ರ ಜೂನ್ ತಿಂಗಳಲ್ಲಿ ನಡೆದಿದೆ ಎನ್ನಲಾದ ಘಟನೆಗೆ ಸಂಬಂಧಿಸಿದಂತೆ 47 ವರ್ಷದ ಫಿರ್ಯಾದುದಾರ ಮಹಿಳೆ 2024ರ ಸೆಪ್ಟೆಂಬರ್ 2ರಂದು ದೂರು ದಾಖಲಿಸಿದ್ದಾರೆ. ಆದ್ದರಿಂದ, ಪ್ರಕರಣ ರದ್ದುಪಡಿಸಬೇಕು’ ಎಂದು ಮನವಿ ಮಾಡಿದರು. ಇದನ್ನು ಮನ್ನಿಸಿದ ನ್ಯಾಯಪೀಠ ಪ್ರಕರಣದ ವಿಚಾರಣೆಗೆ ತಡೆ ನೀಡಿ ಫಿರ್ಯಾದುದಾರ ಮಹಿಳೆಗೆ ತುರ್ತು ನೋಟಿಸ್‌ ಜಾರಿಗೆ ಆದೇಶಿಸಿತು.

ಪ್ರಕರಣವೇನು?: ‘ಅರುಣ್ ಕುಮಾರ್ ಪುತ್ತಿಲ ಅವರು 2023ರ ಜೂನ್ ತಿಂಗಳಲ್ಲಿ ಬೆಂಗಳೂರಿನ ಪೈ ವಿಸ್ತಾ ಹೋಟೆಲ್‌ಗೆ ಕರೆಸಿಕೊಂಡು ನನ್ನ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಇದಾದ ಬಳಿಕ ಅನೇಕ ಕಡೆ ಮುಖಾಮುಖಿ ಭೇಟಿ ಮಾಡಿ ಬೆದರಿಕೆ ಒಡ್ಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿ, ಹಲವು ರೀತಿಯಲ್ಲಿ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ’ ಎಂದು ಆರೋಪಿಸಿ ಮಹಿಳೆಯು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಅನ್ವಯ ಪೊಲೀಸರು ಭಾರತೀಯ ದಂಡ ಸಂಹಿತೆ–1860ರ ಕಲಂ 417, 354 ಎ ಮತ್ತು 506ರ ಅಡಿಯಲ್ಲಿ ಎಫ್ಐಆರ್‌ ದಾಖಲಿಸಿದ್ದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT