ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋಷಿತರ ಸಮಾವೇಶ: ಜಾತಿ ಗಣತಿ ವರದಿ ಸ್ವೀಕರಿಸಲು ಸಿದ್ಧ– ಸಿ.ಎಂ ಸಿದ್ದರಾಮಯ್ಯ

Published 28 ಜನವರಿ 2024, 15:07 IST
Last Updated 28 ಜನವರಿ 2024, 15:07 IST
ಅಕ್ಷರ ಗಾತ್ರ

ಚಿತ್ರದುರ್ಗ: ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸಿದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ (ಜಾತಿ ಗಣತಿ) ವರದಿಯನ್ನು ಸ್ವೀಕರಿಸಲು ಸಿದ್ಧನಿದ್ದೇನೆ. ವರದಿಯಲ್ಲಿ ವ್ಯತ್ಯಾಸಗಳಿದ್ದರೆ ತಜ್ಞರ ಅಭಿಪ್ರಾಯ ಪಡೆದು ಮುಂದುವರಿಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದರು.

ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ವತಿಯಿಂದ ಭಾನುವಾರ ಏರ್ಪಡಿಸಿದ್ದ ‘ಶೋಷಿತರ ಜಾಗೃತಿ’ ಸಮಾವೇಶ ಉದ್ಘಟಿಸಿ ಅವರು ಮಾತನಾಡಿದರು. ಜಾತಿ ಗಣತಿ ಅನುಷ್ಠಾನಕ್ಕೆ ಸಿದ್ದರಾಮಯ್ಯ ಜೊತೆಗೆ ನಿಲ್ಲುವುದಾಗಿ ಅನೇಕ ಸಚಿವರು ಸಮಾವೇಶದಲ್ಲಿ ವಾಗ್ದಾನ ನೀಡಿದರು.

‘ವರದಿಯನ್ನು ಯಾರೊಬ್ಬರೂ ನೋಡಿಲ್ಲ, ಓದಿಲ್ಲ. ಆದರೂ, ಸಮೀಕ್ಷೆ ಅವೈಜ್ಞಾನಿಕವಾಗಿ ನಡೆದಿದೆ ಎಂಬ ಅಪಸ್ವರಗಳನ್ನು ಎತ್ತಿದ್ದಾರೆ. ವರದಿಯಲ್ಲಿ ಏನಿದೆ ಎಂಬುದನ್ನು ಅರಿಯದೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆಯೋಗದ ಅಧ್ಯಕ್ಷರು ಸಲ್ಲಿಸುವ ವರದಿಯನ್ನು ಸಚಿವ ಸಂಪುಟದ ಮುಂದಿಟ್ಟು ಚರ್ಚಿಸುತ್ತೇನೆ. ಸರ್ವಾಧಿಕಾರಿ ರೀತಿಯಲ್ಲಿ ತೀರ್ಮಾನ ಕೈಗೊಳ್ಳುವುದಿಲ್ಲ. ಸದಾಕಾಲ ನಿಮ್ಮ ಪರವಾಗಿ ನಿಲ್ಲುವೆ’ ಎಂದು ಹೇಳಿದಾಗ ಇಡೀ ಸಭಾಂಗಣ ಕರತಾಡನ ಮಾಡಿ ಸಮ್ಮತಿ ಸೂಚಿಸಿತು.

‘ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಎಚ್‌.ಕಾಂತರಾಜ್‌ ನೇತೃತ್ವದ ಆಯೋಗಕ್ಕೆ ಸೂಚನೆ ನೀಡಿದ್ದೆ. ಈ ಕಾರ್ಯಕ್ಕಾಗಿ ₹ 168 ಕೋಟಿ ಅನುದಾನವನ್ನು ಒದಗಿಸಿದ್ದೆ. ನನ್ನ ಅಧಿಕಾರವಧಿಯಲ್ಲಿ ವರದಿ ಪೂರ್ಣಗೊಂಡಿರಲಿಲ್ಲ. ಆ ಬಳಿಕ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿ, ಬಿ.ಎಸ್‌.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಜಾತಿ ಗಣತಿ ವರದಿ ಸ್ವೀಕರಿಸಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ, ಆರ್‌ಎಸ್‌ಎಸ್‌ ವಿರುದ್ಧ ವಾಗ್ದಾಳಿ: ‘ಮೀಸಲಾತಿ ಹಾಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಹಿಂದಿನಿಂದಲೂ ವಿರೋಧಿಸುತ್ತಿವೆ. ಮಂಡಲ್‌ ಆಯೋಗದ ವರದಿಗೆ ವಿರುದ್ಧವಾಗಿ ಆರ್‌ಎಸ್‌ಎಸ್‌ ಕಮಂಡಲ ಚಳವಳಿ ರೂಪಿಸುವುದಾಗಿ ಬಹಿರಂಗವಾಗಿ ಹೇಳಿತ್ತು. ಜಾತಿ ಹೆಸರಿನಲ್ಲಿ ಸಮಾಜವನ್ನು ಛಿದ್ರಗೊಳಿಸುವ ಸಂವಿಧಾನ ವಿರೋಧಿಗಳನ್ನು ತಿರಸ್ಕರಿಸಬೇಕು’ ಎಂದು ಸಿದ್ದರಾಮಯ್ಯ ಕರೆ ನೀಡಿದರು.

‘ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ವಿರೋಧಿಸುವವರು ಶೋಷಿತರ ವೈರಿಗಳು ಎಂಬುದನ್ನು ಸ್ಪಷ್ಟವಾಗಿ ಅರಿಯಬೇಕು. ಇಂತಹವರ ಜೊತೆಗೆ ಯಾವುದೇ ಕಾರಣಕ್ಕೂ ಇರಬಾರದು. ಇದರಿಂದ ಶೋಷಿತರ ಕೈಗೆ ಅಧಿಕಾರ ಬರಲು ಸಾಧ್ಯವಿಲ್ಲ. ಶೋಷಿತ ಸಮುದಾಯದ ಕೆಲ ನಾಯಕರು ಸ್ವಾರ್ಥಕ್ಕಾಗಿ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಸೇರಿ ಸಮುದಾಯದ ದಾರಿ ತಪ್ಪಿಸುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಪ್ರಧಾನ ಸಂಚಾಲಕ ಕೆ.ಎಂ.ರಾಮಚಂದ್ರಪ್ಪ ಸಮಾವೇಶದ 12 ಹಕ್ಕೋತ್ತಾಯಗಳನ್ನು ಮಂಡಿಸಿದರು. ಸಚಿವರಾದ ಕೆ.ಎಚ್‌.ಮುನಿಯಪ್ಪ, ಎಚ್‌.ಸಿ.ಮಹದೇವಪ್ಪ, ದಿನೇಶ್‌ ಗುಂಡೂರಾವ್‌, ಮಧು ಬಂಗಾರಪ್ಪ, ಆರ್‌.ಬಿ.ತಿಮ್ಮಾಪುರ, ಶಿವರಾಜ ತಂಗಡಗಿ, ಸಂತೋಷ್‌ ಲಾಡ್‌, ಜಮೀರ್‌ ಅಹಮ್ಮದ್‌ ಖಾನ್‌, ಬೈರತಿ ಸುರೇಶ್, ಬಿ.ನಾಗೇಂದ್ರ, ರಹೀಂಖಾನ್‌, ಡಿ.ಸುಧಾಕರ್‌, ಬೋಸರಾಜ್‌ ಇದ್ದರು.

ಗಾಬರಿ ಬೇಡ: ಡಿಕೆಶಿ

ಜಾತಿ ಗಣತಿ ವರದಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ಯಾರೂ ಗಾಬರಿಯಾಗುವುದು ಬೇಡ. ಎಲ್ಲರೂ ಒಗ್ಗೂಡಿ ಮುನ್ನಡೆಯೋಣ. ಕಾಂಗ್ರೆಸ್‌ ನೇತೃತ್ವದ ಸರ್ಕಾರ ಎಲ್ಲರ ರಕ್ಷಣೆಗೆ ಬದ್ಧವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಭರವಸೆ ನೀಡಿದರು.

‘ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಎಲ್ಲ ವರ್ಗದ ಜನರಿಗೆ ನ್ಯಾಯ ಒದಗಿಸಿಕೊಡುವ ಆಶಯ ಹೊಂದಿದ್ದಾರೆ. ದೇಶದ ಎಲ್ಲೆಡೆ ಜಾತಿ ಗಣತಿ ನಡೆಯಬೇಕು ಎಂಬುದಾಗಿ ಪ್ರತಿಪಾದಿಸಿದ್ದಾರೆ. ಇದಕ್ಕೆ ಕಾಂಗ್ರೆಸ್‌ ಬದ್ಧವಾಗಿದೆ’ ಎಂದು ಕಾಂತರಾಜ್‌ ವರದಿಯನ್ನು ಉಲ್ಲೇಖಿಸದೇ ಮಾತನಾಡಿದರು.

ಕಾರ್ಯಕ್ರಮ ಉದ್ಘಾಟನೆಗೂ ಮುನ್ನವೇ ಮಾತು ಮುಗಿಸಿದ ಡಿ.ಕೆ.ಶಿವಕುಮಾರ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಡೊಳ್ಳು ಬಾರಿಸಿ ಸಮಾವೇಶಕ್ಕೆ ಚಾಲನೆ ನೀಡಿದರು. ಹಕ್ಕೋತ್ತಾಯಗಳ ಪ್ರತಿ ಸ್ವೀಕರಿಸಿ ವೇದಿಕೆಯಿಂದ ಬಹುಬೇಗ ನಿರ್ಗಮಿಸಿದರು.

‘ಸಿ.ಎಂ. ‘ಕೈ’ ಬಲಪಡಿಸಿ’

ಮುಂಬರುವ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ‘ಕೈ’ ಬಲಪಡಿಸಲು ಸೈನಿಕರಂತೆ ಕೆಲಸ ಮಾಡಬೇಕಿದೆ. ಅವರಿಗೆ ಶಕ್ತಿ ಕೊಟ್ಟಷ್ಟು ಶೋಷಿತ ಸಮುದಾಯಕ್ಕೆ ಲಾಭವಾಗಲಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಕರೆ ನೀಡಿದರು.

‘ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಬಳಿಕ ರಾಜ್ಯ ಸಾಕಷ್ಟು ಬದಲಾವಣೆ ಕಂಡಿದೆ. ಶೋಷಿತ ಸಮುದಾಯ ಒಗ್ಗಟ್ಟಿನಿಂದ ಇರಬೇಕಾದ ಅಗತ್ಯವಿದೆ. ಲೋಕಸಭಾ ಚುನಾವಣೆಯಲ್ಲಿ ಧರ್ಮ ಆಧಾರಿತ ಮತ ಸೆಳೆಯುವ ಹುನ್ನಾರ ನಡೆಯಲಿದೆ. ಮೋಸ, ವಂಚನೆಗೆ ಬಲಿಯಾಗದೆ ನಿರ್ಧಾರ ಕೈಗೊಳ್ಳಬೇಕು. ಸಿದ್ದರಾಮಯ್ಯ ಅವರ ಪರವಾಗಿ ನಿಲ್ಲಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT