ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರೇಣುಕಸ್ವಾಮಿ ಕೊಲೆ ಪ್ರಕರಣ | ದರ್ಶನಾತಿಥ್ಯ: 3 ಎಫ್‌ಐಆರ್, 9 ಮಂದಿ ಅಮಾನತು

ಐಪಿಎಸ್ ಅಧಿಕಾರಿ ನೇತೃತ್ವದಲ್ಲಿ ತನಿಖೆ
Published : 26 ಆಗಸ್ಟ್ 2024, 23:30 IST
Last Updated : 26 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments

ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್‌ ಮತ್ತು ಸಹಚರರು ಹಾಗೂ ರೌಡಿ ಶೀಟರ್‌ಗಳಿಗೆ ವಿಶೇಷ ಆತಿಥ್ಯ ನೀಡಿದ ಆರೋಪದಡಿ ಜೈಲಿನ ಮುಖ್ಯ ಅಧೀಕ್ಷಕ, ಅಧೀಕ್ಷಕ ಮತ್ತು ಸಿಬ್ಬಂದಿ ಸೇರಿ ಒಂಬತ್ತು ಮಂದಿಯನ್ನು ಅಮಾನತು ಮಾಡಲಾಗಿದೆ.

ದರ್ಶನ್‌ ಹಾಗೂ ಅಮಾನತುಗೊಂಡಿರುವ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಕಾರಾಗೃಹಗಳ ಇಲಾಖೆ ಡಿಐಜಿ ಸೋಮಶೇಖರ್‌ ಅವರು ದೂರು ನೀಡಿದ್ದು, ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಮೂರು ಎಫ್ಐಆರ್‌ಗಳು ದಾಖಲಾಗಿವೆ. ಬೇಗೂರು, ಹುಳಿಮಾವು ಠಾಣೆ ಇನ್‌ಸ್ಪೆಕ್ಟರ್‌ ಹಾಗೂ
ಎಲೆಕ್ಟ್ರಾನಿಕ್ ಸಿಟಿ ಎಸಿಪಿ ಅವರನ್ನು ತನಿಖಾಧಿಕಾರಿಗಳಾಗಿ ನೇಮಿಸಲಾಗಿದೆ. ಮತ್ತೊಂದೆಡೆ ಹಿರಿಯ ಐಪಿಎಸ್ ಅಧಿಕಾರಿ ನೇತೃತ್ವದಲ್ಲಿ ಪ್ರತ್ಯೇಕ ತನಿಖೆಯೂ ಆರಂಭವಾಗಿದೆ.

ಜೈಲಿನ ಮುಖ್ಯ ಅಧೀಕ್ಷಕ ವಿ. ಶೇಷುಮೂರ್ತಿ, ಅಧೀಕ್ಷಕ ಮಲ್ಲಿಕಾರ್ಜುನ್ ಸ್ವಾಮಿ, ಜೈಲರ್‌ಗಳಾದ ಶರಣಬಸವ ಅಮೀನಗಡ, ಪ್ರಭು ಎಸ್. ಖಂಡೇಲವಾಲ, ಸಹಾಯಕ ಜೈಲರ್‌ಗಳಾದ ಶ್ರೀಕಾಂತ್ ತಳವಾರ್, ಎಲ್.ಎಸ್.ತಿಪ್ಪೇಸ್ವಾಮಿ, ಮುಖ್ಯ ವಾರ್ಡರ್‌ಗಳಾದ ವೆಂಕಪ್ಪ, ಸಂಪತ್ ಕುಮಾರ್ ತಡಪಟ್ಟಿ, ವಾರ್ಡರ್‌ ಬಸಪ್ಪ ತೇಲಿ ಅವರನ್ನು ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಅಮಾನತು ಮಾಡಲಾಗಿದೆ.

ಕೊಲೆ ಆರೋಪಿಗಳಿಗೆ ಜೈಲಿನಲ್ಲಿ ಸಿಗರೇಟ್‌, ಮೊಬೈಲ್ ಸೇರಿ ಸಕಲ ಸೌಲಭ್ಯ ಕಲ್ಪಿಸಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಗೃಹ ಸಚಿವ ಜಿ.ಪರಮೇಶ್ವರ, ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಮೋಹನ್‌, ಕಾರಾಗೃಹಗಳು ಹಾಗೂ ಸುಧಾರಣಾ ಸೇವೆಗಳ ಇಲಾಖೆ ಪೊಲೀಸ್‌ ಮಹಾನಿರ್ದೇಶಕಿ ಮಾಲಿನಿ ಕೃಷ್ಣಮೂರ್ತಿ ಅವರು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ಪರಿಶೀಲಿಸಿದರು. 

ಸ್ಥಳಾಂತರಕ್ಕೆ ಸೂಚನೆ:
ಪ್ರಕರಣದ ಸಂಪೂರ್ಣ ವರದಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದೇಶಿಸಿದ್ದು, ವಿಶೇಷ ಆತಿಥ್ಯ ಪಡೆದ ದರ್ಶನ್‌ ಹಾಗೂ ಇತರರನ್ನು ಬೇರೆ ಜೈಲುಗಳಿಗೆ ಸ್ಥಳಾಂತರ ಮಾಡುವಂತೆ ಸೂಚಿಸಿದ್ದಾರೆ.
ಫೋಟೊ ಬಹಿರಂಗವಾಗಿದ್ದು ಹೇಗೆ?

ದರ್ಶನ್ ಕುರ್ಚಿ ಮೇಲೆ ಕುಳಿತು ಸಿಗರೇಟ್ ಸೇದುತ್ತಾ ರೌಡಿ ಶೀಟರ್‌ ವಿಲ್ಸನ್ ಗಾರ್ಡನ್ ನಾಗನ ಜತೆಗೆ ಹರಟೆ ಹೊಡೆಯುತ್ತಿರುವ ಫೋಟೊ ಬಹಿರಂಗ ಆಗಿದ್ದು ಹೇಗೆ?

ಈ ಪ್ರಶ್ನೆಗೆ ಉತ್ತರ ಹುಡುಕಲು ಹೊರಟ ಜೈಲು ಸಿಬ್ಬಂದಿ ಹಾಗೂ ಅಧಿಕಾರಿಗಳು, ’ದರ್ಶನ್, ನಾಗ, ಕುಳ್ಳ ಸೀನ ಹಾಗೂ ದರ್ಶನ್ ವ್ಯವಸ್ಥಾಪಕ ನಾಗರಾಜ್ ಅವರು ಬ್ಯಾರಕ್‌ ಎದುರು ಕುಳಿತಿದ್ದ ಫೋಟೊವನ್ನು ರೌಡಿ ವೇಲು ಎಂಬಾತ ತೆಗೆದಿದ್ದ. ಅದನ್ನು ತನ್ನ ಪತ್ನಿಗೆ ಕಳುಹಿಸಿದ್ದ. ಆಕೆ ತಮ್ಮ ಸ್ನೇಹಿತರಿಗೆ ಕಳುಹಿಸಿದ್ದರು. ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು’ ಎಂದು ಪ್ರಾಥಮಿಕ ವಿಚಾರಣೆ ವೇಳೆ ಪತ್ತೆ ಹಚ್ಚಿದ್ದಾರೆ. ಇದೇ ಜೈಲಿನಲ್ಲಿರುವ ರೌಡಿ ಧರ್ಮ ಎಂಬಾತ ದರ್ಶನ್‌ ಸ್ನೇಹ ಬೆಳೆಸಿಕೊಂಡಿದ್ದಾನೆ. ಇತ್ತೀಚೆಗೆ ದರ್ಶನ್‌ ಬ್ಯಾರಕ್‌ಗೆ ತೆರಳಿದ್ದ ಆತ, ರೌಡಿಶೀಟರ್‌ ಜನಾರ್ದನ್‌ ಅಲಿಯಾಸ್‌ ಜಾನಿಯ ಮಗ ಸತ್ಯನಿಗೆ ವಿಡಿಯೊ ಕರೆ ಮಾಡಿದ್ದ. ಆಗ ದರ್ಶನ್‌ ಜತೆಗೂ ಮಾತುಕತೆ ನಡೆದಿತ್ತು. ವಿಡಿಯೊ ಕರೆ ವೇಳೆ ಸತ್ಯ ವಿಡಿಯೊವನ್ನು ರೆಕಾರ್ಡ್ ಮಾಡಿಕೊಂಡು, ಸ್ಕ್ರೀನ್‌ಶಾಟ್‌ ಫೋಟೊ ತೆಗೆದುಕೊಂಡಿದ್ದ. ಆ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ ಎನ್ನಲಾಗಿದೆ.

ದರ್ಶನ್‌ಗೆ ಮಟನ್ ಬಿರಿಯಾನಿ!

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿರುವ ಸ್ಥಿತಿವಂತರು, ರೌಡಿಗಳು, ರಾಜಕಾರಣಿಗಳಿಗೆ ಜೈಲಿನೊಳಗೆ ಬೇಕಾದ ‘ಸಕಲ ಸೌಲಭ್ಯ’ ಸಿಗುವ ವ್ಯವಸ್ಥೆ ಇದ್ದು, ದರ್ಶನ್ ತಂಡಕ್ಕೆ ಬಸವನಗುಡಿಯ ಹೋಟೆಲ್‌ ಒಂದರಿಂದ ಮಟನ್ ಬಿರಿಯಾನಿ ಪೂರೈಕೆಯಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ. 

‘ಹೊರಗಿನಿಂದ ಯಾವುದೇ ವಸ್ತು ತಂದುಕೊಡಲು ದರ ನಿಗದಿ ಪಡಿಸಲಾಗಿದೆ. ಜೈಲು ಸಿಬ್ಬಂದಿಯ ನೆರವಿನಿಂದಲೇ ಈ ರೀತಿಯ ಅಕ್ರಮಗಳು ನಡೆಯುತ್ತಿವೆ’ ಎಂದು ಮೂಲಗಳು ತಿಳಿಸಿವೆ.

‘ಮದ್ಯ, ಸಿಗರೇಟ್‌, ಬಿರಿಯಾನಿ, ಬಿಸಿ ನೀರು ತರಿಸಿ ಕೊಡಲು ದರ ನಿಗದಿಯಾಗಿದೆ. ಊಟದ ದರದ ಜತೆಗೆ ಹೆಚ್ಚಿನ ಹಣ ನೀಡಿದರೆ ನಿತ್ಯವೂ ಸಕಲ ಸೌಲಭ್ಯ ದೊರೆಯುತ್ತದೆ. ಜೈಲು ಸಿಬ್ಬಂದಿ ಹಾಗೂ ಐದು ವರ್ಷಕ್ಕಿಂತ ಹೆಚ್ಚು ಜೈಲಿನಲ್ಲಿರುವ ಕೈದಿಗಳು ಒಂದು ತಂಡ ರಚಿಸಿಕೊಂಡಿದ್ದಾರೆ’ ಎಂದು ಹೇಳಿವೆ.

ಜೈಲು ಅಧಿಕಾರಿಗಳಿಗೆ ಪರಮೇಶ್ವರ ತರಾಟೆ

ಗೃಹ ಸಚಿವ ಜಿ.ಪರಮೇಶ್ವರ ಅವರು ಸೋಮವಾರ ಮಧ್ಯಾಹ್ನ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಅಲ್ಲಿನ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ರೇಣುಕಸ್ವಾಮಿ ಕೊಲೆ ಪ್ರಕರಣದ ತೀವ್ರತೆ ಗೊತ್ತಿದೆ. ಆದರೂ ನಿಯಮಗಳನ್ನು ಮೀರಿ ಆರೋಪಿಗಳಿಗೆ ಟೀ, ಸಿಗರೇಟ್ ಮತ್ತಿತರ ಸವಲತ್ತು ಪೂರೈಕೆ ಆಗಿವೆ.‌ ದಿನದ 24 ಗಂಟೆಯೂ ವಾರ್ಡರ್‌ಗಳು ಕರ್ತವ್ಯದಲ್ಲಿ ಇರುತ್ತಾರೆ. ಎಲ್ಲರ ಕಣ್ತಪ್ಪಿ ಇಂತಹ ಘಟನೆ ನಡೆಯಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.‌

ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ಯಾವ ವಸ್ತುಗಳೂ ಪತ್ತೆ ಆಗಿಲ್ಲ. ಜೈಲಿನಲ್ಲಿ ಮೊಬೈಲ್ ಬಳಕೆ ಆಗುತ್ತಿದೆ ಎಂಬುದು ಕಂಡು ಬಂದಿದೆ. ಹೈ ಫ್ರೀಕ್ವೆನ್ಸಿ ಜಾಮರ್, ಅತ್ಯುತ್ತಮ ಗುಣಮಟ್ಟದ ಮೆಟಲ್ ಡಿಟೆಕ್ಟರ್ ಯಂತ್ರ, ಸಿಸಿಟಿವಿ. ಕ್ಯಾಮೆರಾ ಅಳವಡಿಸಲಾಗಿದೆ. ಇಷ್ಟೆಲ್ಲಾ ಬಂದೋಬಸ್ತ್,‌ ಪರಿಶೀಲನೆ ನಡುವೆಯೂ ಕಾರಾಗೃಹದೊಳಗೆ ಸಿಗರೇಟ್, ಮೊಬೈಲ್ ತಲುಪಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

‘ಸಿಗರೇಟ್, ಟೀ ತಂದುಕೊಟ್ಟವರು ಮತ್ತು ಕುರ್ಚಿ ಹಾಕಿದವರು ಯಾರು ಎಂಬುದರ ಕುರಿತು ತನಿಖೆ ನಡೆಯಲಿದೆ. ಅತಿಗಣ್ಯ ಆರೋಪಿಗಳನ್ನು ಉಪಚರಿಸಲು ರೌಡಿ ಶೀಟರ್‌ಗಳನ್ನು ಬಳಕೆ ಮಾಡಿಕೊಳ್ಳುತ್ತಿರುವುದು ಸೇರಿದಂತೆ ಯಾವುದೇ ರೀತಿಯ ತಪ್ಪು ಕಂಡುಬಂದರೂ ಕ್ರಮ ಜರುಗಿಸಲಾಗುವುದು. ಯಾವುದೇ ರೀತಿಯಲ್ಲೂ ಈ‌ ಪ್ರಕರಣದ ತನಿಖೆಯನ್ನು ದುರ್ಬಲಗೊಳಿಸಲು ಅವಕಾಶ ನೀಡುವುದಿಲ್ಲ. ಕಾನೂನು ಪ್ರಕಾರ ಈವರೆಗೆ ಕ್ರಮ ತೆಗೆದುಕೊಂಡಿದ್ದೇವೆ. ಮುಂದೆಯೂ ಕಾನೂನು ಪ್ರಕಾರವೇ ಕ್ರಮ ಜರುಗಲಿದೆ’ ಎಂದು ಪರಮೇಶ್ವರ ಹೇಳಿದರು.

ಸಿ.ಸಿ.ಟಿ.ವಿ ಕ್ಯಾಮೆರಾ ನಿರ್ವಹಣೆಯಲ್ಲಿ ಸಿಬ್ಬಂದಿ ಲೋಪ ಎಸಗಿದ್ದಾರೆ. ಪೊಲೀಸ್‌ ತನಿಖೆಯಿಂದಲೇ ಎಲ್ಲವೂ ಗೊತ್ತಾಗಲಿದೆ
ಮಾಲಿನಿ ಕೃಷ್ಣಮೂರ್ತಿ, ಡಿಜಿಪಿ, ಕಾರಾಗೃಹಗಳು ಹಾಗೂ ಸುಧಾರಣೆ ಇಲಾಖೆ
ವರದಿ ಬಂದ ಬಳಿಕ ತಪ್ಪಿತಸ್ಥರನ್ನು ಸೇವೆಯಿಂದ ವಜಾಗೊಳಿಸುವ ಬಗ್ಗೆಯೂ ತೀರ್ಮಾನಿಸಲಾಗುವುದು. ಸಿಸಿಬಿ ಪೊಲೀಸರಿಂದಲೂ ವರದಿಯನ್ನು ಪಡೆಯಲಾಗುವುದು
ಜಿ.ಪರಮೇಶ್ವರ, ಗೃಹ ಸಚಿವ
ಬ್ಯಾರಕ್‌ ಒಳಗೆ ಮತ್ತೊಬ್ಬ ಕೈದಿ ಹಿಡಿದಿದ್ದ ಮೊಬೈಲ್ ವೀಕ್ಷಿಸಿದ್ದನಟ ದರ್ಶನ್‌

ಬ್ಯಾರಕ್‌ ಒಳಗೆ ಮತ್ತೊಬ್ಬ ಕೈದಿ ಹಿಡಿದಿದ್ದ ಮೊಬೈಲ್ ವೀಕ್ಷಿಸಿದ್ದ
ನಟ ದರ್ಶನ್‌

ರೌಡಿಶೀಟರ್‌ ಜನಾರ್ದನ್‌ ಅಲಿಯಾಸ್‌ ಜಾನಿ ಪುತ್ರ ಸತ್ಯನ ಜತೆಗೆ ದರ್ಶನ್‌ ಮಾತುಕತೆ ನಡೆಸಿರುವ ಚಿತ್ರ

ರೌಡಿಶೀಟರ್‌ ಜನಾರ್ದನ್‌ ಅಲಿಯಾಸ್‌ ಜಾನಿ ಪುತ್ರ ಸತ್ಯನ ಜತೆಗೆ ದರ್ಶನ್‌ ಮಾತುಕತೆ ನಡೆಸಿರುವ ಚಿತ್ರ   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT