ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೇಣುಕಸ್ವಾಮಿ ಪ್ರಕರಣ: ವಿಚಾರಣೆ ವೇಳೆ ಭಾವುಕರಾದ ದರ್ಶನ್‌ ಪತ್ನಿ ವಿಜಯಲಕ್ಷ್ಮಿ

Published 19 ಜೂನ್ 2024, 16:31 IST
Last Updated 19 ಜೂನ್ 2024, 16:31 IST
ಅಕ್ಷರ ಗಾತ್ರ

ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದ ಸಂಬಂಧ ಬಂಧಿತ ಆರೋಪಿ ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮಿ ಅವರನ್ನು ತನಿಖಾಧಿಕಾರಿಗಳು ಬುಧವಾರ ಐದು ತಾಸು ವಿಚಾರಣೆಗೆ ಒಳಪಡಿಸಿದರು.

ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಬಂದ ಅವರನ್ನು ಪ್ರಕರಣದ ವಿಚಾರವಾಗಿ ಪೊಲೀಸರು ಹಲವು ಪ್ರಶ್ನೆಗಳನ್ನು ಕೇಳಿದರು ಎಂದು ಗೊತ್ತಾಗಿದೆ.

‘ನಿಮ್ಮ ಫ್ಲ್ಯಾಟ್‌ನಲ್ಲಿ ದೊರೆತ ಶೂ ಯಾರದ್ದು, ಯಾವಾಗ ತಂದು ಕೊಡಲಾಯಿತು, ರೇಣುಕಸ್ವಾಮಿ ಹತ್ಯೆ ಬಗ್ಗೆ ನಿಮಗೆ ಏನು ಗೊತ್ತು? ಹತ್ಯೆ ನಡೆದ ಬಳಿಕ ದರ್ಶನ್ ಅವರು ನಿಮ್ಮ ಬಳಿ ಚರ್ಚಿಸಿದ್ದರೇ ಎಂಬುದರ ಬಗ್ಗೆ ಪ್ರಶ್ನೆ ಕೇಳಲಾಯಿತು. ಅವರಿಂದ ವಿವರಣೆ ಪಡೆಯಲಾಗಿದ್ದು ವಿಡಿಯೊ ರೆಕಾರ್ಡ್‌ ಮಾಡಲಾಗಿದೆ’ ಎಂದು ಮೂಲಗಳು ಹೇಳಿವೆ.

‘ಕೊಲೆ ಅಥವಾ ರೇಣುಕಸ್ವಾಮಿ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆತ ಯಾರೆಂಬುದೂ ಗೊತ್ತಿಲ್ಲ. ಶೂ ಹಾಗೂ ಬಟ್ಟೆಗಳನ್ನು ದರ್ಶನ್ ಅವರ ಸಹಾಯಕರು ತಂದು ಇಟ್ಟಿದ್ದರು. ಈ ವಿಚಾರದ ಬಗ್ಗೆ ಹೆಚ್ಚಿನ ಮಾಹಿತಿಯೂ ಇಲ್ಲ’ ಎಂದು ಹೇಳುತ್ತಾ ಅವರು ಭಾವುಕರಾದರು ಎಂದು ಗೊತ್ತಾಗಿದೆ.

‘ಕೃತ್ಯ ನಡೆದ ವೇಳೆ ದರ್ಶನ್‌ ಧರಿಸಿದ್ದ ಶೂಗಳನ್ನು ವಿಜಯಲಕ್ಷ್ಮಿ ಅವರು ವಾಸ ಇರುವ ಹೊಸಕೆರೆಹಳ್ಳಿಯ 3ನೇ ಹಂತದ ಪ್ರೆಸ್ಟೀಜ್ ಸೌತ್‌ ಅಪಾರ್ಟ್‌ಮೆಂಟ್‌ನಲ್ಲಿ ಇಟ್ಟಿರುವುದಾಗಿ ಆರೋಪಿ ರಾಜು ಹೇಳಿಕೆ ನೀಡಿದ್ದರು. ಮನೆಯಲ್ಲಿ ಪುತ್ರನಿದ್ದು ಮಹಜರ್‌ಗೆ ಬಾರದಂತೆ ವಿಜಯಲಕ್ಷ್ಮಿ ಪೊಲೀಸರಲ್ಲಿ ಮನವಿ ಮಾಡಿದ್ದರು. ಶೂ ಅನ್ನು ಸೆಕ್ಯೂರಿಟಿ ಕೊಠಡಿಯಲ್ಲಿ ಇಟ್ಟಿರುವುದಾಗಿ ಪೊಲೀಸರಿಗೆ ತಿಳಿಸಿದ್ದರು. ಆ ಕೊಠಡಿಯಿಂದ ದರ್ಶನ್‌ ಧರಿಸಿದ್ದ ಶೂ ಜಪ್ತಿ ಮಾಡಲಾಗಿತ್ತು’ ಎಂದು ನ್ಯಾಯಾಲಯಕ್ಕೆ ತನಿಖಾಧಿಕಾರಿಗಳು ಸಲ್ಲಿಸಿರುವ ವರದಿಯಲ್ಲಿ ತಿಳಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT