ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲಿಂಗಾಯತರಿಗೆ ಮೀಸಲಾತಿ ಅಗತ್ಯ: ಸಚಿವ ಎಂ.ಬಿ. ಪಾಟೀಲ ಪ್ರತಿಪಾದನೆ

Published 11 ಆಗಸ್ಟ್ 2024, 13:18 IST
Last Updated 11 ಆಗಸ್ಟ್ 2024, 13:18 IST
ಅಕ್ಷರ ಗಾತ್ರ

ವಿಜಯಪುರ: ‘ಜೈನ, ಸಿಖ್ ಧರ್ಮಿಯರಂತೆ ಲಿಂಗಾಯತ ಸಮಾಜದ ಎಲ್ಲ ಒಳ ಪಂಗಡಗಳಿಗೂ ಸೂಕ್ತ ಸ್ಥಾನಮಾನ, ಮೀಸಲಾತಿ ಸಿಗಬೇಕು’ ಎಂದು ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಪ್ರತಿಪಾದಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಲಿಂಗಾಯತ ಸಮಾಜದ ಎಲ್ಲ ಉಪ‌ ಪಂಗಡಗಳಿಗೆ ಒಂದೇ ಸೂರಿನಡಿ ರಾಜ್ಯ ಹಾಗೂ ಕೇಂದ್ರದಲ್ಲಿ ಮೀಸಲಾತಿ ಸಿಗಬೇಕು.  ಒಕ್ಕಲಿಗರಿಗೆ ಸಿಕ್ಕ‌ ಮಾದರಿಯಲ್ಲಿ ನಮಗೂ ಸಿಗಬೇಕು. ಹಾಗಂತ ಒಕ್ಕಲಿಗರಿಗೆ ಸಿಕ್ಕಿದ್ದು ತಪ್ಪಲ್ಲ. ಅದಕ್ಕೆ ನಮ್ಮ‌ ವಿರೋಧವಿಲ್ಲ’ ಎಂದು ಹೇಳಿದರು.

‘ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಮಾನ್ಯತೆ ಸಿಕ್ಕರೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಹೆಚ್ಚಿನ ಅವಕಾಶಗಳು ಸಿಗುತ್ತಿದ್ದವು. ಕೆಪಿಎಸ್‌ಸಿ, ಯುಪಿಎಸ್‌ಸಿ,‌ವೈದ್ಯಕೀಯ ಹಾಗೂ ಇತರೆಡೆ ಅವಕಾಶ ಸಿಗತ್ತಿದ್ದವು. ಆದರೆ, ಪ್ರತ್ಯೇಕ ಲಿಂಗಾಯತ ಧರ್ಮದ ಮಾನ್ಯತೆ ಸಿಗುವುದರಿಂದ ಆಗುವ ಲಾಭದ ಕುರಿತು ಜನರು ಸರಿಯಾಗಿ ಅರ್ಥೈಸಿಕೊಳ್ಳಲಿಲ್ಲ’ ಎಂದು ಹೇಳಿದರು. 

‘ಹಿಂದು ಧರ್ಮ ಬೇರೆ, ಲಿಂಗಾಯತ ಧರ್ಮ ಬೇರೆ’ ಎಂಬ ಸಾಣೆಹಳ್ಳಿ ಶ್ರೀಗಳ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು,  ‘ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದ ಕುರಿತು ಈ ಹಿಂದೆ ನಾನು ಮಾತನಾಡಿದಾಗ ಸಾಕಷ್ಟು ಟೀಕೆ ವ್ಯಕ್ತವಾಯಿತು. ಮಹಾಸಭಾದವರೇ ಟೀಕೆ ಮಾಡಿದ್ದರು. ಹೀಗಾಗಿ ಈ‌ ಕುರಿತು ನಾನು ಮಾತನಾಡುವುದಿಲ್ಲ. ನಾನು ಮಾತನಾಡಿದರೆ ರಾಜಕೀಯ ಬಣ್ಣ ಕೊಡುತ್ತಾರೆ’ ಎಂದರು.

‘ವೀರಶೈವ ಮಹಾಸಭಾ ಈ ಕುರಿತು ಈಗಾಗಲೇ ದಾವಣಗೆರೆಯಲ್ಲಿ ನಿರ್ಣಯ ತೆಗೆದುಕೊಂಡಿದೆ. ಜನ ಗಣತಿ ಸಂದರ್ಭದಲ್ಲಿ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಹಾಗೂ ಜಾತಿ ಕಾಲಂನಲ್ಲಿ ಜಾತಿಯ ಹೆಸರು ಬರೆಸಲು ತೀರ್ಮಾನಿಸಿದ್ದಾರೆ’ ಎಂದರು.

ಇನ್ನಷ್ಟು ಪಾದಯಾತ್ರೆ ಮಾಡಲಿ

ರಾಜ್ಯ ಸರ್ಕಾರದ ಭ್ರಷ್ಟಾಚಾರ ಮತ್ತು ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪಾದಯಾತ್ರೆ ನಡೆಸಿದ ಕುರಿತು ‍ಪ್ರತಿಕ್ರಿಯಿಸಿದ ಸಚಿವರು, ‘ಕೋವಿಡ್‌ ಸಂದರ್ಭದಲ್ಲಿ ₹ 2 ಸಾವಿರ ಕೋಟಿ ಹಣ ದುರುಪಯೋಗ, ಮಾರಿಷಸ್‌ನಲ್ಲಿ ₹ 10 ಸಾವಿರ ಕೋಟಿ ಇಟ್ಟಿರೋ ಹಗರಣ, ಭೋವಿ ನಿಗಮದ ಹಗರಣ, ತಾಂಡಾ ಅಭಿವೃದ್ಧಿ ನಿಗಮದ ಹಗರಣ, ದೇವರಾಜ ಅರಸು  ಟ್ರಕ್ ಟರ್ಮಿನಲ್ ಹಗರಣ ಸೇರಿದಂತೆ ಬಿಜೆಪಿ ಅವಧಿಯಲ್ಲೇ ಆಗಿರುವ 21 ಹಗರಣಗಳ ಕುರಿತು ಬಿಜೆಪಿಯವರು ಪಾದಯಾತ್ರೆ ಮಾಡಲಿ’ ಎಂದು ಸವಾಲು ಹಾಕಿದರು.

ವಾಲ್ಮೀಕಿ ನಿಗಮದ ಹಗರಣದ ಕುರಿತು ಕೂಡಲಸಂಗಮದಿಂದ ಹೊಸಪೇಟೆ ವರೆಗೆ ವಿಜಯೇಂದ್ರ ವಿರೋಧಿ ಬಣ ಪಾದಯಾತ್ರೆ ಮಾಡುವ ಕುರಿತು ಪ್ರತಿಕ್ರಿಯಿಸಿದ ಸಚಿವ ಎಂ.ಬಿ.ಪಾಟೀಲ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣದ ಈಗಾಗಲೇ ಎಸ್‌ಐಟಿಗೆ ವಹಿಸಲಾಗಿದೆ. ಇ.ಡಿ ಕೂಡ ತನಿಖೆ ನಡೆಸುತ್ತಿದೆ. ಈ ಪ್ರಕರಣದಲ್ಲು ಸಚಿವರ ಪಾತ್ರ ಇದೆಯೋ, ಇಲ್ಲವೋ ಗೊತ್ತಿಲ್ಲ. ಆದರೂ ಸಚಿವರು ರಾಜೀನಾಮೆ ಕೊಟ್ಟಿದ್ದಾರೆ. ₹ 89ಕೋಟಿ ಪೈಕಿ ಈಗಾಗಲೇ ₹ 45 ಕೋಟಿ ವಶಪಡಿಸಿಕೊಳ್ಳಲಾಗಿದೆ’ ಎಂದರು.

‘ಆರ್.ಅಶೋಕ ಬಣ, ಬಿ.ವೈ. ವಿಜಯೇಂದ್ರ ಬಣ, ಪ್ರಹ್ಲಾದ ಜೋಶಿ ಬಣ, ಸಂತೋಷ‌ ಬಣ, ಅಶ್ವತ್ಥನಾರಾಯಣ ಬಣ, ಯತ್ನಾಳ–ಜಾರಕಿಹೋಳಿ ಬಣ, ಸಿ. ಟಿ. ರವಿ ಬಣ ಹೀಗೆ ಬಿಜೆಪಿಯಲ್ಲಿ 20ಕ್ಕೂ ಅಧಿಕ ಬಣಗಳಿವೆ. ಒಂದೊಂದು ಒಣ ಒಂದೊಂದು ಪಾದಯಾತ್ರೆ ಮಾಡಲಿ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT