ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ಪ್ರಮಾಣ ಶೇ 75ಕ್ಕೆ ಹೆಚ್ಚಿಸಿದರೆ ಸಮಸ್ಯೆಗೆ ಪರಿಹಾರ: ಸಿದ್ದರಾಮಯ್ಯ

Last Updated 14 ಏಪ್ರಿಲ್ 2023, 20:28 IST
ಅಕ್ಷರ ಗಾತ್ರ

ಬೆಂಗಳೂರು: ‘ಮೀಸಲಾತಿ ಪ್ರಮಾಣವನ್ನು ಕನಿಷ್ಠ ಶೇಕಡ 75ಕ್ಕೆ ಹೆಚ್ಚಿಸಿ, ಪ್ರತಿಯೊಂದು ಜಾತಿಗಳಿಗೆ ಅವುಗಳ ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ನೀಡಿದರೆ ಈಗಿನ ಮೀಸಲಾತಿ ವಿವಾದಕ್ಕೆ ಶಾಶ್ವತ ಪರಿಹಾರ ಸಿಗಲಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

‘ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬಂದರೆ ಒಟ್ಟು ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುತ್ತೇವೆ. ಎಲ್ಲ ಜಾತಿ ಜನರಿಗೆ ಅವರ ಜನಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾಗಿ ಮೀಸಲಾತಿ ಕಲ್ಪಿಸುತ್ತೇವೆ. ಯಾರ ಮೀಸಲಾತಿಯನ್ನೂ ರದ್ದುಗೊಳಿಸುವುದಿಲ್ಲ’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಕೇಂದ್ರ ಸರ್ಕಾರವು ಆರ್ಥಿಕವಾಗಿ ಹಿಂದುಳಿದವರಿಗೆ ಶೇ 10ರಷ್ಟು ಮೀಸಲಾತಿ ನೀಡಿ ಶೇ 50ರ ಮಿತಿಯನ್ನು ಉಲ್ಲಂಘಿಸಿದೆ. ಕೇಂದ್ರವು ಒಟ್ಟು ಮೀಸಲಾತಿ ಪ್ರಮಾಣ ಹೆಚ್ಚಿಸಲು ಅನುಕೂಲ ಆಗುವಂತೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕು’ ಎಂದು ಆಗ್ರಹಿಸಿದ್ದಾರೆ.

‘ಮೀಸಲಾತಿಗೆ ಶೇ 50ರ ಮಿತಿ ಎನ್ನುವುದು ಇಂದಿರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದ ಭಾಗವೇ ಹೊರತು, ಅದು ಸಾಂವಿಧಾನಿಕವಾದುದು ಅಲ್ಲ. ವಿಶೇಷ ಪ್ರಕರಣದಲ್ಲಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬಹುದೆಂದು ಅದೇ ಆದೇಶದಲ್ಲಿ ಹೇಳಲಾಗಿದೆ’ ಎಂದು ಹೇಳಿದ್ದಾರೆ.

‘ಮುಸ್ಲಿಂ ಮೀಸಲಾತಿ ರದ್ದು ಪಡಿಸಿರುವುದಕ್ಕೆ ಚುನಾವಣಾ ಲಾಭದ ದುರುದ್ದೇಶ ಬಿಟ್ಟರೆ ಬೇರೆ ಕಾರಣಗಳು ಇರಲಿಲ್ಲ. ಮುಸ್ಲಿಂ ಮೀಸಲಾತಿ ರದ್ದತಿ ಆದೇಶವು ರದ್ದಾದರೆ ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯಕ್ಕೆ ನೀಡಿರುವ ಹೆಚ್ಚುವರಿ ಮೀಸಲಾತಿಯೂ ರದ್ದಾಗುತ್ತದೆ. ಅರ್ಹ ಜಾತಿಗಳಿಗೆ ಮೀಸಲಾತಿ ನೀಡುವುದಕ್ಕೆ ಕಾಂಗ್ರೆಸ್‌ನ ವಿರೋಧ ಇಲ್ಲ. ಆದರೆ, ಕಲ್ಪಿತ ಸುಳ್ಳುಗಳ ಮೂಲಕ
ಬಿಜೆಪಿ ಕನ್ನಡಿಯೊಳಗಿನ ಗಂಟು ತೋರಿಸಿ ಜನರನ್ನು ತಪ್ಪು ದಾರಿಗೆಳೆಯಲು ಹೊರಟಿದೆ’ ಎಂದಿದ್ದಾರೆ.

‘ಕಾಂತರಾಜ್ ಅಧ್ಯಕ್ಷತೆಯ ಹಿಂದುಳಿದ ವರ್ಗಗಳ ಆಯೋಗವು ಮನೆಮನೆಗೆ ತೆರಳಿ ವೈಜ್ಞಾನಿಕವಾಗಿ ನಡೆಸಿದ್ದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ರಾಜ್ಯ ಸರ್ಕಾರದ ಕೈಯಲ್ಲಿದೆ. ಆ ವರದಿ ಆಧಾರದಲ್ಲಿ ಮೀಸಲಾತಿ ಹೆಚ್ಚಿಸಿದರೆ ನ್ಯಾಯಾಲಯ ಕೂಡಾ ಮಾನ್ಯತೆ ನೀಡಲಿದೆ’ ಎಂದು ಹೇಳಿದ್ದಾರೆ.

ಮೀಸಲಾತಿ ಹೆಸರಲ್ಲಿ ಮಾಡಿದ ದ್ರೋಹ ಬಯಲಾಗಿದೆ: ಸುರ್ಜೇವಾಲಾ

ಬೆಂಗಳೂರು: ಮೀಸಲಾತಿ ಹೆಚ್ಚಿಸುವ ಹೆಸರಿನಲ್ಲಿ ಲಿಂಗಾಯತರು, ಒಕ್ಕಲಿಗರು, ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರಿಗೆ ರಾಜ್ಯದ ಬಿಜೆಪಿ ಸರ್ಕಾರ ಮಾಡಿರುವ ದ್ರೋಹವು ಸುಪ್ರೀಂ ಕೋರ್ಟ್‌ ವಿಚಾರಣೆ ವೇಳೆ ಬಯಲಾಗಿದೆ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೀಸಲಾತಿ ಹೆಸರಿನಲ್ಲಿ ನಕಲಿ ತೀರ್ಮಾನ ಮಾಡುವ ಮೂಲಕ ಬಿಜೆಪಿಯು ಡಾ.ಬಿ.ಆರ್‌. ಅಂಬೇಡ್ಕರ್‌ ಅವರನ್ನು ಅವಮಾನಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವು ರಾಜ್ಯದ ಜನರಿಗೆ ಕ್ಷಮಿಸಲಾಗದ ದ್ರೋಹ ಮಾಡಿದೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT