ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ ಜಿಲ್ಲಾಧಿಕಾರಿ ಸ್ಥಾನಕ್ಕೆ ಮತ್ತೆ ರೋಹಿಣಿ ಸಿಂಧೂರಿ

Last Updated 25 ಜೂನ್ 2018, 18:07 IST
ಅಕ್ಷರ ಗಾತ್ರ

ಬೆಂಗಳೂರು: ‘ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಹಾಸನಕ್ಕೆ ಮತ್ತೆ ವರ್ಗಾವಣೆ ಮಾಡಲಾಗಿದೆ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

ತಮ್ಮನ್ನು ಹಾಸನ ಜಿಲ್ಲಾಧಿಕಾರಿ ಸ್ಥಾನದಿಂದ ವರ್ಗಾವಣೆ ಮಾಡಿದ ಆದೇಶ ಪ್ರಶ್ನಿಸಿ ರೋಹಿಣಿ ಸಿಂಧೂರಿ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಚ್‌.ಜಿ.ರಮೇಶ್‌ ಮತ್ತು ನ್ಯಾಯಮೂರ್ತಿ ಪಿ.ಎಂ.ನವಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ ಈ ಕುರಿತಂತೆ ಸರ್ಕಾರದ ನಿಲುವನ್ನು ನ್ಯಾಯಪೀಠಕ್ಕೆ ತಿಳಿಸಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ‘ಈ ಅರ್ಜಿಯ ವಿಚಾರಣೆ ಮುಂದುವರಿಸುವುದರಲ್ಲಿ ಯಾವುದೇ ಅಗತ್ಯ ಕಾಣುತ್ತಿಲ್ಲ’ ಎಂಬ ಅಭಿಪ್ರಾಯದೊಂದಿಗೆ ಅರ್ಜಿ ವಿಲೇವಾರಿ ಮಾಡಿತು.

ಇದೇ ವೇಳೆ ನ್ಯಾಯಪೀಠವು ಈ ಮೊದಲು ಈ ಪ್ರಕರಣದಲ್ಲಿ ಕೇಂದ್ರ ಆಡಳಿತ ನ್ಯಾಯಮಂಡಳಿಯು (ಸಿಎಟಿ) ನೀಡಿದ್ದ ಆದೇಶವನ್ನು ವಜಾಗೊಳಿಸಿದೆ. ಇದರಿಂದಾಗಿ ಐ.ಎ.ಎಸ್ ಮತ್ತು ಐ.ಪಿ.ಎಸ್ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದ ನಿಯಮಗಳ ಕುರಿತಂತೆ ಸಿಎಟಿ ನೀಡಿದ್ದ ಆದೇಶ ವಜಾಗೊಂಡಂತೆ ಆಗಿದೆ.

ವಿಚಾರಣೆ ವೇಳೆ ಈ ಕುರಿತಂತೆ ಸಹಾಯಕ ಸಾಲಿಸಿಟರ್ ಜನರಲ್ ಸಿ‌‌‌.ಶಶಿಕಾಂತ್ ಅವರ ಮನವಿಯನ್ನು ನ್ಯಾಯಪೀಠ ಪರಿಗಣಿಸಿದೆ.

ಕಾನೂನು ಹೋರಾಟ: ಚುನಾವಣೆ ಸಮಯದಲ್ಲಿ ರೋಹಿಣಿ ಸಿಂಧೂರಿ ಅವರನ್ನು ಬೆಂಗಳೂರಿನ ಉದ್ಯೋಗ ಮತ್ತು ತರಬೇತಿ ಇಲಾಖೆ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿತ್ತು. ಅವಧಿ ಪೂರ್ವ ವರ್ಗಾವಣೆ ಪ್ರಶ್ನಿಸಿ ರೋಹಿಣಿ, ಮೊದಲು ಸಿಎಟಿ, ಬಳಿಕ ಹೈಕೋರ್ಟ್ ಮೆಟ್ಟಿಲೇರಿ ಎರಡು ಸುತ್ತಿನ ಹೋರಾಟ ನಡೆಸಿದ್ದರು.

ಹಿಂದಿನ ಸರ್ಕಾರದಲ್ಲಿ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎ.ಮಂಜು ಅವರ ಆಡಳಿತ ವೈಖರಿಯನ್ನು ರೋಹಿಣಿ ಪ್ರಶ್ನಿಸಿ ತೀವ್ರ ವಾಗ್ದಾಳಿ ನಡೆಸಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಅಂದು ವಿರೋಧ ಪಕ್ಷದ ಶಾಸಕ ಹಾಗೂ ಹಾಲಿ ಉಸ್ತುವಾರಿ ಸಚಿವ ಎಚ್.ಡಿ ರೇವಣ್ಣ, ರೋಹಿಣಿ ಪರ ನಿಂತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT