ಬೆಂಗಳೂರು: ಗಣೇಶಮೂರ್ತಿ ಪ್ರತಿಷ್ಠಾಪಿಸುವ ಪೆಂಡಾಲ್‌ಗಳಲ್ಲಿ ಪ್ರಸಾದವಾಗಿ ವಿತರಿಸುವ ಆಹಾರ ಪದಾರ್ಥಗಳ ಶುಚಿತ್ವ, ಗುಣಮಟ್ಟ ಮತ್ತು ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳಲು ಎಫ್‌ಎಸ್‌ಎಸ್‌ಎಐ ಪರವಾನಗಿ ಪಡೆದಿರುವ ವ್ಯಕ್ತಿ ಮತ್ತು ಸಂಸ್ಥೆಗಳಿಂದ ಮಾತ್ರ ಪ್ರಸಾದ ಸಿದ್ಧಪಡಿಸಬೇಕು ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಹೊರಡಿಸಿರುವ ಆದೇಶವನ್ನು ಬಿಜೆಪಿ ಟೀಕಿಸಿದೆ.
ಈ ಕುರಿತು ‘ಎಕ್ಸ್’ ಮೂಲಕ ಖಂಡನೆ ವ್ಯಕ್ತಪಡಿಸಿರುವ ಬಿಜೆಪಿ, ‘ಇದು ಸಿದ್ದರಾಮಯ್ಯನವರ ಓಲೈಕೆ ರಾಜಕಾರಣದ ಪರಾಕಾಷ್ಠೆ. ಈ ಆದೇಶ ಹಿಂದೂಗಳ ಮನಸ್ಸನ್ನು ಘಾಸಿಗೊಳಿಸಿದೆ’ ಎಂದು ಹೇಳಿದೆ.
‘ಅನ್ಯಮತೀಯರ ಹಬ್ಬಗಳಲ್ಲಿ ಬೀದಿ, ಬೀದಿಗಳಲ್ಲಿ ಆಹಾರ ಬೇಯಿಸುವಾಗ ಕೈಕಟ್ಟಿಕೊಂಡಿದ್ದ ಸಿದ್ದರಾಮಯ್ಯ, ಈಗ ಹಿಂದೂಗಳ ಆರಾಧ್ಯ ದೈವ ಗಣಪತಿ ಹಬ್ಬದ ಆಚರಣೆಗೆ ಇಂಥ ವಿಘ್ನಾದೇಶಗಳನ್ನು ಹೊರಡಿಸುವ ಹಕೀಕತ್ತು ಏನಿದೆ? ನಿಮ್ಮ ಓಲೈಕೆಗೂ ಒಂದು ಮಿತಿ ಇರಲಿ’ ಎಂದು ಕಿಡಿಕಾರಿದೆ.