ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಚ್‌ಡಿಕೆ ಪ್ರಕರಣದಲ್ಲಿ ಅನುಮತಿ ಏಕಿಲ್ಲ: ಸಿದ್ದರಾಮಯ್ಯ ಪ್ರಶ್ನೆ

Published 20 ಆಗಸ್ಟ್ 2024, 14:16 IST
Last Updated 20 ಆಗಸ್ಟ್ 2024, 14:16 IST
ಅಕ್ಷರ ಗಾತ್ರ

ಬೆಂಗಳೂರು: ‘ನಿಯಮ ಉಲ್ಲಂಘಿಸಿ ಸಾಯಿ ವೆಂಕಟೇಶ್ವರ ಮಿನರಲ್ಸ್‌ ಕಂಪನಿಗೆ ಗಣಿ ಗುತ್ತಿಗೆ ಮಂಜೂರು ಮಾಡಿರುವ ಆರೋಪದಲ್ಲಿ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲು ಅನುಮತಿ ನೀಡದ ರಾಜ್ಯಪಾಲರು, ನನ್ನ ವಿರುದ್ಧ ಟಿ.ಜೆ. ಅಬ್ರಾಹಂ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿದ ತಕ್ಷಣ ಅನುಮತಿ ನೀಡಿದ್ದಾರೆ. ಇಂತಹ ತಾರತಮ್ಯ ಏಕೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನನ್ನ ವಿರುದ್ಧ ತನಿಖೆಗೆ ಅನುಮತಿ ನೀಡುವ ಮೂಲಕ ರಾಜ್ಯಪಾಲರು ತಾರತಮ್ಯ ಎಸಗಿದ್ದಾರೆ. ಅವರು ರಾಷ್ಟ್ರಪತಿಯ ಪ್ರತಿನಿಧಿಯಾಗಿ ಕೆಲಸ ಮಾಡಬೇಕೇ ಹೊರತು, ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಅಲ್ಲ’ ಎಂದರು.

ಕುಮಾರಸ್ವಾಮಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲು ಅನುಮತಿ ಕೋರಿ ರಾಜ್ಯಪಾಲರಿಗೆ ಲೋಕಾಯುಕ್ತ ಕಚೇರಿಯಿಂದ ಮತ್ತೊಮ್ಮೆ ಮನವಿ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘2023ರ ನ. 23ರಂದು ಲೋಕಾಯುಕ್ತದವರು ಅನುಮತಿ ಕೋರಿದ್ದರು. ಆದರೆ, ರಾಜ್ಯಪಾಲರು ಯಾವುದೇ ನಿರ್ಣಯ ಕೈಗೊಳ್ಳದ ಕಾರಣ ಮತ್ತೊಮ್ಮೆ ಅನುಮತಿ ಕೋರಿದ್ದಾರೆ’ ಎಂದರು. 

‘ರಾಜ್ಯಪಾಲರನ್ನು ನಿಂದಿಸಲಾಗಿದೆ’ ಎಂದು ಕಾಂಗ್ರೆಸ್‌ ವಿರುದ್ಧ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ರಾಜ್ಯಪಾಲರ ಹುದ್ದೆ ಸಂವಿಧಾನಾತ್ಮಕವಾಗಿದ್ದು, ಅವರ ಮೇಲೆ ಗೌರವವಿದೆ. ಆದರೆ, ಅವರು ತಾರತಮ್ಯ ಧೋರಣೆ ಅನುಸರಿಸಬಾರದು’ ಎಂದು ಹೇಳಿದರು.

ಕೇಂದ್ರ ಮಂತ್ರಿಯಾಗಿ ಮುಂದುವರಿಯಬಹುದೇ?: ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ, ‘ಕುಮಾರಸ್ವಾಮಿ ವಿರುದ್ಧ ಗಂಭೀರ ಆರೋಪಗಳಿವೆ. ಆರೋಪ ಪಟ್ಟಿ ಸಲ್ಲಿಸಲು ರಾಜ್ಯಪಾಲರಿಂದ ಲೋಕಾಯುಕ್ತ ಮತ್ತೊಮ್ಮೆ ಅನುಮತಿ ಕೇಳಿದೆ. ಆದರೆ, ಕುಮಾರಸ್ವಾಮಿ ತಿರುಚಿ ಮಾತನಾಡುತ್ತಿದ್ದಾರೆ. ಅವರ ಮೇಲಿನ ಆರೋಪ ಲೋಕಾಯುಕ್ತದ ಚಾರ್ಜ್​ಶೀಟ್​ನಲ್ಲಿದೆ. ಅಂಥವರು ಕೇಂದ್ರ ಮಂತ್ರಿಯಾಗಿ ಮುಂದುವರಿಯಬಹುದೇ’ ಎಂದು ಪ್ರಶ್ನಿಸಿದರು.

ವಿಧಾನ ಪರಿಷತ್‌ ಸರ್ಕಾರದ ಮುಖ್ಯ ಸಚೇತಕ‌ ಸಲೀಂ ಅಹಮದ್‌, ‘ಕುಮಾರಸ್ವಾಮಿ ಪ್ರಕರಣದಲ್ಲಿ ಅನುಮತಿ ನೀಡದ ರಾಜ್ಯಪಾಲರು, ಮುಖ್ಯಮಂತ್ರಿ ವಿರುದ್ಧ ತಕ್ಷಣ ಅನುಮತಿ ನೀಡಿದ್ದಾರೆ. ರಾಜ್ಯಪಾಲರು ರಾಜಕೀಯ ಮಾಡಬಾರದು. ಕಾನೂನು ಪ್ರಕಾರವೇ ನಡೆದುಕೊಳ್ಳಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT