ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಟಹಿಡಿದ ಶಾಸಕರು: ಪಟ್ಟು ಬಿಡದ ಡಿ.ಸಿ

ಮರಳುಗಾರಿಕೆಗೆ ಅನುಮತಿ ನೀಡುವ ವಿಚಾರದಲ್ಲಿ ಮುಸುಕಿನ ಗುದ್ದಾಟ
Last Updated 28 ಅಕ್ಟೋಬರ್ 2018, 20:25 IST
ಅಕ್ಷರ ಗಾತ್ರ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮರಳುಗಾರಿಕೆ ಆರಂಭಿಸುವ ವಿಚಾರದಲ್ಲಿ ಶಾಸಕ ರಘುಪತಿ ಭಟ್ ಹಾಗೂ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಜನಪ್ರತಿನಿಧಿ ಹಾಗೂ ಆಡಳಿತ ಯಂತ್ರದ ನಡುವಿನ ತಿಕ್ಕಾಟದಲ್ಲಿ ಜನರಿಗೆ ಮರಳು ಸಿಗದಂತಾಗಿದೆ.

ಮರಳುಗಾರಿಕೆಗೆ ಅವಕಾಶ ನೀಡಬೇಕು ಎಂದು ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಹಲವು ಸಂಘಟನೆಗಳು ಇದೇ 25ರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿವೆ. ಆದರೆ, ಶಾಸಕರ ಬೇಡಿಕೆಗಳಿಗೆ ಜಿಲ್ಲಾಧಿಕಾರಿ ಸೊಪ್ಪು ಹಾಕುತ್ತಿಲ್ಲ.

ಶಾಸಕರ ಬೇಡಿಕೆ ಏನು?: ಎಸ್‌ಇಜೆಡ್ ವ್ಯಾಪ್ತಿಯಲ್ಲಿ ಹಿಂದಿನಿಂದಲೂ 171 ಮರಳು ಗುತ್ತಿಗೆದಾರರು ಮರಳು ದಿಬ್ಬಗಳನ್ನು ತೆರವುಗೊಳಿಸುತ್ತಾ ಬಂದಿದ್ದಾರೆ. ಅವರಿಗೆಲ್ಲ ಈ ಬಾರಿಯೂ ಮರಳು ತೆಗೆಯಲು ಜಿಲ್ಲಾಡಳಿತ ಅವಕಾಶ ನೀಡಬೇಕು ಎಂಬುದು ಶಾಸಕರ ಪ್ರಮುಖ ಬೇಡಿಕೆ.

ಸಿಆರ್‌ಜೆಡ್ ವ್ಯಾಪ್ತಿಯಲ್ಲಿ ಜಿಲ್ಲಾಡಳಿತ ಕೇವಲ 9 ದಿಬ್ಬಗಳನ್ನು ಮಾತ್ರ ಗುರುತಿಸಿದೆ. ಅದರಲ್ಲಿ 5 ದಿಬ್ಬಗಳಿಗೆ ಮಾತ್ರ ಅನುಮತಿ ಸಿಕ್ಕಿದೆ. ಈ ದಿಬ್ಬಗಳಲ್ಲಿ ಬೇಡಿಕೆಯಷ್ಟು ಮರಳು ಸಿಗುವುದು ಸಾಧ್ಯವಿಲ್ಲ. ಕನಿಷ್ಠ 20 ದಿಬ್ಬಗಳನ್ನಾದರೂ ಗುರುತಿಸಬೇಕು ಎಂಬುದು ಶಾಸಕರ ವಾದ.

ಜಿಲ್ಲಾಧಿಕಾರಿ ವಾದ ಏನು?: ಎಸ್‌ಇಜೆಡ್ ವ್ಯಾಪ್ತಿಯಲ್ಲಿ ಮರಳು ದಿಬ್ಬಗಳನ್ನು ತೆರವುಗೊಳಿಸುವ ವಿಚಾರದಲ್ಲಿ ನಿಯಮಗಳನ್ನು ಉಲ್ಲಂಘಿಸ
ಲಾಗಿದೆ ಎಂದು ಉದಯ ಸುವರ್ಣ ಅವರು ರಾಷ್ಟ್ರೀಯ ಹಸಿರು ಪೀಠಕ್ಕೆ (ಎನ್‌ಜಿಟಿ) ದೂರು ನೀಡಿದ್ದಾರೆ. ಹೀಗಿರುವಾಗ ಎನ್‌ಜಿಟಿ ನಿಯಮಗಳಿಗೆ ಬದ್ಧವಾಗಿ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದಂತೆ ಮಾತ್ರ ಮರಳುಗಾರಿಕೆಗೆ ಅವಕಾಶ ನೀಡಲಾಗುವುದು ಎನ್ನುತ್ತಿದ್ದಾರೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್.

ಮರಳು ಗುತ್ತಿಗೆದಾರರನ್ನು ಗುರುತಿಸುವಲ್ಲಿ ಲೋಪವಾಗಿದೆ.171 ಮರಳು ಗುತ್ತಿಗೆದಾರರ ಪೈಕಿ ಬಹುಪಾಲು ದೊಡ್ಡ ಉದ್ಯಮಿಗಳಿದ್ದಾರೆ. ಸಾಂಪ್ರದಾಯಿಕವಾಗಿ ಮರಳು ತೆಗೆಯುವವರಿಗೆ ಪರವಾನಗಿ ನೀಡಲಾಗಿಲ್ಲ. ಜಿಪಿಎಸ್‌ ಮಾನಿಟರಿಂಗ್ ಪ್ರಕ್ರಿಯೆ ಕೂಡ ಸರಿಯಾಗಿ ನಡೆದಿಲ್ಲ ಎಂದು ಉದಯ ಸುವರ್ಣ ಅವರು ಅರ್ಜಿಯಲ್ಲಿ ಆಕ್ಷೇಪಿಸಿದ್ದಾರೆ. ಹೀಗಿರುವಾಗ, ನಿಯಮಗಳನ್ನು ಉಲ್ಲಂಘಿಸಿ ಮರಳುಗಾರಿಕೆಗೆ ಅವಕಾಶ ನೀಡಲು ಸಾಧ್ಯವೇ ಎಂದು ಪ್ರಶ್ನಿಸುತ್ತಾರೆ ಜಿಲ್ಲಾಧಿಕಾರಿ.

ಸಾಂಪ್ರದಾಯಿಕ ಮರಳುಗಾರಿಕೆಯಲ್ಲಿ ತೊಡಗಿದ್ದವರಿಗೆ ಮಾತ್ರ ಅವಕಾಶ ನೀಡಿ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಪತ್ರ ಬರೆದಿದ್ದಾರೆ.

ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ಇರುವುದು ತಿಳಿದಿದೆ. ಆದರೆ, ಕಾನೂನುಗಳನ್ನು ಪಾಲನೆ ಮಾಡಲೇಬೇಕು. ಕುಂದಾಪುರ ಹಾಗೂ ಬೈಂದೂರು ತಾಲ್ಲೂಕುಗಳು ಸಂಪೂರ್ಣವಾಗಿ ಕರಾವಳಿ ಸೂಕ್ಷ್ಮ ವಲಯಕ್ಕೆ ಸೇರ್ಪಡೆಯಾಗಿರುವುದರಿಂದ ಅಲ್ಲಿ ಮರಳು ದಿಬ್ಬಗಳನ್ನು ಗುರುತಿಸುವಂತೆಯೇ ಇಲ್ಲ. ಬೇರೆಡೆ ಲಭ್ಯವಿರುವ ಮರಳು ದಿಬ್ಬಗಳನ್ನು ಎನ್‌ಐಟಿಕೆ ತಜ್ಞರು ಗುರುತಿಸುತ್ತಿದ್ದು, ಮೂರ್ನಾಲ್ಕು ದಿನಗಳಲ್ಲಿ ವರದಿ ನೀಡಲಿದ್ದಾರೆ. ಅದರಂತೆ, ಅರ್ಹರಿಗೆ ಮಾತ್ರ ಪರವಾನಗಿ ನೀಡಲಾಗುವುದು ಎಂದು ಹೇಳುತ್ತಾರೆ.

‘ಹಿಂದೆ ಸಾಧ್ಯವಾಗಿದ್ದು ಈಗೇಕಿಲ್ಲ’

2011ಕ್ಕಿಂತ ಹಿಂದೆ, ಮರಳುಗಾರಿಕೆ ಮಾಡುತ್ತಿದ್ದವರು 92 ಮಂದಿ ಮಾತ್ರ. ಇಷ್ಟು ಕಡಿಮೆ ಪ್ರಮಾಣದಲ್ಲಿ ಪರವಾನಗಿ ನೀಡಿದರೆ, ಮರಳಿನ ಅಭಾವ ಸೃಷ್ಟಿಯಾಗಿ, ಬೆಲೆ ಗಗನಕ್ಕೇರುತ್ತದೆ. 2014ರಲ್ಲಿ ಅಂದಿನ ಜಿಲ್ಲಾಧಿಕಾರಿ ಮುದ್ದುಮೋಹನ್‌ ಪ್ರಕಟಣೆ ಹೊರಡಿಸಿ, ಸಿಆರ್‌ಜೆಡ್ ವ್ಯಾಪ್ತಿಯಲ್ಲಿ ತಾತ್ಕಾಲಿಕ ಪರವಾನಗಿ ಹೊಂದಿರುವವರು ನೋಂದಣಿ ಮಾಡಿಸಿಕೊಳ್ಳುವಂತೆ ಆದೇಶಿಸಿದ್ದರು. ಅದರಂತೆ ಜಿಲ್ಲೆಯಲ್ಲಿ 170 ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಇಲ್ಲಿಯವರೆಗೂ ಅವರಿಗೆ ಜಿಲ್ಲಾಡಳಿತ ಪರವಾನಗಿ ನೀಡುತ್ತಾ ಬಂದಿದೆ. 2017ರಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಅವರೇ 171 ಮಂದಿಗೂ ಪರವಾನಗಿ ನೀಡಿದ್ದಾರೆ. ಆಗ ನಿಯಮಗಳು ಅಡ್ಡಿಯಾಗಿರಲಿಲ್ಲ. ಈಗ ಏಕೆ ಅಡ್ಡಿಯಾಗುತ್ತಿವೆ ಎಂದು ಶಾಸಕ ರಘುಪತಿ ಭಟ್‌ ಪ್ರಶ್ನಿಸುತ್ತಾರೆ.

ಎನ್‌ಜಿಟಿ ಮರಳುಗಾರಿಕೆಯನ್ನು ನಿಷೇಧಿಸಿಲ್ಲ. ಹಿಂದೆ ಜಿಲ್ಲಾಡಳಿತ ತೆಗೆದುಕೊಂಡಿದ್ದ ನಿರ್ಧಾರಗಳ ವಿರುದ್ಧ ಆಕ್ಷೇಪಗಳನ್ನು ಎತ್ತಿವೆ ಅಷ್ಟೆ. ಜಿಲ್ಲಾಧಿಕಾರಿ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುತ್ತಿದ್ದಾರೆ ಎಂಬುದು ಶಾಸಕರ ಆರೋಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT