ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಿಗಮ ಮಂಡಳಿ: ನಾನೂ ಸಿಎಂಗೆ ಪಟ್ಟಿ ಕೊಟ್ಟಿದ್ದೇನೆ– ಸತೀಶ ಜಾರಕಿಹೊಳಿ

Published 24 ಜನವರಿ 2024, 15:45 IST
Last Updated 24 ಜನವರಿ 2024, 15:45 IST
ಅಕ್ಷರ ಗಾತ್ರ

ಬೆಂಗಳೂರು: ‘ಜಿಲ್ಲೆಯಲ್ಲಿ ಪಕ್ಷದ ಕೆಲಸ ಮಾಡಿದವರನ್ನು ನಿಗಮ ಮಂಡಳಿಗೆ ನೇಮಕ ಮಾಡುವಂತೆ ನಾನೂ ಹೇಳಿದ್ದೇನೆ. ಮುಖ್ಯಮಂತ್ರಿಗೆ ಪಟ್ಟಿಯನ್ನೂ ಕೊಟ್ಟಿದ್ದೇನೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ನಿಗಮ, ಮಂಡಳಿಗಳಿಗೆ ಆದಷ್ಟು ಬೇಗ ನೇಮಕ ಮಾಡಿದರೆ ಒಳ್ಳೆಯದು’ ಎಂದು ಅಭಿಪ್ರಾಯಪಟ್ಟರು.

‘ನೇಮಕ ಯಾಕೆ ವಿಳಂಬವಾಗುತ್ತಿದೆ ಎನ್ನುವುದು ಗೊತ್ತಿಲ್ಲ. ಇದರಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಮೂಗು ತೂರಿಸಿದ್ದಾರೆಂಬ ವಿಚಾರದ ಬಗ್ಗೆಯೂ ಮಾಹಿತಿ ಇಲ್ಲ. ನಮ್ಮ‌ ಜಿಲ್ಲೆಗೆ ಸಂಬಂಧಿಸಿದಂತೆ ಕೊಟ್ಟಿರುವ ಪಟ್ಟಿಯಂತೆ ನೇಮಕ ಮಾಡಲು ಹೇಳಿದ್ದೇವೆ’ ಎಂದರು.

ಸಮೀಕ್ಷೆಯ ಬಳಿಕ ಟಿಕೆಟ್‌ ಹಂಚಿಕೆ: ‘ಲೋಕಸಭೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಒಂದು ಸುತ್ತಿನ ಸಭೆ ಆಗಿದೆ. ಇನ್ನೂ ಒಂದೆರಡು ಸುತ್ತಿನ ಸಭೆ ಆಗಬಹುದು. ಬೆಳಗಾವಿ ಕ್ಷೇತ್ರದಿಂದಲೂ 2–3  ಹೆಸರು ಕೊಡಲಾಗಿದೆ. ಎಐಸಿಸಿ ಅಲ್ಲದೆ ಪಕ್ಷದ ಅಧ್ಯಕ್ಷರು ಸಹ ಸಮೀಕ್ಷೆ ಮಾಡಿಸುತ್ತಾರೆ. ಯಾರ ಕಡೆಗೆ ಹೆಚ್ಚು ಒಲವು ಇದೆಯೊ ಅವರಿಗೆ ಟಿಕೆಟ್ ಸಿಗಲಿದೆ’ ಎಂದು ತಿಳಿಸಿದರು.

‘ಸಚಿವೆ ಲಕ್ಷ್ಮೀ ಹೆಬ್ಬಾಳಕರ ಕೂಡ ತಮ್ಮ ಪುತ್ರನಿಗೆ ಟಿಕೆಟ್‌ಗಾಗಿ ಅರ್ಜಿ ಹಾಕಿದ್ದಾರೆ. ಆದರೆ, ಅವರು ಈ ಬಗ್ಗೆ ಮುಕ್ತವಾಗಿ ಎಲ್ಲೂ ಹೇಳಿಲ್ಲ. ಸಮೀಕ್ಷೆಯಲ್ಲಿ ಒಲವು ವ್ಯಕ್ತವಾದರೆ ಅವರಿಗೇ ಟಿಕೆಟ್ ಕೊಡುತ್ತಾರೆ ಅಷ್ಟೆ’ ಎಂದು ಸಾಧ್ಯತೆಯನ್ನು ಬಿಚ್ಚಿಟ್ಟರು.

‘ಬಿಜೆಪಿಗೆ ಜಗದೀಶ ಶೆಟ್ಟರ್ ‌ಮರಳುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಅವರು ಬಿಜೆಪಿಗೆ ವಾಪಸ್ ಹೋಗುವುದಿಲ್ಲ. ಅವರಿಗೆ ಅಲ್ಲಿ ಸ್ಥಾನಮಾನ ಇಲ್ಲ ಎಂದು ಇಲ್ಲಿಗೆ (ಕಾಂಗ್ರೆಸ್‌) ಬಂದಿದ್ದಾರೆ. ಚುನಾವಣೆಯಲ್ಲಿ ಸೋತರೂ ಪರಿಷತ್ ಸದಸ್ಯರನ್ನಾಗಿ ಮಾಡಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT