ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಾವನಾತ್ಮಕ ಪ್ರತಿಕ್ರಿಯೆ ತೊರೆದರೆ ಯಶಸ್ಸು: ನ್ಯಾಯಮೂರ್ತಿ ಬೇಲಾ ಎಂ. ತ್ರಿವೇದಿ

ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಬೇಲಾ ಎಂ. ತ್ರಿವೇದಿ ಅಭಿಮತ
Published : 28 ಸೆಪ್ಟೆಂಬರ್ 2024, 20:27 IST
Last Updated : 28 ಸೆಪ್ಟೆಂಬರ್ 2024, 20:27 IST
ಫಾಲೋ ಮಾಡಿ
Comments

ಬೆಂಗಳೂರು: ‘ಕಾನೂನು, ನ್ಯಾಯಾಂಗ ಕ್ಷೇತ್ರಗಳಲ್ಲಿ ಸಾಧನೆ ಮಾಡಬಯಸುವ ಮಹಿಳೆಯರು ವೃತ್ತಿ ಮೌಲ್ಯಗಳ ಪಾಲನೆಯ ಜೊತೆಗೆ, ಭಾವನಾತ್ಮಕ ಪ್ರತಿಕ್ರಿಯೆಗಳಿಂದಲೂ ದೂರ ಉಳಿಯಬೇಕು’ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಬೇಲಾ ಎಂ. ತ್ರಿವೇದಿ ಹೇಳಿದರು.

ಅಖಿಲ ಭಾರತ ಮಹಿಳಾ ವಕೀಲರ ಒಕ್ಕೂಟ, ಕರ್ನಾಟಕ ಮಹಿಳಾ ವಕೀಲರ ಒಕ್ಕೂಟ ಶನಿವಾರ ಇಲ್ಲಿ ಆಯೋಜಿಸಿದ್ದ ‘ಬ್ರೇಕಿಂಗ್‌ ಬ್ಯಾರಿಯರ್ಸ್‌–ಬಿಲ್ಡಿಂಗ್‌ ಬ್ರಿಜ್ಜಸ್‌’ ರಾಷ್ಟ್ರೀಯ ವಿಚಾರಸಂಕಿರಣ ಹಾಗೂ ವಕೀಲೆಯರ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾನೂನು ಕ್ಷೇತ್ರದಲ್ಲಿ ಸ್ವಯಂಶಿಸ್ತು, ಸಮಯದ ನಿರ್ವಹಣೆ, ಪಾಲನೆ, ಕೆಲಸದಲ್ಲಿ ಗುಣಮಟ್ಟವನ್ನು ಸದಾ ಕಾಪಾಡಿಕೊಳ್ಳಬೇಕು. ಮೃದು ಮತ್ತು ಕಠಿಣ ಕೌಶಲಗಳ ಕಲಿಕೆ ಮತ್ತು ಅಳವಡಿಕೆ ಮುಖ್ಯ. ವಸ್ತ್ರ ಸಂಹಿತೆಗೂ ಆದ್ಯತೆ ನೀಡಬೇಕು ಎಂದರು.

ಪಂಚಾಯತ್‌ ರಾಜ್‌ ವ್ಯವಸ್ಥೆ ಜಾರಿಯಾದ ಬಳಿಕ ರಾಜಕಾರಣದಲ್ಲೂ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗಿದೆ. ವಿವಿಧ ಸೇವಾ ವಲಯದಲ್ಲೂ ಮಹಿಳೆಯರು ದೊಡ್ಡ ಕೊಡುಗೆ ನೀಡುತ್ತಿದ್ದಾರೆ. ನ್ಯಾಯಾಂಗ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಇನ್ನಷ್ಟು ಹೆಚ್ಚಾಗಬೇಕು ಎಂದು ಅಭಿಪ್ರಾಯಪಟ್ಟರು.

‘ಬಹುತೇಕ ಕಕ್ಷಿದಾರರು ಪುರುಷ ವಕೀಲರನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಅವರು ಮಹಿಳೆಯರಿಗಿಂತ ಸಮರ್ಥರು ಎನ್ನುವ ಭಾವನೆ ಇದೆ. ಲಿಂಗಾಧಾರಿತ ಪೂರ್ವಗ್ರಹ, ಗೃಹ ಹಿಂಸೆ, ಲೈಂಗಿಕ ಕಿರುಕುಳ ಸವಾಲುಗಳನ್ನು ಧೈರ್ಯವಾಗಿ ಎದುರಿಸಿದಾಗ ಮಾತ್ರ ಸಾಮರ್ಥ್ಯದ ಅನಾವರಣ ಸಾಧ್ಯ’ ಎಂದರು

ಶ್ರೀಲಂಕಾ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಕುಮುದಿನಿ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ, ಭಾರತ ಮಹಿಳಾ ವಕೀಲರ ಒಕ್ಕೂಟದ ಅಧ್ಯಕ್ಷೆ ಹೇಮಲತಾ ಮಹಿಷಿ, ರಾಜ್ಯ ಘಟಕದ ಅಧ್ಯಕ್ಷೆ ಸಂಧ್ಯಾ ಮದಿನೂರ್‌, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ ಭಾಗವಹಿಸಿದ್ದರು.

ನ್ಯಾಯಾಂಗ ವ್ಯವಸ್ಥೆಯಲ್ಲೂ ಮಹಿಳೆಯರಿಗೆ ಶೇ 50ರಷ್ಟು ಪ್ರಾತಿನಿಧ್ಯ ಸಿಗಬೇಕು. ನ್ಯಾಯಾಂಗದ ನಾಯಕತ್ವವನ್ನೂ ಮಹಿಳೆಯರು ವಹಿಸಿಕೊಳ್ಳಬೇಕು
-ಅರವಿಂದ್‌ಕುಮಾರ್‌ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ

‘ಮಹಿಳೆಗೆ ಶಕ್ತಿ ತುಂಬಿದ ಕಾನೂನು ಪದವಿ’ 

ಮಹಿಳೆಯರು ಕಾನೂನು ಪದವಿ ಪಡೆದಷ್ಟೂ ಶೋಷಣೆ ದಬ್ಬಾಳಿಕೆ ಎದುರಿಸಲು ಹೆಚ್ಚಿನ ಶಕ್ತಿ ಸಿಗುತ್ತದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಮಹಿಳಾ ವಕೀಲರ ವಾದ ಆಲಿಸಲು ನ್ಯಾಯಮೂರ್ತಿಗಳು ತುಸು ಹೆಚ್ಚು ಸಮಯ ವಿನಿಯೋಗಿಸಬೇಕು. ಅವರಿಗೆ ಪ್ರೋತ್ಸಾಹ ನೀಡಬೇಕು ಎಂದು ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT