ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪುಟದ ಮುಂದೆ ಜಾತಿ ಗಣತಿ ವರದಿ: ಜಿ. ಪರಮೇಶ್ವರ

Published 5 ಮಾರ್ಚ್ 2024, 23:30 IST
Last Updated 5 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವೀಕರಿಸಿರುವ ಜಾತಿ ಗಣತಿ ವರದಿಯನ್ನು ಶೀಘ್ರ ಸಂಪುಟದ ಮುಂದೆ ತರಲಾಗುವುದು. ಜಾತಿ ಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪುನರ್‌ನಿಗದಿ ಮಾಡಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.

ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ/ಎಸ್ಟಿ ನೌಕರರ ಸಮನ್ವಯ ಸಮಿತಿ ಮಂಗಳವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ 5 ನೇ ಜಾಗೃತ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. 

ಸಂವಿಧಾನ ಜಾರಿಯಾಗಿ 74 ವರ್ಷಗಳಾದರೂ ಅಸ್ಪೃಶ್ಯತೆ ಸಂಪೂರ್ಣ ನಿವಾರಣೆಯಾಗಿಲ್ಲ. ಪರಿಶಿಷ್ಟರು ಮೊದಲು ಕೀಳರಿಮೆ ತೊರೆಯಬೇಕು. ಸಂಘಟನೆ ಬಲಗೊಳಿಸಬೇಕು. ಹಕ್ಕುಗಳ ಅನುಷ್ಠಾನ, ನ್ಯಾಯಯುತ ಬೇಡಿಕೆ ಈಡೇರಿಕೆ, ಸಾಮಾಜಿಕ ನ್ಯಾಯ ಅನುಷ್ಠಾನಕ್ಕೆ ಸಂಘಟನೆ ಬಳಕೆಯಾಗಬೇಕು. ಇತರೆ ಸಮುದಾಯಗಳನ್ನು ದ್ವೇಷಿಸಲು, ಅವರ ಹಕ್ಕುಗಳನ್ನು ಕಿತ್ತುಕೊಳ್ಳಲು ಬಳಸಬಾರದು ಎಂದು ಕಿವಿಮಾತು ಹೇಳಿದರು.

ಸಮಾಜ ಕಲ್ಯಾಣ ಸಚಿವ ಎಚ್‌.ಸಿ.ಮಹದೇವಪ್ಪ ಮಾತನಾಡಿ, ದಲಿತರ ಜನಸಂಖ್ಯೆಗೆ ಆಧಾರವಾಗಿ ರೂಪಿಸಲಾದ ಎಸ್‌ಸಿಎಸ್‌ಪಿ, ಎಸ್‌ಟಿಪಿ ಕಾಯ್ದೆಯಡಿ ಕಲ್ಪಿಸಲಾದ ಅನುದಾನ 31 ಇಲಾಖೆಗಳಿಗೆ ಹಂಚಿ ಹೋಗುತ್ತಿದೆ. ಏಕಗವಾಕ್ಷಿ ಮೂಲಕ ಹಂಚಿಕೆ ಮಾಡುವ ಚಿಂತನೆ ನಡೆದಿದೆ. ಈಗಾಗಲೇ ಮುಖ್ಯಮಂತ್ರಿ ಹಾಗೂ ಹಣಕಾಸು ಇಲಾಖೆಯ ಜತೆ ಚರ್ಚಿಸಲಾಗಿದೆ ಎಂದರು.

ಪರಿಶಿಷ್ಟ ಜಾತಿ ಮತ್ತು ಪಂಗಡದವರು ರಾಜಕೀಯ ಪಕ್ಷಗಳ ದಾಳವಾಗುತ್ತಿದ್ದಾರೆ. ಸಲ್ಲಬೇಕಾದ ಸ್ಥಾನಗಳು ದೊರೆಯುತ್ತಿಲ್ಲ. ಒಗ್ಗಟ್ಟಿನ ಕೊರತೆಯೇ ಇಂತಹ ಪರಿಸ್ಥಿತಿಗೆ ಕಾರಣ. ದಲಿತರು ಮತ್ತು ಅದರೊಳಗಿನ ಅಸ್ಪೃಶ್ಯ ಸಮುದಾಯಗಳು ಒಗ್ಗಟ್ಟಾಗಬೇಕು. ಕಾಂಗ್ರೆಸ್‌ ಎಂದಿಗೂ ಪರಿಶಿಷ್ಟರ ಹಿತಾಸಕ್ತಿ ಕಾಪಾಡಿದೆ. ಪಿಟಿಸಿಎಲ್‌ ಕಾಯ್ದೆಗೆ ತಿದ್ದುಪಡಿ ತಂದಿದೆ. ಎಸ್‌ಸಿಎಸ್‌ಪಿ, ಎಸ್‌ಟಿಪಿ ಕಾಯ್ದೆ ರೂಪಿಸಿದೆ ಎಂದು ಹೇಳಿದರು. 

ನಿವೃತ್ತ ಐಎಎಸ್‌ ಅಧಿಕಾರಿ ಎನ್‌.ಸಿ.ಮುನಿಯಪ್ಪ ಅವರ ‘ದಲಿತರ ಆರ್ಥಿಕತೆ: ಸಮಸ್ಯೆ ಸವಾಲು’ ಕೃತಿಯನ್ನು ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಬಿಡುಗಡೆ ಮಾಡಿದರು. ‘ಸಂವಿಧಾನದ ಆಶಯಗಳು: ನೌಕರರ ಮತ್ತು ಅಧಿಕಾರಿಗಳ ಜವಾಬ್ದಾರಿ’ ಕುರಿತು ನ್ಯಾಯಮೂರ್ತಿ ನಾಗಮೋಹನದಾಸ್‌ ಮಾತನಾಡಿದರು. 

ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರ ಸಂಘದ ಅಧ್ಯಕ್ಷ ಡಿ.ಶಿವಶಂಕರ್‌ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ, ಹರಳಯ್ಯ ಸ್ವಾಮೀಜಿ, ಮಳವಳ್ಳಿ ಶಾಸಕ ನರೇಂದ್ರಸ್ವಾಮಿ, ಚಿಂತಕ ಬಿ.ಗೋಪಾಲ್‌, ಎಸ್‌ಪಿ ಆನಂದ್‌ ಕುಮಾರ್ ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT