ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

SC–ST ಹಾಸ್ಟೆಲ್‌ಗಳಲ್ಲಿ ದಟ್ಟಣೆ: ಕ್ರಮಕೈಗೊಳ್ಳಲು ಸರ್ಕಾರಕ್ಕೆ ಹೈಕೋರ್ಟ್ ತಾಕೀತು

Published : 20 ಆಗಸ್ಟ್ 2024, 14:29 IST
Last Updated : 20 ಆಗಸ್ಟ್ 2024, 14:29 IST
ಫಾಲೋ ಮಾಡಿ
Comments

ಬೆಂಗಳೂರು: ‘ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಒಳಪಡುವ ‍(ಪರಿಶಿಷ್ಟ ಜಾತಿ–ಪಂಗಡಗಳು) ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳ ಹಾಸ್ಟೆಲ್‌ಗಳಲ್ಲಿ ಪ್ರವೇಶ ಮಿತಿಗಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ವಾಸ ಮಾಡುತ್ತಿದ್ದಾರೆ’ ಎಂಬ ಮಾಹಿತಿಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ‘ಈ ಕುರಿತಂತೆ ರಾಜ್ಯ ಸರ್ಕಾರ ತಕ್ಷಣವೇ ಪರಿಹಾರ ಕ್ರಮಗಳಿಗೆ ಮುಂದಾಗಬೇಕು’ ಎಂದು ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದೆ.

ಈ ಸಂಬಂಧ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರಿ ವಕೀಲರು ರಾಜ್ಯದ ಎಸ್‌ಸಿ-ಎಸ್‌ಟಿ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಮಿತಿ ಹಾಗೂ ಹಾಲಿ ಇರುವ ಸಂಖ್ಯೆ, ವಾರ್ಡ್‌ನ ಹುದ್ದೆಗಳ ಮಾಹಿತಿ ಹೊಂದಿದ ಕಂದಾಯ ಇಲಾಖೆಯ ವಿಭಾಗವಾರು ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

ವರದಿಯಲ್ಲಿ, ಹಾಸ್ಟೆಲ್‌ಗಳಲ್ಲಿನ ಪ್ರವೇಶ ಮಿತಿಗಿಂತಲೂ ಮೂರ್ನಾಲ್ಕು ಪಟ್ಟು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿರುವ ಅಂಶವನ್ನು ಗಮನಿಸಿ ಅತೀವ ಅಚ್ಚರಿ ವ್ಯಕ್ತಪಡಿಸಿದ ನ್ಯಾಯಪೀಠ, ‘ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳನ್ನು ಈ ರೀತಿಯಾಗಿ ನಡೆಸಿಕೊಳ್ಳುತ್ತಿರುವುದು ಸಲ್ಲದು. ಸರ್ಕಾರ ತಕ್ಷಣವೇ ಈ ಬಗ್ಗೆ ಗಮನ ಹರಿಸಬೇಕು. ಅಂತೆಯೇ, ಖಾಲಿ ಇರುವ ಹುದ್ದೆಗಳ ಭರ್ತಿಗೂ ಕ್ರಮ ಕೈಗೊಳ್ಳುವ ತುರ್ತು ಅವಶ್ಯಕತೆ ಇದೆ’ ಎಂದು ಹೇಳಿತು.

‘ಎಸ್‌ಟಿ-ಎಸ್‌ಟಿ ವಿದ್ಯಾರ್ಥಿಗಳು ಹಾಸ್ಟೆಲ್‌ಗಳಲ್ಲಿ ಘನತೆ-ಗೌರವದಿಂದ ಇರಬೇಕು. ಈ ಲೋಪದೋಷ ಸರಿಪಡಿಸಲು ನಿಮ್ಮ ಬಳಿ ಇರುವ ಪರಿಹಾರ ಕ್ರಮಗಳೇನು? ಖಾಲಿ ಹುದ್ದೆಗಳ ಭರ್ತಿಗೆ ಯಾವ ಕ್ರಮ ಕೈಗೊಳ್ಳಲಾಗುವುದು ಎಂಬ ಬಗ್ಗೆ ವಿವರವಾದ ವರದಿಯನ್ನು ಸಲ್ಲಿಸಿ’ ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದ ನ್ಯಾಯಪೀಠ, ಸೆಪ್ಟೆಂಬರ್ 13ಕ್ಕೆ ವಿಚಾರಣೆ ಮುಂದೂಡಿತು.

ವರದಿಯಲ್ಲಿನ ಪ್ರಮುಖಾಂಶಗಳು: ಉತ್ತರ ಕನ್ನಡ ಜಿಲ್ಲೆ ಶಿರಸಿಯ ಮೆಟ್ರಿಕ್‌ ಪೂರ್ವ ಹಾಸ್ಟೆಲ್‌ನಲ್ಲಿ ಪ್ರವೇಶ ಮಿತಿ 50 ಇದ್ದು, 150 ವಿದ್ಯಾರ್ಥಿಗಳು ಇದ್ದಾರೆ. ಕೊಪ್ಪಳದ ಹಾಸ್ಟೆಲ್‌ನಲ್ಲಿ 75 ಪ್ರವೇಶ ಮಿತಿ ಇದ್ದರೆ, 214 ವಿದ್ಯಾರ್ಥಿಗಳು ಇದ್ದಾರೆ.

ಹುದ್ದೆಗಳು: ಹಾಸ್ಟೆಲ್‌ಗಳಲ್ಲಿನ 1,890 ಹಿರಿಯ ವಾರ್ಡನ್ ಹುದ್ದೆಗಳಲ್ಲಿ 1,342 ಭರ್ತಿ ಆಗಿದ್ದು, 548 ಖಾಲಿ ಇವೆ. 518 ಕಿರಿಯ ವಾರ್ಡನ್ ಹುದ್ದೆಗಳ ಪೈಕಿ 465 ಭರ್ತಿ ಆಗಿದ್ದು, 53 ಖಾಲಿ ಇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT