ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ತೊರೆದವರ ಮೇಲೆ ‘ಮುಖ್ಯ ಶಿಕ್ಷಕರ ಕಣ್ಣು’: ಶಿಕ್ಷಣ ಇಲಾಖೆಯ ಹೊಸ ನಿಯಮ

Published 28 ಮೇ 2024, 23:31 IST
Last Updated 28 ಮೇ 2024, 23:31 IST
ಅಕ್ಷರ ಗಾತ್ರ

ಬೆಂಗಳೂರು: ಶಾಲೆ ತೊರೆಯುವ ಮಕ್ಕಳ ಮೇಲೆ ನಿಗಾ ವಹಿಸಲು ಶಾಲಾ ಶಿಕ್ಷಣ ಇಲಾಖೆ ಹೊಸ ನಿಯಮ ರೂಪಿಸಿದ್ದು, ಒಂದು ಶಾಲೆಯಲ್ಲಿ ಶಿಕ್ಷಣ ಪೂರೈಸುವ ವಿದ್ಯಾರ್ಥಿಗಳು ಮುಂದೆ ಯಾವ ಶಾಲೆಗೆ ದಾಖಲಾಗುತ್ತಾರೆ ಎನ್ನುವ ಮಾಹಿತಿ ಸಂಗ್ರಹದ ಹೊಣೆಗಾರಿಕೆಯನ್ನು ಮುಖ್ಯ ಶಿಕ್ಷಕರಿಗೆ ವಹಿಸಿದೆ.

2023–24ನೇ ಸಾಲಿನಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಗ್ರಾಮ ಪಂಚಾಯಿತಿವಾರು ಹಮ್ಮಿಕೊಂಡಿದ್ದ ಶಾಲೆ ತೊರೆದ ಮಕ್ಕಳ ಸಮೀಕ್ಷೆಯಲ್ಲಿ ಶಾಲೆಯಿಂದ ಹೊರಗುಳಿದ, ಶಾಲೆ ತೊರೆದ 46 ಸಾವಿರ ಮಕ್ಕಳನ್ನು ಪತ್ತೆ ಮಾಡಲಾಗಿತ್ತು.

ಈ ಬಾರಿ ಶಾಲೆಯಿಂದ ಹೊರಗುಳಿಯುವ ಮಕ್ಕಳನ್ನು ಶಾಲಾ ಆರಂಭದ ಅವಧಿಯಲ್ಲೇ ನಿಖರವಾಗಿ ಗುರುತಿಸಿ ಪತ್ತೆ ಮಾಡಲು ಶಾಲಾ ಶಿಕ್ಷಣ ಇಲಾಖೆ ಮುಂದಾಗಿದೆ.

ಪ್ರತಿ ಪ್ರಾಥಮಿಕ (1ರಿಂದ 5), ಹಿರಿಯ ಪ್ರಾಥಮಿಕ (5ರಿಂದ 7), ಉನ್ನತೀಕರಿಸಿದ ಹಿರಿಯ ಪ್ರಾಥಮಿಕ (6ರಿಂದ 8), ಪ್ರೌಢಶಾಲೆಗಳಲ್ಲಿ (8ರಿಂದ 10) ಓದುವ ಮಕ್ಕಳು ಆ ಶಾಲೆಯ ಕೊನೆಯ ಹಂತ ಮುಗಿಸಿ, ಮತ್ತೊಂದು ಶಾಲೆಗೆ ದಾಖಲಾಗುತ್ತಾರೆ. ಹೀಗೆ ಪ್ರತಿ ಶಾಲೆಯ ಮುಖ್ಯ ಶಿಕ್ಷಕರು ತಮ್ಮ ಶಾಲೆಯಲ್ಲಿ ಶಿಕ್ಷಣ ಪೂರೈಸಿದ ನಂತರ ಮುಂದಿನ ಹಂತಕ್ಕೆ ಬೇರೆ ತರಗತಿಗಳಿಗೆ ಹೋಗುವ ಮಕ್ಕಳು ಯಾವ ಶಾಲೆಯಲ್ಲಿ ದಾಖಲಾತಿ ಪಡೆದಿದ್ದಾರೆ ಎನ್ನುವ ಖಚಿತ ಮಾಹಿತಿ ಸಂಗ್ರಹಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ಆ ಮಗು ಯಾವ ಶಾಲೆಗೂ ದಾಖಲಾಗದಿದ್ದರೆ ಅಂತಹ ಮಕ್ಕಳ ಪಟ್ಟಿ ಸಿದ್ಧಪಡಿಸಿಕೊಂಡು ಮೇಲಧಿಕಾರಿಗಳಿಗೆ ನೀಡಬೇಕು. 

ಮುಂದಿನ ಹಂತಕ್ಕೆ ದಾಖಲಾಗದೆ ಮನೆಯಲ್ಲೇ ಉಳಿದಿದ್ದರೆ, ಸಹ ಶಿಕ್ಷಕರು, ವಿದ್ಯಾರ್ಥಿಗಳ ಇತರೆ ಸಹಪಾಠಿಗಳು, ಸ್ಥಳೀಯರ ನೆರವಿನಿಂದ ಕಾರಣಗಳನ್ನು ಪತ್ತೆ ಮಾಡಬೇಕು. ನಂತರ ವಿದ್ಯಾರ್ಥಿ–ಪೋಷಕರ ಮನವೊಲಿಸಿ ಸಮೀಪದ ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಕೊಡಿಸಬೇಕು ಎಂದು ಸೂಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT