ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟರ ಹಣ ಗ್ಯಾರಂಟಿಗೆ: ಇದೇ 25ರಿಂದ ಹೋರಾಟ

₹11,144 ಕೋಟಿ ಬಳಕೆಗೆ ಬಿಜೆಪಿ ವಿರೋಧ
Published 11 ಸೆಪ್ಟೆಂಬರ್ 2023, 15:50 IST
Last Updated 11 ಸೆಪ್ಟೆಂಬರ್ 2023, 15:50 IST
ಅಕ್ಷರ ಗಾತ್ರ

ಬೆಂಗಳೂರು: ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಮೀಸಲಾದ ಅನುದಾನದಲ್ಲಿ ₹11,144 ಕೋಟಿಯನ್ನು ‘ಗ್ಯಾರಂಟಿ’ ಯೋಜನೆಗಳಿಗೆ ಬಳಸುವ ತೀರ್ಮಾನವನ್ನು ಸರ್ಕಾರ ಇನ್ನೂ ಕೈಬಿಟ್ಟಿಲ್ಲ. ಆದ್ದರಿಂದ ಇದೇ 25ರಿಂದ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು ಮಾಜಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೋರಾಟವು ಜಿಲ್ಲಾ ಕೇಂದ್ರಗಳಲ್ಲಿ ಸೆ.25ರಿಂದ ಅಕ್ಟೋಬರ್‌ 10ರವರೆಗೆ ನಡೆಯಲಿದೆ ಎಂದು ಹೇಳಿದರು.

ಅನುದಾನವನ್ನು ಪರಿಶಿಷ್ಟ ಸಮುದಾಯಕ್ಕೆ ಬಳಸದೇ ಹೋದರೆ ಎರಡನೇ ಹಂತದಲ್ಲಿ ಜಿಲ್ಲಾ ಸಚಿವರು ಮತ್ತು ಶಾಸಕರಿಗೆ ಮುತ್ತಿಗೆ ಹಾಕಲಾಗುವುದು. ಅಕ್ಟೋಬರ್‌ 11ರಿಂದ 25ರವರೆಗೆ ಎಲ್ಲ ಜಿಲ್ಲೆಗಳಲ್ಲಿ ಶಾಸಕರು ಮತ್ತು ಸಚಿವರ ಮನೆ ಮುಂದೆ ಧರಣಿ ಹಮ್ಮಿಕೊಳ್ಳಲಾಗುವುದು ಎಂದರು.

ಇದಕ್ಕೂ ಮುನ್ನ ನಗರದ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಭಾಂಗಣದಲ್ಲಿ ‘ಸಿಟಿಜನ್ ಫಾರ್ ಸೋಶಿಯಲ್ ಜಸ್ಟೀಸ್ - ಬೆಂಗಳೂರು' ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಕಾರಜೋಳ ಮಾತನಾಡಿ, ‘ಡೋಂಗಿ ಮಾತುಗಳು, ಸುಳ್ಳು ಭರವಸೆಗಳ ಮೂಲಕ ಪರಿಶಿಷ್ಟರನ್ನು ಮೋಸ ಮಾಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಎಸ್‌ಸಿ– ಎಸ್‌ಟಿ ಜನಾಂಗದ ಶಿಕ್ಷಣ, ಆರೋಗ್ಯ ಮತ್ತು ಅಭಿವೃದ್ಧಿಗಾಗಿ ಈ ಹಣ ಬಳಸಬೇಕಾಗಿದೆ. ಮನಸ್ಸಿಗೆ ಬಂದಂತೆ ಬಳಸಲು ಅಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.

‘ಈ ಸಮುದಾಯದಲ್ಲಿ ಹುಟ್ಟಿದ ಮಲ್ಲಿಕಾರ್ಜುನ ಖರ್ಗೆಯವರು ಇದನ್ನೆಲ್ಲ ಸಹಿಸಿಕೊಂಡು ಬಾಯಿ ಮುಚ್ಚಿಕೊಂಡಿರುವುದೇಕೆ? ಏಕೆ ತುಟ್ಟಿ ಬಿಚ್ಚುತ್ತಿಲ್ಲ? ಮತಬ್ಯಾಂಕ್‌ ರಾಜಕಾರಣಕ್ಕೆ ಅವರೂ ಜೋತು ಬಿದ್ದಿದ್ದಾರೆಯೇ’ ಎಂದು ಕಾರಜೋಳ ಪ್ರಶ್ನಿಸಿದರು.

‘ಈ ಚುನಾವಣೆಯಲ್ಲಿ ನಾವು ಸೋತಿದ್ದೇವೆ. ಆದರೆ ಆಕಾಶ ಕೆಳಗೆ ಬಿದ್ದಿಲ್ಲ, ಪ್ರಳಯ ಆಗಿಲ್ಲ. ನಮಗೆ ಮುಂದೆ ಅವಕಾಶ ಸಿಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಪರಿಶಿಷ್ಟ ಹಣದ ದುರ್ಬಳಕೆಯನ್ನು ತಡೆದು, ಮೀಸಲಿಟ್ಟ ಅನುದಾನವನ್ನು ನಿಗದಿಯ ಉದ್ದೇಶಕ್ಕೆ ಮಾತ್ರ ಬಳಸಬೇಕು. ಹಣ ದುರ್ಬಳಕೆ ವಿರುದ್ಧ ಹೋರಾಟ ಮಾಡಲೇಬೇಕು ಎಂದು ಹೇಳಿದರು.

ಮಾಜಿ ಸಚಿವ ಬಿ.ಶ್ರಿರಾಮುಲು ಮಾತನಾಡಿ, ‘ಬಿಜೆಪಿ ಸರ್ಕಾರ ಜನರಿಗಾಗಿ ಹಲವು ಒಳ್ಳೆಯ ಕೆಲಸಗಳನ್ನು ಮಾಡಿತ್ತು. ಆದರೆ, ಒಳ್ಳೆಯ ಕೆಲಸಗಳು ಈಗ ಮರೆತೇ ಹೋಗಿದೆ. ಕಾಂಗ್ರೆಸ್‌ ಸರ್ಕಾರದಿಂದ ಜನರು ಸಂಕಷ್ಟಕ್ಕಿಡಾಗಿದ್ದಾರೆ’ ಎಂದರು.

ಮಾಜಿ ಶಾಸಕ ಎನ್‌.ಮಹೇಶ್‌, ವಿಧಾನಪರಿಷತ್‌ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ಪ್ರಧಾನಕಾರ್ಯದರ್ಶಿ ಸಿದ್ದರಾಜು, ಕೋಲಾರ ಸಂಸದ ಮುನಿಸ್ವಾಮಿ, ಮಾಜಿ ಶಾಸಕ ಪಿ.ರಾಜೀವ್‌ ಸೇರಿ ಬಿಜೆಪಿಯ ಪ್ರಮುಖ ನಾಯಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT