ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಜಿನಿಯರಿಂಗ್‌ ಸೀಟುಗಳಲ್ಲಿ ಭಾರಿ ಇಳಿಕೆ

ಕಳೆದ ಬಾರಿಗೆ ಹೋಲಿಸಿದರೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 667 ಸೀಟುಗಳ ಕಡಿತ
Last Updated 10 ಜುಲೈ 2018, 19:40 IST
ಅಕ್ಷರ ಗಾತ್ರ

ಬೆಂಗಳೂರು:ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳ ಶುಲ್ಕ ನಿಗದಿಯಾಗುತ್ತಿದ್ದಂತೆ, ಬಾಕಿ ಉಳಿದ ಸೀಟುಗಳ ಹಂಚಿಕೆಯ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಂಗಳವಾರ ಪ್ರಕಟಿಸಿದೆ.

ಒಟ್ಟು 215 ಎಂಜಿನಿಯರಿಂಗ್‌ ಕಾಲೇಜುಗಳ 55,216 ಸೀಟುಗಳನ್ನು ಪ್ರಕಟಿಸಲಾಗಿದೆ. ಕಳೆದ ಬಾರಿಗಿಂತ 667 ಸೀಟುಗಳು ಕಡಿಮೆಯಾಗಿವೆ. ‌

‘ಬೇಡಿಕೆ ಕಡಿಮೆಯಾಗಿದ್ದರಿಂದ ಕಾಲೇಜುಗಳೇ ಸೀಟುಗಳ ಸಂಖ್ಯೆಯನ್ನು ಕಡಿಮೆಗೊಳಿಸಿದೆ. ಹಾಗಾಗಿ ಸಂಖ್ಯೆ ಇಳಿಮುಖವಾಗಿದೆ’ ಎಂದು ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜ್‌ಕುಮಾರ್‌ ಖತ್ರಿ ತಿಳಿಸಿದರು.‌

‘ಕಳೆದ ಬಾರಿ ಸಾಕಷ್ಟು ಸೀಟುಗಳು ಖಾಲಿ ಉಳಿದಿದ್ದವು. ಈ ಬಾರಿಯೂ ಆ ಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ. ಪದವಿಯಲ್ಲಿಯೂ ಎಂಜಿನಿಯರಿಂಗ್‌ ಕೋರ್ಸ್‌ಗಳಿಗೆ ತತ್ಸಮವಾದ ಕೋರ್ಸ್‌ಗಳು ಇರುವುದರಿಂದ ಎಂಜಿನಿಯರಿಂಗ್‌ ಕೋರ್ಸ್‌ಗಳನ್ನು ಓದುವವರ ಸಂಖ್ಯೆ ಕಡಿಮೆಯಾಗಿದೆ’ ಎಂದು ಕರ್ನಾಟಕ ಪರೀಕ್ಷ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದರು.

ಈ ಮೊದಲು‍ಪ್ರಾಧಿಕಾರ ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳ ಒಟ್ಟು 16,942 ಸೀಟುಗಳನಷ್ಟೇ ಹಂಚಿಕೆ ಮಾಡಿತ್ತು.ಎಂಜಿನಿಯರಿಂಗ್‌ ಕೋರ್ಸ್‌ಗಳ ಜೊತೆಗೆ ಬಿ.ಎಸ್ಸಿ ಕೃಷಿ ಹಾಗೂ ವಾಸ್ತುಶಿಲ್ಪ ಕೋರ್ಸ್‌ಗಳ ಸೀಟುಗಳ ಹಂಚಿಕೆಯ ಪಟ್ಟಿಯನ್ನು ಬಿಡುಗಡೆಮಾಡಿದೆ.

ಕೃಷಿ ವಿಜ್ಞಾನ ಮತ್ತು ಪಶುವೈದ್ಯಕೀಯ ವಿಜ್ಞಾನ ಕೋರ್ಸ್‌ ಸರ್ಕಾರಿ ಕೋಟಾದಡಿ 1,443, ಕೃಷಿ ಕೋಟಾದಡಿ 1,021 ಹಾಗೂ ವಿಶೇಷ ಕೋಟಾದಡಿ 383 ಸೀಟುಗಳ ಪಟ್ಟಿಯನ್ನು ಪ್ರಾಧಿಕಾರ ಮಂಗಳವಾರ ಪ್ರಕಟಿಸಿದೆ.

ವೈದ್ಯಕೀಯ ಮತ್ತು ದಂತವೈದ್ಯಕೀಯ ಕೋರ್ಸ್‌ಗೆ ವಿವಿಧ ಕೋಟಾದಡಿ ಲಭ್ಯವಿರುವ ಸೀಟುಗಳಿಗೆ ವಿದ್ಯಾರ್ಥಿಗಳು ಆಯ್ಕೆ ದಾಖಲಿಸುತ್ತಿದ್ದಾರೆ (ಆಪ್ಷನ್‌ ಎಂಟ್ರಿ). ಎಂಜಿನಿಯರಿಂಗ್ ಕೋರ್ಸ್‌ಗೆ ಇನ್ನೂ ಅವಕಾಶ ನೀಡಿಲ್ಲ. ಬುಧವಾರ ಸಂಜೆಯೊಳಗೆ ಎಂಜಿನಿಯರಿಂಗ್, ವಾಸ್ತುಶಿಲ್ಪ ಸೇರಿ ವಿವಿಧ ವೃತ್ತಿಪರ ಕೋರ್ಸ್‌ಗಳ ಆಯ್ಕೆ ದಾಖಲಿಸುವ ಪ್ರಕ್ರಿಯೆ ಪ್ರಾರಂಭವಾಲಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ಸ್ಪಷ್ಟಪಡಿಸಿದರು.

ಬಿ-ಫಾರ್ಮಾ ಸೀಟು ಬಂದಿಲ್ಲ

ಬಿ-ಫಾರ್ಮಾ ಮತ್ತು ಡಿ-ಫಾರ್ಮಾ ಕೋರ್ಸ್‌ಗಳ ಪ್ರಸಕ್ತ ಸಾಲಿನ ಸೀಟು ಹಂಚಿಕೆಯ ಪಟ್ಟಿ ಇನ್ನೂ ಬಿಟ್ಟಿಲ್ಲ. ಜುಲೈ 31ರೊಳಗೆ ಎಲ್ಲ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಬೇಕಿರುವುದರಿಂದ ಶೀಘ್ರ ಸೀಟು ಹಂಚಿಕೆ ಮಾಡಬೇಕೆಂದು ಪ್ರಾಧಿಕಾರದ ಅಧಿಕಾರಿಗಳೇ ಒತ್ತಾಯಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT