ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

2.5 ಲಕ್ಷ ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆ ಕಲೆ ತರಬೇತಿ: ಕೋಟ ಶ್ರೀನಿವಾಸ ಪೂಜಾರಿ

Published : 2 ಜೂನ್ 2022, 19:31 IST
ಫಾಲೋ ಮಾಡಿ
Comments

ಬೆಂಗಳೂರು: ವಿದ್ಯಾರ್ಥಿನಿಯರಿಗೆ ನೀಡುವ ‘ಓಬವ್ವ ಆತ್ಮರಕ್ಷಣೆ ಕಲೆ’ ತರಬೇತಿಯನ್ನು ಆರನೇ ತರಗತಿಯಿಂದಲೇ ಆರಂಭಿಸಲಾಗುವುದು. ಸುಮಾರು 2.5 ಲಕ್ಷ ವಿದ್ಯಾರ್ಥಿನಿಯರು ಇದರ ಪ್ರಯೋಜನ ಪಡೆಯಲಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಈ ಹಿಂದೆ ಎಸ್‌ಎಸ್‌ಎಲ್‌ಸಿ ನಂತರದ ವಿದ್ಯಾರ್ಥಿನಿಯರಿಗೆ ಮಾತ್ರ ತರಬೇತಿ ನೀಡಲಾಗುತ್ತಿತ್ತು. ಈ ವರ್ಷದಿಂದ ಆರನೇ ತರಗತಿಯಿಂದಲೇ ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆ ತರಬೇತಿ ನೀಡಲಾಗುತ್ತದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಅವರು, ಈಗ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ನ 24 ಸಾವಿರ ವಿದ್ಯಾರ್ಥಿನಿಯರಿಗೆ ಓಬವ್ವ ಆತ್ಮ ರಕ್ಷಣೆ ಕಲೆ ತರಬೇತಿ ನೀಡಲಾಗುತ್ತಿದೆ. ಈ ಸಾಲಿನಲ್ಲಿ ಪ್ರಿ ಮೆಟ್ರಿಕ್‌ ವಿದ್ಯಾರ್ಥಿನಿಯರು ಸೇರಿ ಒಟ್ಟು 50 ಸಾವಿರ ವಿದ್ಯಾರ್ಥಿನಿಯರಿಗೆ ತರಬೇತಿ ನೀಡಲಾಗುವುದು. ಇದಕ್ಕೆ ಹೆಚ್ಚುವರಿಯಾಗಿ ₹5 ಕೋಟಿ ಖರ್ಚಾಗುತ್ತದೆ ಎಂದು ಹೇಳಿದರು.

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯ 300 ಶಾಲೆಗಳಲ್ಲಿ ತಲಾ 100 ವಿದ್ಯಾರ್ಥಿನಿಯರಂತೆ ಒಟ್ಟು 30 ಸಾವಿರ ವಿದ್ಯಾರ್ಥಿನಿಯರು ಆತ್ಮ ರಕ್ಷಣಾ ಕಲೆ ತರಬೇತಿ ಪಡೆದಿದ್ದಾರೆ. ಈ ಸಾಲಿನಲ್ಲಿ ಹೆಚ್ಚುವರಿಯಾಗಿ 520 ವಸತಿ ಶಾಲೆಗಳ 82 ಸಾವಿರ ವಿದ್ಯಾರ್ಥಿನಿಯರು ತರಬೇತಿಗೆ ಒಳಪಡುತ್ತಾರೆ. ಒಟ್ಟು 1.15 ಲಕ್ಷ ವಿದ್ಯಾರ್ಥಿನಿಯರು ತರಬೇತಿ ಪಡೆಯಲಿದ್ದಾರೆ. ಇದರ ಅಂದಾಜು ವೆಚ್ಚ ₹17 ಕೋಟಿ ಆಗಲಿದೆ ಎಂದೂ ಹೇಳಿದರು.

ಕಳೆದ ಸಾಲಿನಲ್ಲಿ ಪ್ರಾಯೋಗಿಕವಾಗಿ ಪೋಸ್ಟ್‌ ಮೆಟ್ರಿಕ್‌ ವಿದ್ಯಾರ್ಥಿನಿಯರಿಗೆ ಮಾತ್ರ ತರಬೇತಿ ನೀಡಲಾಗಿತ್ತು. ಈ ಸಾಲಿನಲ್ಲಿ 630 ಪೋಸ್ಟ್‌ ಮೆಟ್ರಿಕ್‌ ಮತ್ತು 290 ಪ್ರಿಮೆಟ್ರಿಕ್‌ ವಿದ್ಯಾರ್ಥಿ ನಿಲಯಗಳ ಸುಮಾರು 85 ಸಾವಿರ ವಿದ್ಯಾರ್ಥಿನಿಯರು ತರಬೇತಿಗೆ ಒಳಪಡುತ್ತಾರೆ ಎಂದರು.

ಖಾತೆಗೆ ನೇರ ವರ್ಗಾವಣೆ: 2021–22 ನೇ ಸಾಲಿನಲ್ಲಿಮೆಟ್ರಿಕ್‌ ನಂತರದ 3.74 ಲಕ್ಷ ವಿದ್ಯಾರ್ಥಿಗಳ ಪೈಕಿ 3.62 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಲಾಗಿದೆ. 12 ಸಾವಿರ ವಿದ್ಯಾರ್ಥಿಗಳ ಆಧಾರ್‌ ಕಾರ್ಡ್‌ ಹೊಂದಾಣಿಕೆ ಕೊರತೆಯಿಂದ ವಿದ್ಯಾರ್ಥಿ ವೇತನ ಬಿಡುಗಡೆ ಆಗಿಲ್ಲ. ಈ ತಿಂಗಳ ಕೊನೆಯೊಳಗೆ ಸರಿಪಡಿಸಲಾಗುವುದು. ಮೊತ್ತವನ್ನು ವಿದ್ಯಾರ್ಥಿಗಳ ಖಾತೆಗೆ ನೇರ ವರ್ಗಾವಣೆ ಮಾಡಲಾಗುವುದು ಎಂದರು.

ಅಲ್ಲದೆ,ಮೆಟ್ರಿಕ್‌ ಪೂರ್ವದ 9.71 ಲಕ್ಷ ವಿದ್ಯಾರ್ಥಿಗಳ ಪೈಕಿ 9.13 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಲಾಗಿದೆ. ಮೆಟ್ರಿಕ್‌ ನಂತರದ ಮತ್ತು ಮೆಟ್ರಿಕ್‌ ಪೂರ್ವ ವಿದ್ಯಾರ್ಥಿಗಳಿಗೆ ₹437 ಕೋಟಿ ಬಿಡುಗಡೆ ಮಾಡಲಾಗಿದೆ ಅವರು ಎಂದು ವಿವರಿಸಿದರು.

ಈ ವರ್ಷ ಧಾರವಾಡದಲ್ಲಿ ₹20 ಕೋಟಿ ವೆಚ್ಚದಲ್ಲಿ 5 ಬಿಸಿಎಂ ಹಾಸ್ಟೆಲ್‌ಗಳನ್ನು ತೆರೆಯಲು ಕೇಂದ್ರ ಸರ್ಕಾರದ ಮಂಜೂರಾತಿ ದೊರಕಿದ್ದು, ಸದ್ಯದಲ್ಲಿಯೇ ಕಾಮಗಾರಿ ಆರಂಭವಾಗಲಿದೆ. ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದ ಮೆಟ್ರಿಕ್‌ ನಂತರದ ವಿದ್ಯಾರ್ಥಿಗಳ ವಿದ್ಯಾರ್ಥಿ ನಿಲಯಕ್ಕಾಗಿ 9 ವಿದ್ಯಾರ್ಥಿ ನಿಲಯಗಳನ್ನು ಇಲಾಖೆಯಿಂದ ಮಂಜೂರು ಮಾಡಲಾಗಿದೆ. ಇದಕ್ಕೆ ₹30 ಕೋಟಿ ವೆಚ್ಚವಾಗಲಿದೆ ಎಂದು ಸಚಿವರು ಹೇಳಿದರು.

ಕನಕದಾಸರ ಹೆಸರಿನಲ್ಲಿ 50 ಹಾಸ್ಟೆಲ್‌:

* ಕನಕದಾಸರ ಹೆಸರಿನಲ್ಲಿ 50 ಹಾಸ್ಟೆಲ್‌ಗಳನ್ನು ನಿರ್ಮಿಸಲಾಗುವುದು. ಇದಕ್ಕೆ ₹165 ಕೋಟಿ ವೆಚ್ಚವಾಗಲಿದೆ.

* ಹಿಂದುಳಿದ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳ ಶುಲ್ಕ ವಿನಾಯಿತಿಗಾಗಿ ಪಿಯುಸಿ ನಂತರದಿಂದ ಪಿಎಚ್‌ಡಿವರೆಗಿನ 8.5 ಲಕ್ಷ ವಿದ್ಯಾರ್ಥಿಗಳಿಗೆ ₹400 ಕೋಟಿ ಮೀಸಲಿರಿಸಲಾಗಿದೆ.

*438 ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್‌ ನಂತರದ ವಿದ್ಯಾರ್ಥಿಗಳಿಗೆ 15 ದಿನಗಳಲ್ಲಿ ‘ಶುಚಿ ಸಂಭ್ರಮ’ ಕಿಟ್‌ ವಿತರಿಸಲಾಗುವುದು. ಇದಕ್ಕೆ ₹24 ಕೋಟಿ ವೆಚ್ಚವಾಗಲಿದೆ.

* ಮೆಟ್ರಿಕ್‌ ನಂತರದ ಮತ್ತು ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ಜಮಖಾನ, ಬೆಡ್‌ಶೀಟ್‌, ಹೊದಿಕೆ, ದಿಂಬು ಸರಬರಾಜು ಮಾಡಲು ₹16 ಕೋಟಿ ಬಿಡುಗಡೆ ಮಾಡಲಾಗುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT