ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುರುಘಾ ಶರಣರ ವಿರುದ್ಧದ ಮಕ್ಕಳ ಮೇಲೆ ಅತ್ಯಾಚಾರ ಆರೋಪ ಪ್ರಕರಣ: ವರದಿಯಲ್ಲೇನಿದೆ?

ಇನ್ನೂ ತನಿಖಾಧಿಕಾರಿಯ ಕೈಸೇರದ ಎಫ್‌ಎಸ್‌ಎಲ್‌ ವರದಿ
Published : 5 ಜನವರಿ 2023, 21:11 IST
ಫಾಲೋ ಮಾಡಿ
Comments

ಬೆಂಗಳೂರು: ಮಕ್ಕಳ ಮೇಲೆ ಅತ್ಯಾಚಾರ (ಪೋಕ್ಸೊ) ಎಸಗಿದ ಆರೋಪಕ್ಕೆ ಗುರಿಯಾಗಿ ಜೈಲಿನಲ್ಲಿರುವ ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಶರಣರ ವಿರುದ್ಧ ಪೊಲೀಸರು ಸಲ್ಲಿಸಿರುವ ಮಧ್ಯಂತರ ದೋಷಾರೋಪ ಪಟ್ಟಿಯ ವೈದ್ಯಕೀಯ ವರದಿ ಈಗ ಚರ್ಚೆಗೆ ಕಾರಣವಾಗಿದೆ.

ಈ ಕುರಿತ ವಿಧಿವಿಜ್ಞಾನ ಪ್ರಯೋ ಗಾಲಯ (ಎಫ್‌ಎಸ್‌ಎಲ್) ವರದಿ ಬರಬೇಕಿದ್ದು, ಅದಾದ ಬಳಿಕವಷ್ಟೇ ಅಂತಿಮ ದೋಷಾರೋಪ ಪಟ್ಟಿ ಸಲ್ಲಿಸ ಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ವರದಿಯಲ್ಲಿ ಏನಿದೆ?: ಈ ಪ್ರಕರಣದ ತನಿಖಾಧಿಕಾರಿಗಳು ಚಿತ್ರದುರ್ಗದ 2ನೇ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯಕ್ಕೆ ಪಟ್ಟಿ ಸಲ್ಲಿಸಿದ್ದರು. ಅದರಲ್ಲಿ ವೈದ್ಯಕೀಯ ವರದಿ ಇದೆ. ಸಂತ್ರಸ್ತ ಬಾಲಕಿಯರನ್ನು ವೈದ್ಯಕೀಯ ಪರೀಕ್ಷೆಗೆ ಗುರಿಪಡಿಸಿದ್ದ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಹಿರಿಯ ತಜ್ಞರು 2022ರ ಆಗಸ್ಟ್‌ ನಲ್ಲಿ ವರದಿ ಸಲ್ಲಿಸಿದ್ದರು.

‘ಬಾಲಕಿಯರ ಮೇಲೆ ಸಂಭೋಗ ಆಗಿಲ್ಲ’ ಎಂದೇ ವಿವರಿಸಲಾಗಿದ್ದು ‘ಅಂತಿ ಮ ವರದಿಯನ್ನು ಕಾಯ್ದಿರಿಸಲಾಗಿದೆ’ ಎಂದು ತಿಳಿಸಲಾಗಿದೆ. ವರದಿಯಲ್ಲಿ ಕಾಣಿಸಿರುವ ಅಂಶಗಳಲ್ಲಿ, ‘ಸಂತ್ರಸ್ತೆಯರ ಕನ್ಯಾಪೊರೆಗೆ ಹಾನಿಯಾಗಿಲ್ಲ, ಅವರ ಗುಪ್ತಾಂಗದ ಹೊರಭಾಗದಲ್ಲೂ ಯಾವುದೇ ಗಾಯದ ಗುರುತುಗಳಿಲ್ಲ, ಯೋನಿಯ ಹೊರಪದರದಲ್ಲಿ
ಯಾವುದೇ ರೀತಿಯ ಹುಣ್ಣೂ ಇಲ್ಲ...‘ ಎಂದು ವರದಿ ಹೇಳಿದೆ.

ವೈದ್ಯಕೀಯ ಮಾನದಂಡಕ್ಕೆ ಅನುಗುಣವಾಗಿ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತ ಬಾಲಕಿಯರನ್ನು ಹತ್ತು ವಿಧವಾದ ಸೂಕ್ಷ್ಮ ಪರೀಕ್ಷೆಗಳಿಗೆ ಒಳಪಡಿಸಲಾಗಿದೆ ಎಂದೂ ವರದಿ ಉಲ್ಲೇಖಿಸಿದೆ.

‘ಸಂಭೋಗ (ರೇಪ್‌) ಎಂದು ಕರೆಯುವಾಗ ಶಿಶ್ನವು ಯೋನಿಯನ್ನು ಪ್ರವೇಶಿಸಿರಲೇಬೇಕು ಎಂದೇನಿಲ್ಲ. ಶಿಶ್ನವು ಯೋನಿಯನ್ನು ಸ್ಪರ್ಶಿಸಿದರೂ ಸಾಕು ಅದು ಹಟ ಸಂಭೋಗ ಅಥವಾ ಸಾಮಾನ್ಯವಾಗಿ ಕರೆಯಲಾಗುವ ಅತ್ಯಾಚಾರ ಎಂದೇ ಆಗುತ್ತದೆ’ ಎನ್ನುತ್ತಾರೆ ಹಿರಿಯ ಕ್ರಿಮಿನಲ್‌ ವಕೀಲ ಸಿ.ಎಚ್‌.ಹನುಮಂತರಾಯ.

‘ಸಂತ್ರಸ್ತ ಬಾಲಕಿಯರು ಸ್ಥಳೀಯ ಜಿಲ್ಲಾ ಆಸ್ಪತ್ರೆಯಲ್ಲಿ ನೀಡಲಾಗಿರುವ ವರದಿಯನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುವ ಮೂಲಕ ಮರು ಪರೀಕ್ಷೆ ನಡೆಸುವಂತೆ ಕೋರಲು ಕಾನೂನಿನಲ್ಲಿ ಮುಕ್ತ ಅವಕಾಶಗಳಿವೆ’ ಎನ್ನುತ್ತಾರೆ ಹೈಕೋರ್ಟ್‌ ವಕೀಲ ಎಚ್‌.ಸುನಿಲ್‌ ಕುಮಾರ್.

ಪ್ರಕರಣಗಳು: ಮುರುಘಾ ಶರಣರ ವಿರುದ್ಧ ಪೋಕ್ಸೊ ಕಾಯ್ದೆ–2012ರ ಕಲಂ 17,5 (ಎಲ್‌),6 ಮತ್ತು ಭಾರತೀಯ ದಂಡ ಸಂಹಿತೆ–1860ರ ಕಲಂ 376 (2), 376 (ಡಿಎ) 376 (3), 201, 202, 506ರ ಜೊತೆಗೆ ಓದಿಕೊಳ್ಳಲಾಗುವ 34,3 ಹಾಗೂ ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯ್ದೆ-1988ರ ಕಲಂ 3 (ಎಫ್‌), 7ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಅಪರಾಧಿ ರಕ್ಷಿಸುವ ತಂತ್ರ

ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸರ್ಕಾರ ಹಾಗೂ ಸುಪ್ರೀಂಕೋರ್ಟ್ ಪೊಕ್ಸೊ ಕಾಯ್ದೆಗೆ ಎಂತಹ ಬಲ ತುಂಬಿವೆ ಎಂದರೆ ಸಂತ್ರಸ್ತ ಬಾಲಕಿಯರ ನೈಜ ಹೇಳಿಕೆಯ ಆಧಾರದ ಮೇಲೆಯೇ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಬಹುದು. ಈ ಪ್ರಕರಣದಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ಅಪರಾಧಿಯನ್ನು ರಕ್ಷಿಸುವ ತಂತ್ರಗಳು ಎದ್ದು ಕಾಣುತ್ತಿವೆ. ರಾಘವೇಶ್ವರ ಶ್ರೀ ಪ್ರಕರಣದಲ್ಲೂ ಹಲವು ನ್ಯಾಯಮೂರ್ತಿಗಳು ವಿಚಾರಣೆಯಿಂದ ಹಿಂದೆ ಸರಿದಿದ್ದರು. ಈ ಪ್ರಕರಣವೂ ಅದೇ ಹಾದಿ ಹಿಡಿದರೆ ಮಹಿಳೆಯರ ನಂಬಿಕೆಗಳಿಗೆ ದೊಡ್ಡ ಪೆಟ್ಟು ಬೀಳುತ್ತದೆ.

–ಡಾ.ಪದ್ಮಿನಿ ನಾಗರಾಜು, ಮಹಿಳಾ ಚಿಂತಕಿ

ಸಂತ್ರಸ್ತೆಯರನ್ನು ಅವಮಾನಿಸಿದಂತೆ

ವೈದ್ಯಕೀಯ ಪರೀಕ್ಷೆಯ ವರದಿಯಲ್ಲಿ ಸಂಭೋಗ ನಡೆದಿಲ್ಲ ಎಂದು ಉಲ್ಲೇಖಿಸಿರುವುದು ಅತ್ಯಾಚಾರಕ್ಕೆ ಒಳಗಾದ ಬಾಲಕಿಯರನ್ನು ಅನುಮಾನಿಸಿ, ಅವಮಾನಿಸಿದಂತೆ. 2022ರ ಆಗಸ್ಟ್‌ನಲ್ಲಿ ನೀಡಲಾಗಿದ್ದ ವರದಿಯನ್ನು ಹರಿಯಬಿಟ್ಟಿರುವುದರ ಹಿಂದೆ ಹುನ್ನಾರವಿದೆ. ಪೋಕ್ಸೊ ಪ್ರಕರಣಗಳಲ್ಲಿ ಜಾಮೀನು ಸಿಗುವುದು ಕಷ್ಟ. ಆರೋಪಿಯನ್ನು ಅಪರಾಧಿ ಎಂದೇ ಪರಿಗಣಿಸಿ ನ್ಯಾಯಾಲಯ ಜೈಲಿಗೆ ಕಳಿಸಿರುತ್ತದೆ. ಶಿವಮೂರ್ತಿ ಶರಣರಿಗೆ ಜಾಮೀನು ದೊರಕಿಸಲು ಅವರ ಪರವಾದ ಪರಿಣತ ಗುಂಪುಗಳು ನಿರಂತರ ಪ್ರಯತ್ನ ಮಾಡುತ್ತಿವೆ. ಅದಕ್ಕಾಗಿ ಇಂತಹ ಗೊಂದಲಗಳನ್ನು ಸೃಷ್ಟಿಸುವ ಕೆಲಸ ನಿರಂತರವಾಗಿ ಮಾಡುತ್ತಿವೆ.

–ಸ್ಟ್ಯಾನ್ಲಿ, ಒಡನಾಡಿ ಸಂಸ್ಥೆ, ಮೈಸೂರು

ವೈದ್ಯಕೀಯ ಪರೀಕ್ಷೆ: ಮಾರ್ಗಸೂಚಿ ಉಲ್ಲಂಘನೆ

ಮಕ್ಕಳ ಮೇಲೆ ಆಗುವ ಆಘಾತಗಳನ್ನು ಅಳೆಯಲು ಇರಬೇಕಾದ ಮಾನದಂಡಗಳೂ ಸೂಕ್ಷ್ಮವಾಗಿರಬೇಕು. ಲೈಂಗಿಕ ಕಿರುಕುಳಕ್ಕೊಳಗಾದ ಮಕ್ಕಳನ್ನು ಪರೀಕ್ಷೆಗೊಳಪಡಿಸುವಾಗ ಕೆಲವು ಸಂಗತಿಗಳನ್ನು ಮಾಡಲೇಬಾರದು ಎಂದು ಮಾರ್ಗಸೂಚಿ ಹೇಳುತ್ತದೆ. ಬಹಿರಂಗಗೊಂಡಿರುವ ವೈದ್ಯಕೀಯ ವರದಿಯಲ್ಲಿ ಅವೆಲ್ಲವನ್ನೂ ಉಲ್ಲಂಘಿಸಲಾಗಿದೆ. ವರದಿ ಹಿಡಿದುಕೊಂಡು ಅನಗತ್ಯ ಗೊಂದಲ ಮೂಡಿಸುವ ದುರುದ್ದೇಶದ ಕೆಲಸ ನಡೆಯುತ್ತಿದೆ.

–ಮಲ್ಲಿಗೆ, ಸಾಮಾಜಿಕ ಕಾರ್ಯಕರ್ತೆ. ಮಂಡ್ಯ

ದಾರಿ ತಪ್ಪಿಸುವ ಲಕ್ಷಣಗಳು ಗೋಚರ

ಈ ಪ್ರಕರಣದ ದಾರಿ ತಪ್ಪಿಸುವ ಪ್ರಯತ್ನದ ಲಕ್ಷಣಗಳೂ ಗೋಚರಿಸುತ್ತಿವೆ. ಅಪ್ರಾಪ್ತ ಬಾಲಕಿಯರು ತಮ್ಮ ಮೇಲೆ ದೌರ್ಜನ್ಯ ನಡೆದಿದೆ ಎಂದು‌ ದೂರು ಸಲ್ಲಿಸಿದ್ದಾರೆ, ಈಗ ಬರುತ್ತಿರುವ ವರದಿಗಳು ಅದಕ್ಕೆ ವ್ಯತಿರಿಕ್ತವಾಗಿ ಇರುವುದು ನೋಡಿದರೆ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡ ಎದ್ದು ಕಾಣಿಸುತ್ತಿದೆ. ಪ್ರಕರಣವನ್ನು ಬಾಲಕಿಯರ ಭವಿಷ್ಯದ ಪ್ರಶ್ನೆಯಾಗಿ ಪರಿಗಣಿಸಬೇಕು.

–ಕೆ.ಎಸ್‌. ವಿಮಲಾ, ಜನವಾದಿ ಮಹಿಳಾ ಸಂಘಟನೆ

ಹೇಳಿಕೆ ಆಧಾರದಲ್ಲಿ ಶಿಕ್ಷೆಯಾಗಲಿ

ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗುವವರ ವಿರುದ್ಧ ತ್ವರಿತ ವಿಚಾರಣೆ ನಡೆಸಿ, ಶಿಕ್ಷೆ ಘೋಷಿಸಬೇಕು. ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತ ಮಕ್ಕಳ ಹೇಳಿಕೆ ಆಧಾರದಲ್ಲೇ ಶಿಕ್ಷೆ ನಿಗದಿ ಮಾಡಬೇಕು. ನೊಂದ ಮಕ್ಕಳು ಆಘಾತದಿಂದ ಹೊರಬರಲು ಕೌನ್ಸೆಲಿಂಗ್ ವ್ಯವಸ್ಥೆ ಮಾಡಬೇಕು. ಇಂತಹ ಪ್ರಕರಣಗಳಲ್ಲಿ ಮಕ್ಕಳಿಗೆ ಸಹಾಯ ಮಾಡಲು ಸರ್ಕಾರ ದಿನದ 24 ಗಂಟೆ ಕಾರ್ಯನಿರ್ವಹಿಸುವ ಕೌನ್ಸೆಲಿಂಗ್ ಕೇಂದ್ರಗಳನ್ನು ತೆರೆಯಬೇಕು.

–ವಸುಂಧರಾ ಭೂಪತಿ, ವೈದ್ಯೆ, ಸಾಹಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT