ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರೂರು ಗುಡ್ಡ ಕುಸಿತ ದುರಂತ: ರಕ್ಷಣಾ ಕಾರ್ಯ ಸ್ಥಗಿತ- ಹೈಕೋರ್ಟ್‌ಗೆ ಸರ್ಕಾರ

Published : 21 ಆಗಸ್ಟ್ 2024, 16:54 IST
Last Updated : 21 ಆಗಸ್ಟ್ 2024, 16:54 IST
ಫಾಲೋ ಮಾಡಿ
Comments

ಬೆಂಗಳೂರು: ‘ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಶಿರೂರು ಗ್ರಾಮ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-66ರ ಅಂಚಿನಲ್ಲಿ ಸಂಭವಿಸಿದ ಗುಡ್ಡ ಕುಸಿತದ ಪ್ರಕರಣದಲ್ಲಿ; ನಾಪತ್ತೆಯಾದವರ ಹುಡುಕಾಟ ಹಾಗೂ ಇತರೆ ರಕ್ಷಣಾ ಕಾರ್ಯಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ’ ಎಂದು ರಾಜ್ಯ ಸರ್ಕಾರ, ಹೈಕೋರ್ಟ್‌ಗೆ ತಿಳಿಸಿದೆ.

ಈ ಸಂಬಂಧ ಹೈಕೋರ್ಟ್‌ ವಕೀಲ ಶಿಜಿ ಮಲಯಾಳಿ ಹಾಗೂ ನವದೆಹಲಿಯ ಕೆ.ಆರ್.ಸುಭಾಷ್‌ ಚಂದ್ರನ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹಾಜರಾಗಿದ್ದ ಅಡ್ವೊಕೇಟ್‌ ಜನರಲ್ ಕೆ.ಶಶಿಕಿರಣ್ ಶೆಟ್ಟಿ, ‘ಮಣ್ಣಿನಡಿ ಸಿಲುಕಿದ್ದ 11 ಜನರ ಪೈಕಿ 8 ಜನರ ಮೃತ ದೇಹಗಳನ್ನು ಪತ್ತೆ ಹಚ್ಚಿ ಹೊರತೆಗೆಯಲಾಗಿದ್ದು, ಇನ್ನೂ ಮೂವರ ಪತ್ತೆಯಾಗಬೇಕಿದೆ. ಆದರೆ, ನದಿಯಲ್ಲಿ ನೀರಿನ ಪ್ರಮಾಣ ಹಾಗೂ ರಭಸ ಹೆಚ್ಚಾಗಿದೆ. ಕೆಲವು ಪ್ರತಿಕೂಲ ಸಂದರ್ಭಗಳು ಎದುರಾದ ಹಿನ್ನೆಲೆಯಲ್ಲಿ ಇದೇ 16ರಿಂದ ರಕ್ಷಣಾ ಕಾರ್ಯ ಸ್ಥಗಿತಗೊಳಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರ ಪರ ವಕೀಲರು, ‘ರಕ್ಷಣಾ ಕಾರ್ಯ ಮುಂದುವರಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಮನವಿ ಮಾಡಿದರು. ‘ಸರ್ಕಾರ, ಸ್ಥಳೀಯ ಈಜುಗಾರ ಈಶ್ವರ್ ಮಲ್ಪೆ ನೆರವು ಪಡೆದುಕೊಳ್ಳುತ್ತಿಲ್ಲ. ಘಟನಾ ಸ್ಥಳದ ಬಳಿ ಬರುವುದಕ್ಕೂ ಆಕ್ಷೇಪಿಸಲಾಗುತ್ತಿದೆ. ಪೊಲೀಸರು ಬೆದರಿಕೆ ಹಾಕುತ್ತಿದ್ದಾರೆ’ ಎಂದು ಆರೋಪಿಸಿದರು.

ಇದನ್ನು ತಳ್ಳಿಹಾಕಿದ ಶಶಿಕಿರಣ ಶೆಟ್ಟಿ, ‘ಅರ್ಜಿದಾರರ ಪರ ವಕೀಲರು ಒಬ್ಬ ವ್ಯಕ್ತಿಯ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಸೇನಾ ಸಿಬ್ಬಂದಿ ಸೇರಿ 171 ಜನ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಮನುಷ್ಯರಿಗೆ ಸಾಧ್ಯವಾಗಬಹುದಾದ ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡಲಾಗಿದೆ’ ಎಂದರು.

ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಅರವಿಂದ್ ಕಾಮತ್, ‘ನದಿಯಲ್ಲಿ ನೀರಿನ ಪ್ರವಾಹದ ವೇಗ ಕಡಿಮೆ ಇದ್ದರಷ್ಟೇ ರಕ್ಷಣಾ ಕಾರ್ಯ ನಡೆಸಬಹುದು. ಆದರೆ, ಸದ್ಯ ಪ್ರವಾಹದ ವೇಗವು ಹೆಚ್ಚಿದೆ. ಇಂತಹ ಸಂದರ್ಭದಲ್ಲಿ ಈಜುಗಾರರ ತಂಡ ಅಥವಾ ಇತರ ರಕ್ಷಣಾ ಸಿಬ್ಬಂದಿಯನ್ನು ನೀರಿಗೆ ಇಳಿಸಿದರೆ ಅವರ ಜೀವಗಳನ್ನು ಅಪಾಯಕ್ಕೆ ದೂಡಿದಂತೆ ಆಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡುವ ಹಾಗೂ ಪುನರ್ವಸತಿ ಕಲ್ಪಿಸುವ ಸಂಬಂಧ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಒದಗಿಸಿ’ ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆಯನ್ನು ಸೆಪ್ಟೆಂಬರ್ 18ಕ್ಕೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT