ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಮೊಗ್ಗ: BJP ಸಂಭ್ರಮಾಚರಣೆ ಸ್ಥಳದಲ್ಲಿ ‘ಅಲ್ಲಾಹು ಅಕ್ಬರ್’ ಘೋಷಣೆ ಕೂಗಿದ ಮಹಿಳೆ

Published 22 ಜನವರಿ 2024, 6:21 IST
Last Updated 22 ಜನವರಿ 2024, 6:21 IST
ಅಕ್ಷರ ಗಾತ್ರ

ಶಿವಮೊಗ್ಗ: ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಇಲ್ಲಿನ ಶಿವಪ್ಪ ನಾಯಕ ವೃತ್ತದಲ್ಲಿ ಸೋಮವಾರ ಬಿಜೆಪಿ ಜಿಲ್ಲಾ ಘಟಕದಿಂದ ಸಾರ್ವಜನಿಕರಿಗೆ ಸಿಹಿ ಹಂಚಿಕೆ, ಸಂಭ್ರಮಾಚರಣೆ ನಡೆಯಿತು. ಈ ವೇಳೆ ಬಿಜೆಪಿ ಕಾರ್ಯಕರ್ತರ 'ಜೈ ಶ್ರೀರಾಮ್' ಘೋಷಣೆಗೆ ಪ್ರತಿಯಾಗಿ ಅಲ್ಲಿದ್ದ ಮುಸ್ಲಿಂ ಮಹಿಳೆಯೊಬ್ಬರು 'ಅಲ್ಲಾಹು ಅಕ್ಬರ್' ಎಂದು ಘೋಷಣೆ ಕೂಗಿದರು. ಇದು ಕೆಲಕಾಲ ಸ್ಥಳದಲ್ಲಿ ಗೊಂದಲ ಸೃಷ್ಟಿಸಿತು.

ಘೋಷಣೆ ಕೂಗಿದ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದು ಕೋಟೆ ಪೊಲೀಸ್ ಠಾಣೆಗೆ ಕರೆದೊಯ್ದರು.

ಬಿಜೆಪಿ ಸಂಭ್ರಮಾಚರಣೆ ವೇಳೆ ಶಿವಪ್ಪ ನಾಯಕ ವೃತ್ತದ ಮೂಲಕ ಸ್ಕೂಟರ್ ನಲ್ಲಿ ಮಗುವಿನೊಂದಿಗೆ ಹೊರಟಿದ್ದ ಮಹಿಳೆ ಸಂಭ್ರಮಾಚರಣೆ ಕಾರ್ಯಕ್ರಮ ನೋಡುತ್ತಾ ನಿಂತಿದ್ದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಸಂಚಾರ ದಟ್ಟಣೆ ತಪ್ಪಿಸಲು ಅವರನ್ನು ಅಲ್ಲಿಂದ ಕಳಿಸಲು ಮುಂದಾದರು. ಆಗ ಮಹಿಳೆ ಪ್ರತಿಭಟಿಸಿದರು.

ಇದೇ ವೇಳೆ ಸಂಭ್ರಮಾಚರಣೆಯಲ್ಲಿ ನಿರತರಾಗಿದ್ದವರು 'ಜೈ ಶ್ರೀರಾಮ್' ಎಂದು ಘೋಷಣೆ ಕೂಗುತ್ತಿದ್ದರು. ಆಗ ಮಹಿಳೆಯೂ 'ಅಲ್ಲಾಹು ಅಕ್ಬರ್' ಎಂದು ಘೋಷಣೆ ಕೂಗಿದರು. ಇದರಿಂದ ಪೊಲೀಸರು ತಬ್ಬಿಬ್ಬಾದರು.

ಪೊಲೀಸರು ಅಲ್ಲಿಂದ ಕಳುಹಿಸಲು ಮುಂದಾದರೂ ಮಹಿಳೆ ಘೋಷಣೆ ಕೂಗುವುದು ಮುಂದುವರೆಸಿದರು. ಅದಕ್ಕೆ ಪ್ರತಿಯಾಗಿ ಗುಂಪು ಕೂಡ 'ಜೈಶ್ರೀರಾಮ್' ಘೋಷಣೆ ಕೂಗತೊಡಗಿ ಆಕೆಯ ಹಿಂದೆ ತೆರಳಿತು. ಇದರಿಂದ ಕೆಲಕಾಲ ಶಿವಪ್ಪ ನಾಯಕ ವೃತ್ತದಲ್ಲಿ ಗೊಂದಲವೇರ್ಪಟ್ಟಿತು. ಮಹಿಳೆಯನ್ನು ವಶಕ್ಕೆ ಪಡೆದ ಪೊಲೀಸರು ವಾಹನದಲ್ಲಿ ಠಾಣೆಗೆ ಕರೆದೊಯ್ದರು.

ಘೋಷಣೆ ಕೂಗಿದ ಮಹಿಳೆಗೆ ಮಾನಸಿಕ ಸ್ಥಿಮಿತತೆ ಇರಲಿಲ್ಲ, ಕುಟುಂಬದವರ ಹೇಳಿಕೆ: ಎಸ್ಪಿ

ಇಲ್ಲಿನ ಶಿವಪ್ಪ ನಾಯಕ ವೃತ್ತದಲ್ಲಿ ಸೋಮವಾರ 'ಅಲ್ಲಾ ಹು ಅಕ್ಬರ್' ಎಂದು ಘೋಷಣೆ ಕೂಗಿದ ಮಹಿಳೆಗೆ ಮಾನಸಿಕ ಸ್ಥೀಮಿತ ಇಲ್ಲ ಎಂದು ಆಕೆಯ ತಂದೆ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ ಎಂದು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ.

ಮಾನಸಿಕ ಸ್ಥೀಮಿತತೆ ಇಲ್ಲದ ಕಾರಣಕ್ಕೆ ಆಕೆ ಚಿಕಿತ್ಸೆ ಕೂಡ ಪಡೆಯುತ್ತಿದ್ದಾರೆ ಎಂದು ಆಕೆಯ ಕುಟುಂಬದವರು ತಿಳಿಸಿದ್ದು, ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಎಸ್ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT