ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯ ಪರಿಷ್ಕರಣೆ: ಸಿದ್ದರಾಮಯ್ಯ ಎಡಪಂಥೀಯ ವಿಚಾರಧಾರೆಯ ಕೈಗೊಂಬೆ- ಮಾಜಿ ಸ್ಪೀಕರ್ ಕಾಗೇರಿ

ಓಲೈಕೆಯ ಭಾಗವಾಗಿ ಪಠ್ಯಪುಸ್ತಕ ಪರಿಷ್ಕರಿಸಲು ಮುಂದಾಗಿದ್ದಾರೆ ಎಂಬ ಆರೋಪ
Published 12 ಜೂನ್ 2023, 7:11 IST
Last Updated 12 ಜೂನ್ 2023, 7:11 IST
ಅಕ್ಷರ ಗಾತ್ರ

ಶಿರಸಿ: ಎಡಪಂಥೀಯ ವಿಚಾರಧಾರೆಯ ಕೈಗೊಂಬೆಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅಂಥ ವಿಚಾರವುಳ್ಳವರ ಓಲೈಕೆಯ ಭಾಗವಾಗಿ ಪಠ್ಯಪುಸ್ತಕ ಪರಿಷ್ಕರಿಸಲು ಮುಂದಾಗಿದ್ದಾರೆ ಎಂದು ವಿಧಾನಸಭೆ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಟೀಕಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ಆಯೋಜಿಸಿ ಮಾತನಾಡಿದ ಅವರು, ಈ ನೆಲದ ನೈಜ ಪರಿಸ್ಥಿತಿ ತಿಳಿಸುವ ವಿಷಯಗಳು ಪ್ರಸ್ತುತ ಹಂಚಿಕೆಯಾದ ಪುಸ್ತಕದಲ್ಲಿದೆ. ಈಗ ಅದನ್ನು ತೆಗೆಯುವ ದ್ವೇಷದ ರಾಜಕೀಯ ಮುನ್ನೆಲೆಗೆ ತರಲಾಗುತ್ತಿದೆ. ಸಿದ್ದರಾಮಯ್ಯ ಅವರು ಎಡಪಂಥೀಯ ವಿಚಾರಧಾರೆಯ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ. ಅದರ ಭಾಗವಾಗಿಯೇ ಪಠ್ಯಪುಸ್ತಕ ಪರಿಷ್ಕರಣೆ ತರಾತುರಿ ಅವರಲ್ಲಿ ಕಾಣುತ್ತಿದೆ. ಪಠ್ಯದಲ್ಲಿ ಯಾವ ತಪ್ಪೂ ಇಲ್ಲ. ಅದನ್ನು ಬರೆದ ಸಾಹಿತಿಗಳ ಮೇಲೆ ಕಾಂಗ್ರೆಸ್ ಗೆ ಸಮಾಧಾನ ಇಲ್ಲದ ಕಾರಣ ಪರಿಷ್ಕರಣೆ ಆಗುತ್ತಿದೆ. ಆ ಮೂಲಕ ಮತ್ತೊಮ್ಮೆ ಗುಲಾಮಿತನದ ಮಾನಸಿಕತೆ ತರಲು ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಅವರು ಮುಂದಾಗಿದ್ದಾರೆ ಎಂದರು.

ಟಿಪ್ಪು ಚಂದ ಕಾಣುವವರಿಗೆ ಭಾರತದ ಇತಿಹಾಸ ಹೇಗೆ ಶ್ರೇಷ್ಠವಾಗಿ ಕಾಣಲು ಸಾಧ್ಯ? ಎಂದು ಪ್ರಶ್ನಿಸಿದ ಅವರು, ಪಾರದರ್ಶಕ ಚರ್ಚೆ, ಸಾಧಕ ಬಾಧಕ ಅರಿತ ನಂತರವೇ ಪರಿಷ್ಕರಣೆ ಆಗಬೇಕು. ಆದರೆ ಈಗ ಏಕಾಏಕಿ ಪರಿಷ್ಕರಣೆಗೆ ಮುಂದಾಗಿರುವುದು ಖಂಡನೀಯ ಎಂದರು.

ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ನಾಡ್ನುಡಿಯಂತೆ ಕಾಂಗ್ರೆಸ್ ಸರ್ಕಾರದ ನಡೆ ತಿಂಗಳೊಳಗೆ ಜನರ ಅರಿವಿಗೆ ಬರುತ್ತಿದೆ. ಆಡಳಿತ ಗೊಂದಲದ ಗೂಡಾಗಿದೆ. ಸಚಿವರು ತಮ್ಮ ಖಾತೆಗಳ ಜವಾಬ್ದಾರಿ ಅರಿಯುವ ಮುನ್ನ ಗೊಂದಲ ಸೃಷ್ಟಿಸುತ್ತಿದ್ದಾರೆ. ಪ್ರಬುದ್ಧವಾದ ನಿರ್ಣಯಗಳಿಗೆ ಇಲ್ಲಿ ಅವಕಾಶವಿಲ್ಲ. ಇಲಾಖೆಯನ್ನು ಮೊದಲು ನೋಡಿ. ಶಿಕ್ಷಣ ಇಲಾಖೆ ಸರಳವಾಗಿ ಅರಿವಿಗೆ ಬರುವ ಇಲಾಖೆಯಲ್ಲ. ಅನಗತ್ಯವಾಗಿ ಪಠ್ಯಪುಸ್ತಕ ಪರಿಷ್ಕರಣೆ ಮಾಡಬೇಡಿ ಎಂದರು.

ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಿಂದ ದ್ವೇಷದ ಸಂದೇಶ ಬರುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.

ಪಕ್ಷದ ಪ್ರಮುಖರಾದ ಮಾರುತಿ ನಾಯ್ಕ, ಗುರುರಾಜ ಶಾನಭಾಗ, ಉಷಾ ಹೆಗಡೆ, ನರಸಿಂಹ ಹೆಗಡೆ, ರಾಜೇಶ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT