ಬೆಂಗಳೂರು: ರಾಜ್ಯ ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆ, ಅಧಿಕಾರ ಹಸ್ತಾಂತರದ ಚರ್ಚೆಗಳು ಮುನ್ನಲೆಯಲ್ಲಿ ಇರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಮಾಡಿದ್ದ ಸರಣಿ ‘ಪೋಸ್ಟ್’ಗಳು ರಾಜಕೀಯ ವಲಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

‘ಕುರಿ ಕಾಯುತ್ತಿದ್ದವನು ಮುಖ್ಯಮಂತ್ರಿ ಆದದ್ದೇ ಪಟ್ಟಭದ್ರರ ಕಣ್ಣು ಕೆಂಪಾಗಲು ಕಾರಣ’ ಎಂಬ ಸಿದ್ದರಾಮಯ್ಯ ಅವರ ಪೋಸ್ಟ್ಗೆ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ‘ರಾಜಕೀಯವಾಗಿ ಅತಂತ್ರವಾದಾಗ ಆಶ್ರಯ ನೀಡಿದ್ದ ಕಾಂಗ್ರೆಸ್ ಹಿರಿಯರನ್ನೇ ಮೂಲೆಗುಂಪು ಮಾಡಿ ಪಕ್ಷದ ಮೇಲೆ ಹಿಡಿತ ಸಾಧಿಸಿದ್ದ ಸಿದ್ದರಾಮಯ್ಯ, ಈಗ ಮುಖ್ಯಮಂತ್ರಿ ಕುರ್ಚಿ ಬಿಡುವುದಿಲ್ಲ ಎನ್ನುವುದನ್ನು ಹೇಳಲು ಜಾತಿಯ ಅಸ್ತ್ರ ಬಳಸಿರಬಹುದು’ ಎಂದು ಪ್ರತಿಕ್ರಿಯಿಸಿದ್ದರು.

ಕುಮಾರಸ್ವಾಮಿಯವರ ಪ್ರತಿಕ್ರಿಯೆಗೆ ಮಧ್ಯಮ ಪ್ರಕಟಣೆಯ ಮೂಲಕ ಭಾನುವಾರ ತಿರುಗೇಟು ನೀಡಿರುವ ಮುಖ್ಯಮಂತ್ರಿ, ‘ಜಾತ್ಯತೀತ ಜನತಾದಳದ ನಾಯಕರಾದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾಡಿರುವ ಆರೋಪವನ್ನು ತಮಾಷೆಯಾಗಿ ಸ್ವೀಕರಿಸಿದ್ದೇನೆ’ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

‘ಕುಮಾರಸ್ವಾಮಿಯವರು ಮತ್ತು ಅವರ ತಂದೆಯವರಾದ ಎಚ್.ಡಿ. ದೇವೇಗೌಡರು ಖಂಡಿತಾ ಜಾತಿವಾದಿಗಳಲ್ಲ. ಅವರು ಸ್ವಜಾತಿ ವಿರೋಧಿಗಳು. ಅದಕ್ಕಿಂತಲೂ ಮುಖ್ಯವಾಗಿ ಕುಟುಂಬವಾದಿಗಳು. ಅವರಿಗೆ ತಮ್ಮ ಜಾತಿ ಒಂದು ಓಟ್ ಬ್ಯಾಂಕ್ ಅಷ್ಟೆ’ ಎಂದು ಕುಟುಕಿದ್ದಾರೆ.

‘ತಂದೆ ಮತ್ತು ಮಕ್ಕಳು ತಮ್ಮ ಕುಟುಂಬದ ಸ್ವಾರ್ಥಕ್ಕಾಗಿ ರಾಜಕೀಯ ಕ್ಷೇತ್ರದಲ್ಲಿ ಉಳಿದವರನ್ನು ಬಿಟ್ಟುಬಿಡಿ, ಸ್ವಜಾತಿ ನಾಯಕರು ಕೂಡಾ ಬೆಳೆಯದಂತೆ ಒಬ್ಬೊಬ್ಬರನ್ನೇ ಮುಗಿಸುತ್ತಾ ಬಂದವರು. ಹಿಂದೆ, ಇಂದು ಮತ್ತು ಮುಂದೆ ಜಾತ್ಯತೀತ ಜನತಾದಳದ ತುತ್ತತುದಿಯ ನಾಯಕರು ಗೌಡರ ಕುಟುಂಬದವರೇ ಆಗಿರುತ್ತಾರೆ ಎನ್ನುವುದು ಸತ್ಯ’ ಎಂದಿದ್ದಾರೆ.

‘ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಎಚ್.ಡಿ. ದೇವೇಗೌಡರು ಎಷ್ಟು ಮಂದಿ ಒಕ್ಕಲಿಗ ನಾಯಕರನ್ನು ಜೆಡಿ(ಎಸ್) ಪಕ್ಷದಲ್ಲಿ ಬೆಳೆಸಿದ್ದಾರೆ ಎಂದು ವಿನಯಪೂರ್ವಕವಾಗಿ ಕೇಳಬಯಸುವೆ. ಹಾಸನದ ಪುಟ್ಟಸ್ವಾಮಿಗೌಡ, ಸಿ.ಎಸ್. ಪುಟ್ಟೇಗೌಡ, ಜವರೇಗೌಡ, ಕೆ.ಎಂ. ವಿಶ್ವನಾಥ್, ಹನುಮೇಗೌಡ, ಮಂಡ್ಯದ ಕೆ.ಎನ್. ನಾಗೇಗೌಡ, ಕೆ.ಆರ್. ಪೇಟೆ ಕೃಷ್ಣ, ವೈ.ಕೆ. ರಾಮಯ್ಯ, ಸಿ. ಬೈರೇಗೌಡ, ಬಚ್ಚೇಗೌಡ, ಬಿ.ಎಲ್. ಶಂಕರ್, ಸಿ. ನಾರಾಯಣಸ್ವಾಮಿ, ಚಲುವರಾಯಸ್ವಾಮಿ ಮೊದಲಾದವರೆಲ್ಲ ಯಾಕೆ ದೇವೇಗೌಡರನ್ನು ಬಿಟ್ಟು ಹೊರಬಂದರು ಎನ್ನುವುದನ್ನು ನಾನು ವಿವರಿಸಿ ಹೇಳಬೇಕಾಗಿಲ್ಲ’ ಎಂದು ತಿವಿದಿದ್ದಾರೆ.

‘ಒಕ್ಕಲಿಗ ನಾಯಕರನ್ನು ಗುರುತಿಸಿ ರಾಜಕೀಯವಾಗಿ ಬೆಳೆಸಿದ್ದು ಕಾಂಗ್ರೆಸ್ ಪಕ್ಷ ಮಾತ್ರ. ಕೆಂಗಲ್ ಹನುಮಂತಯ್ಯ ಅವರಿಂದ ಹಿಡಿದು ಎಸ್.ಎಂ. ಕೃಷ್ಣವರೆಗೆ ನೂರಾರು ಒಕ್ಕಲಿಗ ನಾಯಕರನ್ನು ಬೆಳೆಸಿದೆ. ದೇವೇಗೌಡರಿಂದ ಮೋಸಕ್ಕೊಳಗಾದ ನಾಯಕರಿಗೆ ಅವಕಾಶ ನೀಡಿ ರಾಜಕೀಯವಾಗಿ ಬೆಳೆಸುತ್ತಿರುವುದು ಕೂಡಾ ಕಾಂಗ್ರೆಸ್ ಪಕ್ಷ. ಕೆಂಗಲ್ ಹನುಮಂತಯ್ಯ, ಕಡಿದಾಳ್ ಮಂಜಪ್ಪ, ಎಸ್.ಎಂ. ಕೃಷ್ಣ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದರೆ, ಅದಕ್ಕೆ ಕಾಂಗ್ರೆಸ್ ಕಾರಣ’ ಎಂದು ಹೇಳಿದ್ದಾರೆ.

‘ಒಕ್ಕಲಿಗ ಸಮುದಾಯಕ್ಕೆ ಸಮರ್ಥ ನಾಯಕತ್ವ ನೀಡಲು ಸಾಧ್ಯ ಇರುವವರು ಈಗಲೂ ಕಾಂಗ್ರೆಸ್ ಪಕ್ಷದಲ್ಲಿಯೇ ಇರುವುದು. ಡಿ.ಕೆ. ಶಿವಕುಮಾರ್, ಟಿ.ಬಿ. ಜಯಚಂದ್ರ, ಕಿಮ್ಮನೆ ರತ್ನಾಕರ್, ಎಂ. ಕೃಷ್ಣಪ್ಪ, ಕೃಷ್ಣ ಬೈರೇಗೌಡ, ಪಿರಿಯಾಪಟ್ಟಣ ವೆಂಕಟೇಶ್, ಹೀಗೆ ನಮ್ಮಲ್ಲಿರುವ ಒಕ್ಕಲಿಗರ ನಾಯಕರ ದೊಡ್ಡ ಪಟ್ಟಿಯೇ ಇದೆ. ಜೆಡಿ(ಎಸ್)ನಲ್ಲಿ ಎಷ್ಟು ಮಂದಿ ಒಕ್ಕಲಿಗ ನಾಯಕರಿದ್ದಾರೆ. ಮುಂದೊಂದು ದಿನ ದೇವೇಗೌಡರ ಕುಟುಂಬವನ್ನು ಹೊರತುಪಡಿಸಿ ಯಾರಾದರೂ ರಾಜ್ಯದ ಮುಖ್ಯಮಂತ್ರಿಗಳಾದರೆ ಅದು ಕಾಂಗ್ರೆಸ್ ಪಕ್ಷದಿಂದಲೇ ಆಗಲಿದೆ’ ಎಂದಿದ್ದಾರೆ.

‘ಕಾಂಗ್ರೆಸ್ ಸಾಮಾಜಿಕ ನ್ಯಾಯದ ಪರವಾಗಿರುವ ಪಕ್ಷ. ಈ ಸೈದ್ಧಾಂತಿಕ ಬದ್ಧತೆಯನ್ನು ಕೇವಲ ಮಾತಿನ ಮೂಲಕ ಮಾತ್ರವಲ್ಲ ಕೃತಿಯ ಮೂಲಕವೂ ಪಕ್ಷ ಮಾಡಿ ತೋರಿಸುತ್ತಾ ಬಂದಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದಿಂದ ಒಕ್ಕಲಿಗರು, ಲಿಂಗಾಯತರು, ಹಿಂದುಳಿದವರು ಮುಖ್ಯಮಂತ್ರಿಗಳಾಗಿದ್ದಾರೆ, ಹಿಂದುಳಿದ ಜಾತಿಗೆ ಸೇರಿದ ನನ್ನನ್ನು ಗುರುತಿಸಿ ಎರಡನೇ ಬಾರಿ ಮುಖ್ಯಮಂತ್ರಿಯಾಗುವ ಅವಕಾಶ ಕಲ್ಪಿಸಿಕೊಟ್ಟಿರುವುದು ಕೂಡಾ ಕಾಂಗ್ರೆಸ್ ಪಕ್ಷ. ಇದಕ್ಕಾಗಿ ನಾನು ಪಕ್ಷದ ನಾಯಕರಾದ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿಯವರಿಗೆ ಆಭಾರಿಯಾಗಿದ್ದೇನೆ’ ಎಂದು ತಿಳಿಸಿದ್ದಾರೆ.

‘ಜಾತಿಯಿಂದ ಮಾತ್ರವಲ್ಲ, ಅರ್ಹತೆಯ ಬಲದಿಂದಲೇ ಮುಖ್ಯಮಂತ್ರಿಯಾಗುವಂತಹ ದಲಿತ ಸಮುದಾಯದ ನಾಯಕರು ಕೂಡಾ ಕಾಂಗ್ರೆಸ್ ಪಕ್ಷದಲ್ಲಿಯೇ ಇರುವುದು. ಮುಂದೊಂದ ದಿನ ದಲಿತ ಸಮುದಾಯದಿಂದ ಯಾರಾದಾರೂ ರಾಜ್ಯದ ಮುಖ್ಯಮಂತ್ರಿಯಾದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎನ್ನುವುದನ್ನು ವಿಶ್ವಾಸಪೂರ್ವಕವಾಗಿ ಹೇಳಬಲ್ಲೆ. ಇಂತಹದ್ದೊಂದು ಆಶಯವನ್ನು ಕೂಡಾ ವ್ಯಕ್ತಪಡಿಸುವ ಸ್ಥಿತಿಯಲ್ಲಿ ರಾಜ್ಯದ ಜೆಡಿಎಸ್ ಇಲ್ಲವೇ ಬಿಜೆಪಿ ಇದೆಯೇ? ಇದು ಕಾಂಗ್ರೆಸ್ ಪಕ್ಷ ಮತ್ತು ಬಿಜೆಪಿ, ಜೆಡಿಎಸ್ ಗಳಿಗೆಇರುವ ವ್ಯತ್ಯಾಸ. ಆದ್ದರಿಂದ, ನನ್ನ ವಿರುದ್ಧ ಜಾತಿ ರಾಜಕೀಯದ ಆರೋಪ ಮಾಡುತ್ತಿರುವವರು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಹಾರೈಸುತ್ತೇನೆ’ ಎಂದಿದ್ದಾರೆ.

‘ಸಾಮಾಜಿಕ ನ್ಯಾಯದ ಬಗ್ಗೆ ನಾನು ಇದೇ ಮೊದಲ ಬಾರಿ ಮಾತನಾಡಿದ್ದಲ್ಲ. ನನ್ನ ನಾಲ್ಕು ದಶಕಗಳ ರಾಜಕೀಯ ಜೀವನವನ್ನು ನೋಡುತ್ತಾ ಬಂದವರಿಗೆ ಇದು ಗೊತ್ತಿರುತ್ತದೆ. ಅಧಿಕಾರ ಇರಲಿ, ಇಲ್ಲದೆ ಇರಲಿ ಸಾಮಾಜಿಕ ನ್ಯಾಯದ ಪರವಾದ ನನ್ನ ನಿಲುವು ಅಚಲ. ನಮ್ಮಲ್ಲಿನ ಜಾತಿ ವ್ಯವಸ್ಥೆ ಬಗ್ಗೆ ನನ್ನನ್ನು ಟೀಕಿಸುತ್ತಿರುವ ರಾಜಕಾರಣಿಗಳಿಗಿಂತ ಹೆಚ್ಚಿನ ಸ್ಪಷ್ಟತೆ ನನಗಿದೆ. ಈ ಬಗ್ಗೆ ನಾನು ಸಾರ್ವಜನಿಕ ಸಂವಾದಕ್ಕೆ ಸಿದ್ಧವಾಗಿದ್ದೇನೆ’ ಎಂದಿದ್ದಾರೆ.

‘ನೀರು ನಿಂತಲ್ಲಿಯೇ ನಿಂತು ಮಡುಗಟ್ಟಿಹೋದರೆ ಕೆಸರಾಗುತ್ತದೆ, ಹರಿಯುತ್ತಿದ್ದರೆ ಅದು ತಿಳಿಯಾಗುತ್ತಾ ಹೋಗುತ್ತದೆ. ಸಾಮಾಜಿಕ ವ್ಯವಸ್ಥೆ ಕೂಡಾ ಹಾಗೆಯೇ ಪಟ್ಟಭದ್ರವಾಗಿ ಉಳಿಯದೆ ಚಲನಶೀಲತೆ ಪಡೆದುಕೊಂಡರೆ ಅದು ಜನಪರವಾಗಿ ಪರಿವರ್ತನೆಯಾಗುತ್ತದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.