ಶನಿವಾರ, 25 ಅಕ್ಟೋಬರ್ 2025
×
ADVERTISEMENT
ADVERTISEMENT

Karnataka Politics: ಮತ್ತಷ್ಟು ಪ್ರಜ್ವಲಿಸಿದ ‘ಉತ್ತರಾಧಿಕಾರಿ’ ಕಿಡಿ

Published : 24 ಅಕ್ಟೋಬರ್ 2025, 23:30 IST
Last Updated : 24 ಅಕ್ಟೋಬರ್ 2025, 23:30 IST
ಫಾಲೋ ಮಾಡಿ
Comments
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉತ್ತರಾಧಿಕಾರಿ ಕುರಿತು ಅವರ ಮಗ ಯತೀಂದ್ರ ಅವರು ಆಡಿದ ಮಾತು ಶುಕ್ರವಾರ ಮತ್ತೆ ಚರ್ಚೆಗೆ ಒಳಗಾಗಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜತೆಗೆ ಗುರುತಿಸಿಕೊಂಡ ಶಾಸಕರು ಯತೀಂದ್ರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸಿದ್ದರಾಮಯ್ಯ ಜತೆಗೆ ಗುರುತಿಸಿಕೊಂಡವರು ‘ಹೇಳಿಕೆಯಲ್ಲಿ ತಪ್ಪಿಲ್ಲ’ ಎನ್ನುತ್ತಲೇ, ‘ಉತ್ತರಾಧಿಕಾರಿ’ಯಾಗಲು ತಾವೂ ಸಿದ್ಧ ಎಂದು ಸುಳಿವು ನೀಡಿದ್ದಾರೆ.
‘ತೆವಲಿನ ಮಾತು’
ತೀಟೆ–ತೆವಲಿಗೆ ಯಾರು–ಯಾರೋ ಮಾತನಾಡಿದ್ದಕ್ಕೆಲ್ಲಾ ತಲೆಕೆಡಿಸಿಕೊಳ್ಳಬೇಕಿಲ್ಲ. ಅವರೇನು ಹೈಕಮಾಂಡಾ? ಸಿದ್ದರಾಮಯ್ಯ ಅವರ ಪುತ್ರನ ಹೇಳಿಕೆ ವೈಯಕ್ತಿಕವಾದದ್ದು, ಅದು ಪಕ್ಷದ ತೀರ್ಮಾನವಲ್ಲ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಿದರೆ, ನನಗೆ ಸಂತೋಷ. ಆದರೆ, ಸಿದ್ದರಾಮಯ್ಯ ಅವರನ್ನು ಬದಲಿಸಿ ಎಂದು ಯಾರಾದರೂ ಕೇಳಿದ್ದಾರಾ?- ಕೆ.ಎಂ.ಉದಯ್‌, ಮದ್ದೂರು ಶಾಸಕ
‘ಮಾತು ಮಿತಿಯಲ್ಲಿರಲಿ’
ಯತೀಂದ್ರ ಅವರ ಮಾತು ಮಿತಿಯಲ್ಲಿ ಇರಬೇಕು, ಜವಾಬ್ದಾರಿಯುತವಾಗಿ ಮಾತನಾಡಬೇಕು. ಏನೇನೋ ಹೇಳಿ, ಪಕ್ಷದಲ್ಲಿ ಗೊಂದಲ ಮೂಡಿಸಬಾರದು. ಪಕ್ಷದಲ್ಲಿ ನಾಯಕರಾಗಬೇಕು ಅಂದರೆ, ಸೇವೆ ಮಾಡುವುದರಲ್ಲಿ ದಾಖಲೆ ಸೃಷ್ಟಿಸಬೇಕು. 2028ರಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆಬರಬೇಕು ಎಂಬುದು ನನ್ನ ಆಸೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಲಿ ಎಂದು ಹೈಕಮಾಂಡ್‌ ಹೇಳಿದರೆ ಅದನ್ನು ನಾವು ಪಾಲಿಸುತ್ತೇವೆ.  -ಡಾ.ಎಚ್.ಡಿ. ರಂಗನಾಥ್‌, ಕುಣಿಗಲ್‌ ಶಾಸಕ
‘ಮಾತಾಡುವಲ್ಲಿ ಮಾತಾಡುವೆ’
ಅಧಿಕಾರ ಹಸ್ತಾಂತರ, ನಾಯಕತ್ವ ಕುರಿತು ನಾನು ಈಗ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ನಮ್ಮ ಪಕ್ಷದಲ್ಲಿ ಶಿಸ್ತಿಗೆ ಆದ್ಯತೆ. ಯತೀಂದ್ರ ಸೇರಿದಂತೆ ಯಾರ ವಿಚಾರವಾದರೂ ಅಷ್ಟೆ. ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಕೆಲವರು ಒತ್ತಾಯಿಸಿದ್ದಾರೆ. ಎಲ್ಲವನ್ನೂ ಗಮನಿಸಿದ್ದೇನೆ. ಈ ವಿಚಾರವಾಗಿ ಯಾರ ಬಳಿ ಮಾತನಾಡಬೇಕೋ ಅವರ ಬಳಿ ಮಾತನಾಡುತ್ತೇನೆ.
-ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ
‘ಸಾಮಾಜಿಕ ನ್ಯಾಯಕ್ಕೆ ಬದ್ಧ’
ಸಮಾಜವಾದ, ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಆಧಾರದಲ್ಲಿ ಸತೀಶ ಜಾರಕಿಹೊಳಿ ಅವರನ್ನು ಸಿದ್ದರಾಮಯ್ಯ ಅವರ ಉತ್ತರಾಧಿಕಾರಿ ಎಂದು ಯತೀಂದ್ರ ಅವರು ಹೇಳಿರಬಹುದು. ಕಾಂಗ್ರೆಸ್‌ನಲ್ಲಿ ನನ್ನನ್ನು ಸೇರಿದಂತೆ ಬಹುತೇಕರು ಬಸವತತ್ವದ ಅನುಯಾಯಿಗಳು, ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿರುವವರು. ಯತೀಂದ್ರ ಅವರು ಬೆಳಗಾವಿಯ ಕಾರ್ಯಕ್ರಮದಲ್ಲಿ ಸಂದರ್ಭಕ್ಕೆ ಅನುಗುಣವಾಗಿ ಈ ಮಾತು ಹೇಳಿದ್ದಾರೆ. ವಿಜಯಪುರಕ್ಕೆ ಬಂದರೆ ನನ್ನ ಕುರಿತೂ ಅದೇ ಮಾತು ಹೇಳಬಹುದು. -ಎಂ.ಬಿ.ಪಾಟೀಲ, ಬೃಹತ್ ಕೈಗಾರಿಕಾ ಸಚಿವ
‘ಯಾರೂ ಅನಿವಾರ್ಯವಲ್ಲ’
ಕಾಂಗ್ರೆಸ್‌ ವ್ಯವಸ್ಥೆಯೊಳಗೆ ಸಿದ್ದರಾಮಯ್ಯ, ಶಿವಕುಮಾರ್‌, ಸತೀಶ ಜಾರಕಿಹೊಳಿ ಯಾರೂ ಅನಿವಾರ್ಯವಲ್ಲ. ಸದ್ಯ ಸಿದ್ದರಾಮಯ್ಯ ಕರ್ನಾಟಕದ ಮುಖ್ಯಮಂತ್ರಿ ಆಗಿದ್ದಾರೆ. ಸತೀಶ ಜಾರಕಿಹೊಳಿ ಭವಿಷ್ಯದ ನಾಯಕ ಎಂಬ ಯತೀಂದ್ರ ಅವರ ಹೇಳಿಕೆ ಬಗ್ಗೆ ಚರ್ಚಿಸುವ ಅಗತ್ಯವಿಲ್ಲ. ಇಂತಹ ವಿಚಾರದಲ್ಲಿ ಬೇರೆಯವರ ಮಾತಿಗೆ ಮಾನ್ಯತೆ ಇಲ್ಲ. -ಡಾ. ಎಚ್‌.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ
‘ಬೇರೆ ಅರ್ಥ ಬೇಕಿಲ್ಲ’
ಯಾವುದೇ ವಿಚಾರ ಇರಲಿ, ಯಾರು ಮಾತನಾಡಬೇಕೋ ಅವರು ಮಾತನಾಡಿದರೆ ಮಾತ್ರ ಅದಕ್ಕೆ ಅರ್ಥವಿರುತ್ತದೆ. ವೇದಿಕೆಯ ಮೇಲೆ ಸತೀಶ ಜಾರಕಿಹೊಳಿ ಕುರಿತು ತಾವು ಸೈದ್ಧಾಂತಿಕವಾಗಿ ಒಂದೇ ಆಲೋಚನೆ ಹೊಂದಿದ್ದೇವೆ ಎಂಬ ಅರ್ಥದಲ್ಲಿ ಯತೀಂದ್ರ ಹೇಳಿದ್ದಾರೆ. ಅದನ್ನು ಬೇರೆಯ ರೀತಿ ಅರ್ಥೈಸುವ ಅಗತ್ಯವಿಲ್ಲ. -ಪ್ರಿಯಾಂಕ್‌ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ
‘ತಿರುಚಿದ ಮಾತು’
ನೀನು ಏನು ಮಾತನಾಡಿದ್ದೆ ಎಂದು ಯತೀಂದ್ರನನ್ನು ಕೇಳಿದೆ. ‘ಸೈದ್ಧಾಂತಿಕವಾಗಿ ಮಾತನಾಡಿದೆ ಅಷ್ಟೆ, ಮುಖ್ಯಮಂತ್ರಿ ಬದಲಾವಣೆ ಬಗ್ಗೆ ತಾನು ಮಾತನಾಡಿಲ್ಲ. ಇಂಥವರೇ ಮುಖ್ಯಮಂತ್ರಿ ಆಗುತ್ತಾರೆ ಎಂದೂ ಹೇಳಿಲ್ಲ’ ಎಂದ. ಅವನ ಮಾತನ್ನು ತಿರುಚಿದರೆ ಏನು ಹೇಳುವುದು?- ಸಿದ್ದರಾಮಯ್ಯ, ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT