ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಗೆರೆ, ಸಾಣೇಹಳ್ಳಿ ಶ್ರೀ ಪೀಠತ್ಯಾಗಕ್ಕೆ ಒತ್ತಾಯ

ಉತ್ತರಾಧಿಕಾರಿ ನೇಮಕಕ್ಕೆ ಸಮುದಾಯದ ಮುಖಂಡರಿಂದ ಶ್ರೀಗಳಿಗೆ ಪತ್ರ
Last Updated 13 ಮೇ 2022, 21:08 IST
ಅಕ್ಷರ ಗಾತ್ರ

ದಾವಣಗೆರೆ: ‘60 ವರ್ಷಕ್ಕೆ ಪೀಠತ್ಯಾಗ ಮಾಡಬೇಕು ಎಂಬುದು ಸಿರಿಗೆರೆ ಮಠದ ಹಿರಿಯ ಗುರುಗಳಾದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಕನಸಾಗಿತ್ತು. ಅದು ನನಸಾಗಬೇಕು. ಈ ಬಗ್ಗೆ ಬೆಂಗಳೂರಿನಲ್ಲಿ ಚರ್ಚಿಸಲಾಗಿದೆ. ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಇಬ್ಬರಿಗೂ ವಯಸ್ಸಾಗಿದೆ. ಪೀಠತ್ಯಾಗ, ಹೊಸಬರ ನೇಮಕಕ್ಕೆ ಅವರ ಮನವೊಲಿಸಲು ಶ್ರೀಗಳನ್ನು ಭೇಟಿ ಮಾಡಲಾಗುವುದು’ ಎಂದು ಸಮಾಜದ ಮುಖಂಡ, ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಈಚೆಗೆ ನಡೆದ ಸಭೆಯಲ್ಲಿ ಕೈಗೊಂಡ ನಿರ್ಧಾರದ ಬಗೆಗೆ ಅವರು ಶುಕ್ರವಾರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು. ಸಭೆ
ಯಲ್ಲಿ ಶಾಮನೂರು ಶಿವಶಂಕರಪ್ಪ ಅವರಷ್ಟೆ ಅಲ್ಲದೆ ಸಚಿವ ಬಿ.ಸಿ. ಪಾಟೀಲ, ಉದ್ಯಮಿ ಅಣಬೇರು ರಾಜಣ್ಣ ಮೊದಲಾದವರು ಹಾಜರಿದ್ದರು.

ಸಿರಿಗೆರೆ ಶ್ರೀಗಳಿಗೆ ಪತ್ರ ಬರೆಯಲಾಗಿದ್ದು, ಖುದ್ದು ಚರ್ಚಿಸಲು ಸಮಯ ಕೇಳಲಾಗಿದೆ ಎಂದರು.

‘ಸಮಾಜದಲ್ಲಿ ಅಶಾಂತಿ ಮೂಡಿದ್ದು, ಶಿಷ್ಯ ಸಮುದಾಯದಲ್ಲಿ ಗೊಂದಲವಿದೆ. ಈ ಗೊಂದಲ ನಿವಾರಿಸಬೇಕು. ಇಲ್ಲವಾದಲ್ಲಿ ಸಮಾಜದ ಮಹತ್ತರ ತೀರ್ಮಾನದ ಜೊತೆಗೆ ಪ್ರತಿಭಟಿಸಲಾಗುವುದು’ ಎಂದು ಸಿರಿಗೆರೆ ಶ್ರೀಗಳಿಗೆ ‘ಸಮಾಜದ ಮುಖಂಡರು’ ಎಂಬ ಒಕ್ಕಣೆ ಇರುವ ಪತ್ರದಲ್ಲಿ ಎಚ್ಚರಿಸಲಾಗಿದೆ. ಈ ಪತ್ರದಲ್ಲಿ ಯಾರ ಹೆಸರುಗಳ ಉಲ್ಲೇಖವೂ ಇಲ್ಲ.

‘ಪೀಠಕ್ಕೆ ಶಿಷ್ಯರು ಅನಿವಾರ್ಯವೇ ಹೊರತು ಪೀಠಾಧಿಪತಿಗಳಲ್ಲ. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ತರಳಬಾಳು ಪೀಠಕ್ಕೆ ಸಂವಿಧಾನ ಹಾಕಿಕೊಟ್ಟಿದ್ದಾರೆ. ಇದಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳುವುದು ಕರ್ತವ್ಯ. ಹಿರಿಯ ಜಗದ್ಗುರುಗಳು ಹಾಕಿಕೊಟ್ಟ ಬುನಾದಿ, ಸಂಪ್ರದಾಯಗಳನ್ನು ಗಾಳಿಗೆ ತೂರಿ ಮನಬಂದಂತೆ ನಡೆದುಕೊಳ್ಳುತ್ತಿದ್ದೀರಿ. ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದ ಭಕ್ತರು ಒತ್ತಡ ಹಾಕಿದ್ದರಿಂದ ಸಭೆ ಕರೆಯಲಾಗಿತ್ತು’ ಎಂದು ಪತ್ರದಲ್ಲಿ ತಿಳಿಸಲಾಗಿದೆ.

‘ಸಮಾಜದಲ್ಲಿ ವಿವಾದಕ್ಕೆ ಒಳಗಾಗಿ, ಭಕ್ತರ ಚಿಂತನೆಗೀಡು ಮಾಡಿರುವ ಏಕವ್ಯಕ್ತಿ ಡೀಡ್ ಅನ್ನು ರದ್ದುಗೊಳಿಸಿ ಶಿವಕುಮಾರ ಸ್ವಾಮೀಜಿಗಳ ಬೈಲಾವನ್ನು ಯಥಾವತ್ತಾಗಿ ಜಾರಿಗೆ ತರಬೇಕು. ಹಿರಿಯ ಸ್ವಾಮೀಜಿ ಕಾಲದಲ್ಲಿ ಸಿರಿಗೆರೆ ನಾಡು ಕಂಡ ಅದ್ಭುತ ಮಠವಾಗಿತ್ತು. ಸಾಹಿತ್ಯ, ಸಾಂಸ್ಕೃತಿಕ, ಆರ್ಥಿಕ ಹಾಗೂ ಧಾರ್ಮಿಕವಾಗಿ ಛಾಪು ಮೂಡಿಸಿತ್ತು. ಆದರೆ ಇವೆಲ್ಲಾ ಕಣ್ಮರೆಯಾಗಿದೆ. ಉದಾಸೀನ ಮಾಡದೇ ಶಿಷ್ಯರ ಮೇಲೆ ಕೋಪ, ತಾಪ, ಆಕ್ರೋಶ ವ್ಯಕ್ತಪಡಿಸದೇ ಶಿಷ್ಯರು ಸಮಾಜದ ಆಸ್ತಿ ಎಂದು ಪರಿಗಣಿಸಿ ಶಿಷ್ಯರ ಮನೋಭಿಲಾಷೆಯಂತೆ ನಡೆದುಕೊಳ್ಳಿರಿ’ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆಗೆ ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನಿರಾಕರಿಸಿದರು. ಸಿರಿಗೆರೆ ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಂಪರ್ಕಕ್ಕೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT