ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ದಮ್ಮಯ್ಯ ಎಂದರೂ ಬಿಡಲಿಲ್ಲ’: ಪ್ರಜ್ವಲ್ ರೇವಣ್ಣ ವಿರುದ್ಧ ದೋಷಾರೋಪ ಪತ್ರ ಸಲ್ಲಿಕೆ

Published : 9 ಸೆಪ್ಟೆಂಬರ್ 2024, 19:30 IST
Last Updated : 9 ಸೆಪ್ಟೆಂಬರ್ 2024, 19:30 IST
ಫಾಲೋ ಮಾಡಿ
Comments

ಬೆಂಗಳೂರು: ‘ಬಾಗಿಲ ಚಿಲಕ ತೆಗಿಯಣ್ಣ, ನನಗೆ ಭಯ ಆಗ್ತಿದೆ, ಹೊರಗೆ ಹೋಗ್ತೀನಿ, ನಿನ್ನ ದಮ್ಮಯ್ಯ ಬಾಗಿಲು ತೆಗಿ ಎಂದರೂ ಕೇಳದೆ ನನ್ನ ಮೈಮೇಲಿನ ಬಟ್ಟೆಗಳನ್ನೆಲ್ಲಾ ತೆಗೆಸಿ, ನನ್ನನ್ನು ಬೆತ್ತಲೆಗೊಳಿಸಿ ಬಲವಂತವಾಗಿ ಬೆಡ್‌ ಮೇಲೆ ಮಲಗಿಸಿ, ನನ್ನ ಮೇಲೆ ನಿಯಂತ್ರಣ ಸಾಧಿಸಿ ಅತ್ಯಾಚಾರ ಮಾಡಿದರು...

ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಅತ್ಯಾಚಾರಕ್ಕೆ ಒಳಗಾದ ಮಹಿಳೆ (ಅಪಹರಣಕ್ಕೂ ಒಳಗಾಗಿದ್ದರು ಎನ್ನಲಾದ ಸಂತ್ರಸ್ತೆ) ವಿವರಿಸಿರುವ ಇಂತಹ ಹಲವಾರು ವಿವರಣೆಗಳನ್ನು ಒಳಗೊಂಡ 1,632 ಪುಟಗಳ ದೋಷಾರೋಪ ಪತ್ರವನ್ನು ತನಿಖಾಧಿಕಾರಿ ಎನ್.ಶೋಭಾ ಅವರು ಸೋಮವಾರ, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ.ಎಂ.ಶಿವಕುಮಾರ್ ಅವರಿಗೆ ಸಲ್ಲಿಸಿದರು.

ಆರೋಪ ಪಟ್ಟಿಯಲ್ಲಿ ಏನಿದೆ?: ‘ಪ್ರಜ್ವಲ್‌ ಒಂದು ಕೈಯ್ಯಲ್ಲಿ ಮೊಬೈಲ್‌ ಹಿಡಿದುಕೊಂಡು ಮತ್ತೊಂದು ಕೈಯ್ಯಲ್ಲಿ ಲೈಂಗಿಕ ಕೃತ್ಯ ಎಸಗಿದರು’ ಎಂದು ಸಂತ್ರಸ್ತೆಯು ವಿವರಿಸಿದ್ದಾರೆ.

‘ಬೇಡ ಎಂದರೂ ಕೇಳದೆ ಏನೂ ಆಗೋಲ್ಲ ಎಂದರು. ಮನೆ ಸ್ವಚ್ಛಪಡಿಸುವ ನೆಪದಲ್ಲಿ ಆಗಾಗ್ಗೆ ಕರೆಸಿಕೊಂಡು ಅವರ ತಂದೆ ತಾಯಿ ಇಲ್ಲದ ಸಮಯದಲ್ಲಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದರು’ ಎಂದು ಸಂತ್ರಸ್ತೆಯು ವಿವರಿಸಿದ್ದಾರೆ.

‘ಆರೋಪಿಯು ಸಂಸದರಾಗಿದ್ದು, ತಮ್ಮ ಮನೆಯಲ್ಲಿ ಕೆಲಸ ಮಾಡುವ ಕೆಲಸದಾಕೆ ಮೇಲೆ ಅತ್ಯಾಚಾರ ಎಸಗಿ ಜೀವ ಬೆದರಿಕೆ ಹಾಕುವ ಮೂಲಕ ಭಾರತೀಯ ದಂಡ ಸಂಹಿತೆ–1860ರ (ಐಪಿಸಿ) ಕಲಂ 376 (2) (ಕೆ), 376 (2) (ಎನ್‌), 354 (ಎ), 354 (ಬಿ), 354 (ಸಿ) ಮತ್ತು 506 ರೀತ್ಯಾ ಅಪರಾಧ ಎಸಗಿರುತ್ತಾರೆ’ ಎಂದು ವಿವರಿಸಲಾಗಿದೆ.

‘ಸಂತ್ರಸ್ತೆಯು ತನ್ನ ಮೇಲೆ ನಡೆದ ಅಪರಾಧ ಕುರಿತು ಇನ್ಯಾರಿಗೂ ಬಹಿರಂಗಪಡಿಸದಂತೆ ಮತ್ತು ಪುನಃ ಇಂತಹುದೇ ಕೃತ್ಯಕ್ಕೆ ಸಹಕರಿಸುವಂತೆ ಒತ್ತಾಯಿಸಲು ಅತ್ಯಾಚಾರದ ಕ್ರಿಯೆಯನ್ನು ತನ್ನ ಮೊಬೈಲ್‌ ಫೋನಿನಲ್ಲಿ ಉದ್ದೇಶಪೂರ್ವಕವಾಗಿ ಚಿತ್ರೀಕರಿಸಿಕೊಂಡಿದ್ದೇ, ನಂತರ ವಿಡಿಯೊ ಬಹಿರಂಗಗೊಳ್ಳಲು ಕಾರಣವಾಗಿದ್ದು, ಮಾಹಿತಿ ತಂತ್ರಜ್ಞಾನ ಕಾಯ್ದೆ-2000ರ ಕಲಂ 66 (ಇ) ರೀತ್ಯಾ ಅಪರಾಧ ಎಸಗಿರುತ್ತಾರೆ’ ಎಂದು ವಿವರಿಸಲಾಗಿದೆ.

‘ಆರೋಪಿಯು ವಿಚಾರಣೆಯಿಂದ ತಪ್ಪಿಸಿಕೊಳ್ಳುವ ದುರುದ್ದೇಶದಿಂದ ಅತ್ಯಾಚಾರವನ್ನು ತನ್ನ ಮೊಬೈಲ್ ಫೋನಿನಲ್ಲಿ ಚಿತ್ರೀಕರಿಸಿಕೊಂಡಿದ್ದರು. ಪ್ರಕರಣದ ಪ್ರಮುಖ ಸಾಕ್ಷ್ಯ ಎನಿಸಿದ ಮೊಬೈಲ್‌ ಫೋನನ್ನು ನಾಶಪಡಿಸಿ ಐಪಿಸಿ ಕಲಂ 201ರ ಅನುಸಾರ ಅಪರಾಧ ಎಸಗಿರುತ್ತಾರೆ. ಸಂತ್ರಸ್ತೆಯ ಹೇಳಿಕೆ, ಸಾಂದರ್ಭಿಕ ಸಾಕ್ಷಿ ಮತ್ತು ಕೃತ್ಯದ ವಿಡಿಯೊ, ಎಫ್‌ಎಸ್ಎಲ್‌ (ವಿಧಿ ವಿಜ್ಞಾನ ಪ್ರಯೋಗಾಲಯ) ವರದಿಗಳು ಹಾಗೂ ತಾಂತ್ರಿಕ ಸಾಕ್ಷ್ಯಾಧಾರಗಳಿಂದ ಆರೋಪಿಯು ಅಪರಾಧ ಎಸಗಿರುವುದು ದೃಢಪಟ್ಟಿರುತ್ತದೆ’ ಎಂದು ತಿಳಿಸಲಾಗಿದೆ.

‘ಈ ಪ್ರಕರಣದಲ್ಲಿ ಇನ್ನೂ ಕೆಲವು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಗುತ್ತಿದೆ. ಆರೋಪಿಯು ನ್ಯಾಯಾಂಗ ಬಂಧನದಲ್ಲಿದ್ದು, 90 ದಿನಗಳು ಗತಿಸುತ್ತಾ ಬಂದ ಕಾರಣ ಲಭ್ಯ ಸಾಕ್ಷ್ಯಾಧಾರಗಳ ಆಧಾರದಲ್ಲಿ ಈ ದೋಷಾರೋಪ ಪಟ್ಟಿ ಸಲ್ಲಿಸಲಾಗುತ್ತಿದೆ. ವೈದ್ಯಕೀಯ ತಪಾಸಣೆಯ ಸಮಯದಲ್ಲಿ ಕಂಡುಬಂದ ಅಂಶಗಳನ್ನು ಎಫ್‌ಎಸ್‌ಎಲ್‌ ತಂಡದವರು ತೆಗೆದಿದ್ದ ಫೋಟೊಗಳಲ್ಲಿ ವೈದ್ಯರ ತಂಡ ಗುರುತಿಸಿ ಕೊಟ್ಟಿರುವ ಫೋಟೊಗಳ ಜೊತೆಗೆ ಹೋಲಿಕೆ ಮತ್ತು ವಿಶ್ಲೇಷಣೆಗಾಗಿ ಎಫ್‌ಎಸ್‌ಎಲ್‌ಗೆ ಕಳುಹಿಸಿಕೊಡಲಾಗಿದ್ದು ವರದಿ ಪಡೆಯಬೇಕಾಗಿದೆ’ ಎಂದು ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT