ಬೆಂಗಳೂರು: ಪೆನ್‌ಡ್ರೈವ್ ವಿಡಿಯೊ ಪ್ರಕರಣಕ್ಕೆ ಹೊಸ ತಿರುವು ಪಡೆದಿದ್ದು, ‘ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ್ದ’ ಆರೋಪದಡಿ ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ, ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಹೊಸದಾಗಿ ಅತ್ಯಾಚಾರ (ಐಪಿಸಿ 376) ಪ್ರಕರಣ ದಾಖಲಾಗಿದೆ.
ಮನೆ ಕೆಲಸದ ಮಹಿಳೆ ಹಾಗೂ ಅವರ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದಡಿ ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಹಾಗೂ ಪ್ರಜ್ವಲ್ ವಿರುದ್ಧ ಹೊಳೆನರಸೀಪುರ ಟೌನ್ ಠಾಣೆಯಲ್ಲಿ ಏಪ್ರಿಲ್ 28ರಂದು ಎಫ್‌ಐಆರ್ ದಾಖಲಾಗಿತ್ತು. ಹಾಸನದ ಸಂತ್ರಸ್ತೆಯೊಬ್ಬರು ಪ್ರತ್ಯೇಕ ದೂರು ನೀಡಿದ್ದಾರೆ. ತಮ್ಮ ಮೇಲೆ ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಗಿರುವುದಾಗಿ ಆರೋಪಿಸಿದ್ದು, ಎಸ್‌ಐಟಿ ಅಧಿಕಾರಿಗಳು ಚಾಲ್ತಿಯಲ್ಲಿರುವ ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 376 ಸೇರ್ಪಡೆ ಮಾಡಿಕೊಂಡು ತನಿಖೆ ಮುಂದುವರಿಸಿದ್ದಾರೆ.
‘ಮೊದಲ ಪ್ರಕರಣದಲ್ಲಿ ರೇವಣ್ಣ ಹಾಗೂ ಪ್ರಜ್ವಲ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪವಿತ್ತು. ಇದೀಗ, ಪ್ರಜ್ವಲ್ ವಿರುದ್ಧ ಮಾತ್ರ ಅತ್ಯಾಚಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.
ಈ ಬೆಳವಣಿಗೆಗಳ ಮಧ್ಯೆಯೇ, ಬಂಧನದ ಭೀತಿಯಲ್ಲಿರುವ ಶಾಸಕ ರೇವಣ್ಣ, ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಜರ್ಮನಿಯಲ್ಲಿ ಇದ್ದಾರೆ ಎನ್ನಲಾಗಿದ್ದ ಪ್ರಜ್ವಲ್, ದುಬೈಗೆ ಸ್ಥಳಾಂತರ ಗೊಂಡಿದ್ದು, ಅವರ ಪತ್ತೆಗೆ ಎಸ್ಐಟಿ ಬಲೆ ಬೀಸಿದೆ.
ಪ್ರಜ್ವಲ್‌ಗೆ ಲುಕ್‌ಔಟ್ ನೋಟಿಸ್
ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣ ಪತ್ತೆಗಾಗಿ ಎಸ್‌ಐಟಿ ಅಧಿಕಾರಿಗಳು ಲುಕ್‌ಔಟ್ ಸುತ್ತೋಲೆ (ಎಲ್‌ಒಸಿ) ಹೊರಡಿಸಿದ್ದಾರೆ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳ ಅಧಿಕಾರಿಗಳು, ವಲಸೆ ಅಧಿಕಾರಿಗಳು ಹಾಗೂ ತನಿಖಾ ಸಂಸ್ಥೆಗಳ ಮುಖ್ಯಸ್ಥರಿಗೆ, ಪ್ರಜ್ವಲ್ ಫೋಟೊ ಸಮೇತ ಮಾಹಿತಿ ನೀಡಿದ್ದಾರೆ. ವಿಮಾನ ನಿಲ್ದಾಣ ಹಾಗೂ ಇತರೆಡೆ ಪ್ರಜ್ವಲ್ ಪತ್ತೆಯಾದರೆ, ತನಿಖಾ ಸಂಸ್ಥೆಗಳು ವಶಕ್ಕೆ ಪಡೆಯುವ ಸಾಧ್ಯತೆ ಇದೆ.
‘ಅತ್ಯಾಚಾರ’ ಪ್ರಕರಣ ದಾಖಲಾಗುತ್ತಿದ್ದಂತೆಯೇ, ಬಂಧನ ಭೀತಿಯಲ್ಲಿರುವ ರೇವಣ್ಣ, ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ವಿಚಾರಣೆ ನಡೆಸಿದ್ದ ನ್ಯಾಯಾಲಯ, ಎಸ್‌ಐಟಿ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ.
ಏನಿದು ಲುಕ್‌ಔಟ್ ಸುತ್ತೋಲೆ?
ಕ್ರಿಮಿನಲ್ ಅಥವಾ ದಂಡದ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿರುವ ಹಾಗೂ ದೇಶ ತೊರೆದ ಆರೋಪಿಗಳನ್ನು ಪತ್ತೆ ಮಾಡಲು ಲುಕ್‌ಔಟ್ ಸುತ್ತೋಲೆ (ಎಲ್‌ಒಸಿ) ಹೊರಡಿಸಲು ಅವಕಾಶವಿದೆ.
ವ್ಯಕ್ತಿಯ ಸಂಚಾರವನ್ನು ನಿರ್ಬಂಧಿಸಲು ಹಾಗೂ ನಿಯಂತ್ರಿಸಲು ವಲಸೆ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸುವ ಸುತ್ತೋಲೆ ಇದಾಗಿದೆ. ಆರೋಪಿಯ ಫೋಟೊ ಹಾಗೂ ವೈಯಕ್ತಿಕ ಮಾಹಿತಿಯನ್ನು ಒಳಗೊಂಡ ಸುತ್ತೋಲೆಯನ್ನು ಎಲ್ಲರಿಗೂ ಕಳುಹಿಸಲಾಗುತ್ತದೆ. ವಿಮಾನ ನಿಲ್ದಾಣ ಹಾಗೂ ಇತರೆಡೆ ಅಂಟಿಸಲಾಗುತ್ತದೆ. ಆರೋಪಿ ಪತ್ತೆಯಾದರೆ ವಶಕ್ಕೆ ಪಡೆದು ಸಂಬಂಧಪಟ್ಟವರ ಸುಪರ್ದಿಗೆ ನೀಡಲು ಅಧಿಕಾರಿಗಳಿಗೆ ಅವಕಾಶವಿದೆ.
ನ್ಯಾಯಾಧೀಶರ ಎದುರು ಸಂತ್ರಸ್ತೆ ಹೇಳಿಕೆ
‘ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದ ವಿಡಿಯೊಗಳನ್ನು ಆಧರಿಸಿ ತನಿಖೆ ನಡೆಸಿದ್ದ ಎಸ್‌ಐಟಿ ಅಧಿಕಾರಿಗಳು, ವಿಡಿಯೊದಲ್ಲಿದ್ದ ಕೆಲ ಮಹಿಳೆಯರನ್ನು ಸಂಪರ್ಕಿಸಿ ದೂರು ನೀಡುವಂತೆ ಕೋರಿದ್ದರು. ಈ ಪೈಕಿ ಮಹಿಳೆಯೊಬ್ಬರು, ಎಸ್‌ಐಟಿ ಅಧಿಕಾರಿಗಳಿಗೆ ಹೇಳಿಕೆ ನೀಡಿದ್ದಾರೆ. ಅದೇ ಹೇಳಿಕೆ ಆಧರಿಸಿ ಹೊಸ ಸೆಕ್ಷನ್ ಸೇರ್ಪಡೆ ಮಾಡಿಕೊಳ್ಳಲಾಗಿದೆ’ ಎಂದು ಮೂಲಗಳು ಹೇಳಿವೆ.
‘ಪ್ರಜ್ವಲ್ ರೇವಣ್ಣ ಹಲವು ಆಮಿಷವೊಡ್ಡಿ ಅತ್ಯಾಚಾರ ಎಸಗಿರುವ ಬಗ್ಗೆ ಸಂತ್ರಸ್ತೆ ಮಾಹಿತಿ ನೀಡಿದ್ದಾರೆ. ಸಂತ್ರಸ್ತೆಯ ವೈಯಕ್ತಿಕ ಮಾಹಿತಿಯನ್ನು ಗೌಪ್ಯವಾಗಿರಿಸಲಾಗಿದೆ. ಅವರನ್ನು ನ್ಯಾಯಾಧೀಶರ ಎದುರು ಕರೆದೊಯ್ದು ಸಿಆರ್‌ಪಿಸಿ 164 ಅಡಿ ಹೇಳಿಕೆ ಸಹ ದಾಖಲಿಸಲಾಗಿದೆ. ಈ ಹೇಳಿಕೆಯು ಪ್ರಕರಣದಲ್ಲಿ ಮಹತ್ವದ ಪುರಾವೆ ಆಗಿದೆ’ ಎಂದೂ ಮೂಲಗಳು ತಿಳಿಸಿವೆ.
ಪೆನ್‌ಡ್ರೈವ್ ಸಿದ್ಧಪಡಿಸಿದ್ದ ಚಾಲಕನ ವಿರುದ್ಧ ಎಫ್‌ಐಆರ್
‘ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಪಟ್ಟ ವಿಡಿಯೊಗಳನ್ನು ಸೃಷ್ಟಿಸಿ ಪೆನ್‌ಡ್ರೈವ್ ಸಿದ್ಧಪಡಿಸಿದ್ದ ಆರೋಪದಡಿ, ಮಾಜಿ ಚಾಲಕ ಕಾರ್ತಿಕ್ ವಿರುದ್ಧ ಹಾಸನದ ಸೆನ್ (ಸೈಬರ್, ಆರ್ಥಿಕ ಹಾಗೂ ಮಾದಕ ದ್ರವ್ಯ ನಿಯಂತ್ರಣ) ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
‘ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್–ಬಿಜೆಪಿ ಪಕ್ಷದ ಮೈತ್ರಿ ಅಭ್ಯರ್ಥಿಯ ಚುನಾವಣೆ ಏಜೆಂಟ್ ಆಗಿರುವ ಎಂ.ಜಿ.ಪೂರ್ಣಚಂದ್ರ ತೇಜಸ್ವಿ ಅವರು ದೂರು ನೀಡಿದ್ದಾರೆ. ಹೊಳೆನರಸೀಪುರ ತಾಲ್ಲೂಕಿನ ಕಡವಿನ ಕೋಟೆಯ ಕಾರ್ತಿಕ್, ಪುಟ್ಟರಾಜು, ಕ್ವಾಲಿಟಿ ಬಾರ್ ಶರತ್, ನವೀನ್ ಗೌಡ ಹಾಗೂ ಚೇತನ್ ಗೌಡ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಆರೋಪಿಗಳು, ಕಾಂಗ್ರೆಸ್ ಅಭ್ಯರ್ಥಿ ಹಾಗೂ ಕಾರ್ಯಕರ್ತರ ಜೊತೆ ಸೇರಿಕೊಂಡು ಸಂಚು ರೂಪಿಸಿದ್ದರು. ಅದರಂತೆ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಪಟ್ಟ ಭಾವಚಿತ್ರ ಹಾಗೂ ವಿಡಿಯೊಗಳನ್ನು ಅಶ್ಲೀಲವಾಗಿ ಚಿತ್ರೀಕರಿಸಿ ಮಾರ್ಪಿಂಗ್ ಮಾಡಿ ಪೆನ್‌ಡ್ರೈವ್‌ನಲ್ಲಿ ಸಂಗ್ರಹಿಸಿದ್ದಾರೆ. ಇದೇ ಫೋಟೊ ಹಾಗೂ ವಿಡಿಯೊಗಳನ್ನು ಹಲವಡೆ ಹಂಚಿಕೆ ಮಾಡಿರುವುದಾಗಿ ದೂರುದಾರರು ಆರೋಪಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
‘ಜೆಡಿಎಸ್–ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಹೆಸರು ಕೆಡಿಸಲು ಹಾಗೂ ಮತದಾರರು ಮತದಾನ ಮಾಡದಂತೆ ತಪ್ಪಿಸುವ ಉದ್ದೇಶದಿಂದ ಆರೋಪಿಗಳು ಕೃತ್ಯ ಎಸಗಿರುವುದಾಗಿ ದೂರುದಾರರು ತಿಳಿಸಿದ್ದಾರೆ’ ಎಂದು ಮೂಲಗಳು ಹೇಳಿವೆ.
ಪ್ರಕರಣ ಹಸ್ತಾಂತರಕ್ಕೆ ಪ್ರಕ್ರಿಯೆ: ಲೈಂಗಿಕ ದೌರ್ಜನ್ಯ ಆರೋಪದಡಿ ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಹಾಗೂ ಪ್ರಜ್ವಲ್ ವಿರುದ್ಧ ಹೊಳೆನರಸೀಪುರ ಟೌನ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ತನಿಖೆಯನ್ನು ಎಸ್‌ಐಟಿ ನಡೆಸುತ್ತಿದೆ.
ಇದೀಗ, ಚಾಲಕ ಕಾರ್ತಿಕ್ ಹಾಗೂ ಇತರರ ಮೇಲೆ ದಾಖಲಾಗಿರುವ ಪ್ರಕರಣವೂ ಸದ್ಯದಲ್ಲೇ ಎಸ್‌ಐಟಿಗೆ ಹಸ್ತಾಂತರವಾಗುವ ಸಾಧ್ಯತೆ ಇದೆ. ಇದಕ್ಕೆ ಸಂಬಂಧಪಟ್ಟಂತೆ ಕಾನೂನು ಪ್ರಕ್ರಿಯೆ ನಡೆಯುತ್ತಿರುವುದಾಗಿ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.