ಬೆಂಗಳೂರು: ಅತ್ಯಾಚಾರ, ಜಾತಿ ನಿಂದನೆ ಮತ್ತು ಕೊಲೆ ಬೆದರಿಕೆ ಪ್ರಕರಣ ದಲ್ಲಿ ಸಿಐಡಿಯ ವಿಶೇಷ ತನಿಖಾ ದಳದ (ಎಸ್‌ಐಟಿ) ಕಸ್ಟಡಿ ಯಲ್ಲಿರುವ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಅವರ ಮನೆ, ಕಚೇರಿ ಸೇರಿದಂತೆ 15 ಸ್ಥಳಗಳ ಮೇಲೆ ತನಿಖಾಧಿ ಕಾರಿಗಳು ಶನಿವಾರ ಬೆಳಿಗ್ಗೆ ದಾಳಿ ನಡೆಸಿ, ಶೋಧಿಸಿದರು.
ಪ್ರಕರಣದ ತನಿಖಾಧಿಕಾರಿ ಕವಿತಾ ನೇತೃತ್ವದ ತಂಡವು ಶೋಧ ನಡೆಸಿ, ಕೆಲವು ದಾಖಲೆಗಳನ್ನು ಜಪ್ತಿ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ವೈಯಾಲಿಕಾವಲ್‌ನಲ್ಲಿರುವ ಮುನಿರತ್ನ ನಿವಾಸದಲ್ಲಿ ತನಿಖಾಧಿ ಕಾರಿಗಳು ಎರಡು ತಾಸು ಪರಿಶೀಲನೆ ನಡೆಸಿದರು. ವಿಧಿ ವಿಜ್ಞಾನ ಪ್ರಯೋಗಾ ಲಯದ (ಎಫ್‌ಎಸ್ಎಲ್) ತಜ್ಞರು ಕೆಲವು ಸಾಕ್ಷ್ಯಾಧಾರಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ ಎಂದು ಗೊತ್ತಾಗಿದೆ.
ವಿಚಾರಣೆ ಮುಂದುವರಿಕೆ: ‘ಸಿಐಡಿ ಕಚೇರಿಯಲ್ಲಿ ಮುನಿರತ್ನ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ. ಸಿಐಡಿ (ಆರ್ಥಿಕ ಅಪರಾಧಗಳು) ಎಡಿಜಿಪಿ ಬಿ.ಕೆ.ಸಿಂಗ್ ನೇತೃತ್ವದ ಎಸ್‌ಐಟಿ ತಂಡವು ಹೇಳಿಕೆ ದಾಖಲಿಸಿಕೊಳ್ಳಲಾಗುತ್ತಿದೆ. ಮುನಿರತ್ನ ವಿಚಾರಣೆಗೆ ಸಹಕಾರ ನೀಡು ತ್ತಿಲ್ಲ’ ಎಂದು ಮೂಲಗಳು ತಿಳಿಸಿವೆ.