ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರದಿಂದ ವಿಜಯನಗರ ಹೆಬ್ಬಾಗಿಲು ಹೊರಕ್ಕೆ

ನೂತನ ಜಿಲ್ಲಾ ವ್ಯಾಪ್ತಿಗೆ ಆರು ತಾಲ್ಲೂಕು ಕೇಂದ್ರ ಸೇರಿಸಲು ಸಚಿವ ಸಂಪುಟ ನಿರ್ಧಾರ
Last Updated 27 ನವೆಂಬರ್ 2020, 7:58 IST
ಅಕ್ಷರ ಗಾತ್ರ
ADVERTISEMENT
""

ಹೊಸಪೇಟೆ: ಆರು ತಾಲ್ಲೂಕು ಕೇಂದ್ರಗಳನ್ನು ಒಳಗೊಂಡ ವಿಜಯನಗರ ಜಿಲ್ಲೆ ರಚನೆಗೆ ರಾಜ್ಯ ಸಚಿವ ಸಂಪುಟ ಶುಕ್ರವಾರ ಒಪ್ಪಿಗೆ ಸೂಚಿಸಿದೆ.

ಹೊಸಪೇಟೆ ಜಿಲ್ಲಾ ಕೇಂದ್ರವಾಗಿ ಅಸ್ತಿತ್ವಕ್ಕೆ ಬರಲಿರುವ ವಿಜಯನಗರ ಜಿಲ್ಲೆಯ ವ್ಯಾಪ್ತಿಗೆ ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಹರಪನಹಳ್ಳಿ, ಕೊಟ್ಟೂರು, ಕೂಡ್ಲಿಗಿ ತಾಲ್ಲೂಕುಗಳು ಸೇರಲಿವೆ. ಇನ್ನು ಬಳ್ಳಾರಿ ಜಿಲ್ಲಾ ಕೇಂದ್ರದಲ್ಲಿ ಬಳ್ಳಾರಿ, ಸಿರುಗುಪ್ಪ, ಕುರುಗೋಡು, ಕಂಪ್ಲಿ ಹಾಗೂ ಸಂಡೂರು ಇರಲಿವೆ.

ಆದರೆ, ವಿಜಯನಗರ ಸಾಮ್ರಾಜ್ಯದ ಹೆಬ್ಬಾಗಿಲು ಎಂದೇ ಕರೆಯಲಾಗುವ ಕಂಪ್ಲಿ ತಾಲ್ಲೂಕು ಅನ್ನು ನೂತನ ಜಿಲ್ಲೆಯಿಂದ ಹೊರಗಿಟ್ಟಿರುವುದಕ್ಕೆ ಅಪಸ್ವರ ಕೇಳಿ ಬಂದಿದೆ.

ಚಾರಿತ್ರಿಕ ಮತ್ತು ಭೌಗೋಳಿಕ ಕಾರಣಗಳಿಂದಾಗಿ ಕಂಪ್ಲಿ ತಾಲ್ಲೂಕು ಹೊಸಪೇಟೆ ಜೊತೆ ಬೆಸೆದುಕೊಂಡಿದೆ. ವಿಜಯನಗರ ಸಾಮ್ರಾಜ್ಯಕ್ಕೆ ಮುನ್ನುಡಿ ಬರೆದದ್ದೇ ಕಂಪ್ಲಿಯ ಕಂಪೀಲರಾಯ ದೊರೆ. ಆತನಿಂದಲೇ ಕಂಪ್ಲಿ ಹೆಸರು ಬಂದದ್ದು. ಭೌಗೋಳಿಕವಾಗಿ ಕಂಪ್ಲಿ ಜಿಲ್ಲಾ ಕೇಂದ್ರ ಹೊಸಪೇಟೆಗೆ ಹತ್ತಿರವಿದೆ. ಎರಡೂ ಪಟ್ಟಣಗಳ ನಡುವೆ 32 ಕಿ.ಮೀ ಅಂತರವಿದೆ. ಬಳ್ಳಾರಿ–ಕಂಪ್ಲಿ ನಡುವಿನ ದೂರ 51 ಕಿ.ಮೀ ದೂರವಿದೆ. ಈ ಕಾರಣಕ್ಕಾಗಿಯೇ ಕಂಪ್ಲಿಯ ಮುಖಂಡರು ಆರಂಭದಿಂದಲೂ ತಮ್ಮ ತಾಲ್ಲೂಕು ನೂತನ ವಿಜಯನಗರ ಜಿಲ್ಲೆಗೆ ಸೇರಿಸಬೇಕೆಂದು ಹಕ್ಕೊತ್ತಾಯ ಮಂಡಿಸುತ್ತಿದ್ದಾರೆ.

‘ವಿಜಯನಗರದಲ್ಲಿ ಹಿಂದೂ ಸಾಮ್ರಾಜ್ಯ ಸ್ಥಾಪನೆಯಾಗಬೇಕೆಂದು ಕನಸು ಕಂಡು, ಅದಕ್ಕಾಗಿ ಮೊದಲು ಶ್ರಮಿಸಿದವರು ಕಂಪೀಲರಾಯ ದೊರೆ. ನಂತರ ಆ ಹೋರಾಟ ಆನೆಗೊಂದಿ, ಹಂಪಿಗೆ ಸ್ಥಳಾಂತರಗೊಂಡಿತು. ಹೊಸಪೇಟೆ, ಹಂಪಿ, ಆನೆಗೊಂದಿ, ಕಮಲಾಪುರ ಹಾಗೂ ಕಂಪ್ಲಿ ವಿಜಯನಗರದ ಭಾಗಗಳು. ಆನೆಗೊಂದಿ ತುಂಗಭದ್ರಾ ನದಿಯಾಚೆಗಿರುವ ಕಾರಣಕ್ಕೆ ಕೊಪ್ಪಳ ಜಿಲ್ಲೆಗೆ ಸೇರಿಸಲಾಗಿದೆ. ಆದರೆ, ಕಂಪ್ಲಿ ಬಳ್ಳಾರಿ ಜಿಲ್ಲೆಗೆ ಸೇರಿಸುತ್ತಿರುವುದು ಒಳ್ಳೆಯದಲ್ಲ. ಇದರಿಂದ ಚರಿತ್ರೆಗೆ ದ್ರೋಹ ಬಗೆದಂತಾಗುತ್ತದೆ’ ಎಂದು ವಿಜಯನಗರ ಜಿಲ್ಲಾ ಹೋರಾಟ ಸಮಿತಿಯ ಮುಖಂಡ ವೈ.ಯಮುನೇಶ ಹೇಳಿದರು.

‘ಅಖಂಡ ಬಳ್ಳಾರಿ ಜಿಲ್ಲೆಯ ಶಾಸಕರು, ಸ್ಥಳೀಯ ಮುಖಂಡರು, ಹೋರಾಟ ಸಮಿತಿಗಳ ಮುಖಂಡರ ಅಭಿಪ್ರಾಯ ಪಡೆದುಕೊಳ್ಳದೆ ಏಕಾಏಕಿ ಜಿಲ್ಲೆ ಘೋಷಿಸಿರುವ ನಿರ್ಧಾರ ಸರಿಯಲ್ಲ. ಇದು ಹಿಟ್ಲರ್‌ ಸರ್ಕಾರ. ನಾನು ಕೂಡ ವೈಯಕ್ತಿಕವಾಗಿ ಅನೇಕ ಸಲ ಸರ್ಕಾರಕ್ಕೆ ಪತ್ರ ಬರೆದು, ಎಲ್ಲರ ಅಭಿಪ್ರಾಯ ಆಲಿಸಿ ಮುಂದುವರೆಯಬೇಕು ಎಂದು ಕೋರಿದ್ದೆ. ಆದರೆ, ಅದಕ್ಕೆ ಮನ್ನಣೆ ನೀಡಿಲ್ಲ. ಕಂಪ್ಲಿ ಕ್ಷೇತ್ರದ ಜನರ ಅಭಿಪ್ರಾಯ ಆಲಿಸಿ, ಅವರ ನಿರ್ಧಾರದಂತೆ ಮುಂದುವರಿಯುವೆ’ ಎಂದು ಕಂಪ್ಲಿ ಶಾಸಕ ಜೆ.ಎನ್‌. ಗಣೇಶ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ವಿಜಯನಗರ ಜಿಲ್ಲೆಗೆ ಸೇರಲಿರುವ ತಾಲ್ಲೂಕುಗಳು
ಹೊಸಪೇಟೆ (ಜಿಲ್ಲಾ ಕೇಂದ್ರ)
ಹಗರಿಬೊಮ್ಮನಹಳ್ಳಿ
ಹೂವಿನಹಡಗಲಿ
‌ಹರಪನಹಳ್ಳಿ
ಕೊಟ್ಟೂರು
ಕೂಡ್ಲಿಗಿ

ಬಳ್ಳಾರಿ ಜಿಲ್ಲೆ ವ್ಯಾಪ್ತಿಗೆ ಬರುವ ತಾಲ್ಲೂಕುಗಳು
ಬಳ್ಳಾರಿ (ಜಿಲ್ಲಾ ಕೇಂದ್ರ)
ಸಿರುಗುಪ್ಪ
ಸಂಡೂರು
ಕುರುಗೋಡು
ಕಂಪ್ಲಿ

* ವಿಜಯನಗರ ಜಿಲ್ಲೆಯಿಂದ ಕಂಪ್ಲಿ ಹೊರಗಿಟ್ಟಿರುವುದು ರಾಜಕೀಯ ಷಡ್ಯಂತ್ರ. ದೂರವಿರುವ ತಾಲ್ಲೂಕು ಸೇರಿಸಿ, ಅತಿ ಹತ್ತಿರದಲ್ಲಿರುವ ಕಂಪ್ಲಿ ಕೈಬಿಟ್ಟಿರುವುದು ಸರಿಯಲ್ಲ.

–ಜೆ.ಎನ್‌. ಗಣೇಶ್‌, ಕಂಪ್ಲಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT