ಬೆಂಗಳೂರು: ಚಿತ್ರ ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪ ಎದುರಿಸುತ್ತಿದ್ದ ಮೂವರ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.
ಈ ಸಂಬಂಧ ಸೌಂದರ್ಯ ಜಗದೀಶ್ ವ್ಯವಹಾರದ ಪಾಲುದಾರರಾದ ವಿ.ಎಸ್.ಸುರೇಶ್, ಎಸ್.ಪಿ.ಹೊಂಬಣ್ಣ ಮತ್ತು ಮ್ಯಾನೇಜರ್ ಎಸ್.ಸುಧೀಂದ್ರ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪುನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ಪ್ರಕಟಿಸಿತು.
‘ಮೃತರು ಬರೆದಿರುವ ಪತ್ರದಲ್ಲಿ ಅರ್ಜಿದಾರರು ಎಲ್ಲಿಯೂ ಆತ್ಮಹತ್ಯೆಗೆ ಕುಮ್ಮುಕ್ಕು ನೀಡಿದ್ದಾರೆ ಎಂಬ ಉಲ್ಲೇಖವಿಲ್ಲ’ ಎಂಬ ಅರ್ಜಿದಾರರ ವಾದ ಮಾನ್ಯ ಮಾಡಿರುವ ನ್ಯಾಯಪೀಠ ಪ್ರಕರಣವನ್ನು ರದ್ದುಗೊಳಿಸಿದೆ. ಅಂತೆಯೇ, ‘ಈ ಆದೇಶದಲ್ಲಿನ ಅಭಿಪ್ರಾಯಗಳು, ಆರೋಪಿಗಳು ಮತ್ತು ಮೃತರ ನಡುವಿನ ಬೇರೆ ವಿವಾದಗಳಿಗೆ ಅನ್ವಯವಾಗುವುದಿಲ್ಲ’ ಎಂದೂ ನ್ಯಾಯಪೀಠ ಸ್ಪಷ್ಟಪಡಿಸಿದೆ.
ವಿಚಾರಣೆ ವೇಳೆ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ ಪರ ವಕೀಲರು, ‘ಸೌಂದರ್ಯ ಜಗದೀಶ್ ಬ್ಲ್ಯಾಕ್‌ಮೇಲ್‌ಗೆ ಒಳಗಾಗಿರುವ ಸಾಧ್ಯತೆ ಇರುವುದರಿಂದ ಆರೋಪಿಗಳು ಪ್ರಕರಣ ರದ್ದು ಕೋರಿ ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸಬೇಕು’ ಎಂದು ಕೋರಿದ್ದರು.
ಇದನ್ನು ಅಲ್ಲಗಳೆದಿದ್ದ ಆರೋಪಿಗಳ ಪರ ವಕೀಲರು, ‘ಸೌಂದರ್ಯ ಜಗದೀಶ್ ಆತ್ಮಹತ್ಯೆ ಮಾಡಿಕೊಂಡ ತಿಂಗಳ ಬಳಿಕ ಡೆತ್ ನೋಟ್ ಆಧರಿಸಿ ಮೂವರ ವಿರುದ್ಧ ಪ್ರಚೋದನೆಯ ಪ್ರಕರಣ ದಾಖಲಿಸಲಾಗಿದೆ. ಆದರೆ, ಡೆತ್ ನೋಟ್‌ನಲ್ಲಿ ಎಲ್ಲೂ ಆತ್ಮಹತ್ಯೆಗೆ ಆರೋಪಿಗಳೇ ಪ್ರಚೋದನೆ ನೀಡಿದ್ದಾರೆ ಎಂಬ ಉಲ್ಲೇಖವಿಲ್ಲ. ಹಾಗಾಗಿ, ಪ್ರಕರಣ ರದ್ದುಗೊಳಿಸಬೇಕು’ ಎಂದು ಮನವಿ ಮಾಡಿದ್ದರು.
ಪ್ರಕರಣವೇನು?: ನಿರ್ಮಾಪಕ ಸೌಂದರ್ಯ ಜಗದೀಶ್ 2024ರ ಏಪ್ರಿಲ್ 18ರಂದು ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಕರಣ ದಾಖಲಾಗಿತ್ತು. 2024ರ ಮೇ 18ರಂದು ಅವರ ಮನೆಯ ವಾರ್ಡ್ ರೋಬ್ ಸ್ವಚ್ಛ ಮಾಡುವಾಗ ಡೆತ್ ನೋಟ್ ಸಿಕ್ಕಿತ್ತು. ಅದರಲ್ಲಿ, ‘ನನ್ನ ಪತಿ ಆತ್ಮಹತ್ಯೆಗೆ ಕಾರಣವಾದ ಆರೋಪಿಗಳ ಹೆಸರು ಉಲ್ಲೇಖಿಸಿದ್ದಾರೆ’ ಎಂದು ಆರೋಪಿಸಿ ಜಗದೀಶ್ ಪತ್ನಿ ಶಶಿರೇಖಾ ಪೊಲೀಸರಿಗೆ ದೂರು ನೀಡಿದ್ದರು. ಇದನ್ನು ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.